ಕೂಡಿಗೆ, ಆ. 1: ಹಾರಂಗಿ ಅಣೆಕಟ್ಟೆಯಿಂದ ಮುಖ್ಯ ನಾಲೆಯ ಮೂಲಕ ದನಕರುಗಳಿಗೆ ಕುಡಿಯಲು ಹಾಗೂ ಕೆರೆಕಟ್ಟೆಗಳು ತುಂಬಲು 1000 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

ಹಾರಂಗಿಯಿಂದ ಸುಮಾರು ಐದು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾರಂಗಿ ಅಚ್ಚುಕಟ್ಟು ಪ್ರದೇಶವು ಶೀತ ಮತ್ತು ತಗ್ಗು ಪ್ರದೇಶವಾಗಿದ್ದು, ಅಂತಹ ಸ್ಥಳಕ್ಕೆ ನೀರು ಹರಿಯುವದರಿಂದ ಈ ಪ್ರದೇಶದಲ್ಲಿ ಭತ್ತವನ್ನು ಬಿಟ್ಟರೇ ಬೇರೆ ಯಾವ ಬೆಳೆಯನ್ನೂ ಬೆಳೆಯಲು ಸಾಧ್ಯವಿಲ್ಲ. ಆದರೆ, ಇದೀಗ ಆ ನೀರು ಸಹ ಇಲ್ಲವಾಗಿದ್ದು, ಭತ್ತವನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರೈತರು ಹಾರಂಗಿ ಕಚೇರಿಯ ಮುಂದೆ ಉಪ ನಾಲೆಗಳಿಗೆ ನೀರನ್ನು ಹರಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭ ನೀರು ಬಳಕೆದಾರರ ಮಹಾಮಂಡಳದ ಮಾಜಿ ನಿರ್ದೇಶಕ ಐ.ಎಸ್.ಗಣೇಶ್, ಗ್ರಾ.ಪಂ ಸದಸ್ಯರಾದ ಹೆಚ್.ಎಸ್. ರವಿ, ಹುದುಗೂರು ಯುವಕ ಸಂಘದ ಅಧ್ಯಕ್ಷ ಗಿರೀಶ್, ರೈತ ಮುಖಂಡರಾದ ಜವರೇಗೌಡ, ಹುಚ್ಚೇಗೌಡ, ಕಾಳಪ್ಪ, ಕುಮಾರ್, ಅಣ್ಣಯ್ಯ, ಎಂ.ಎಸ್. ಮುತ್ತಪ್ಪ, ಧನಂಜಯ್ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಇದ್ದರು.