ಮಡಿಕೇರಿ, ಆ.1 : ನಗರದ ಅರಣ್ಯ ಭವನದ ಸಮೀಪ ಸುಮಾರು 54 ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿರುವ ಬಗ್ಗೆ ಕಾನೂನು ಹೋರಾಟ ನಡೆಸಿದ ಫಲವಾಗಿ ಅರಣ್ಯ ಇಲಾಖೆಯು ಮೂರು ತಿಂಗಳ ಒಳಗಾಗಿ ಒತ್ತುವರಿ ತೆರವುಗೊಳಿಸುವದಾಗಿ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ನೀಡಿದೆ ಎಂದು ಕಾವೇರಿಸೇನೆ ಸಂಚಾಲಕ ಕೆ.ಎ.ರವಿಚಂಗಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒತ್ತುವರಿ ಪ್ರದೇಶವನ್ನು ತೆರವುಗೊಳಿಸದಿದ್ದಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಜನಪ್ರತಿನಿಧಿಯೊಬ್ಬರು ಸೇರಿದಂತೆ ಸುಮಾರು 68 ಕುಟುಂಬಗಳು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ವನ್ಯಪ್ರಾಣಿಗಳ ಸಂಚಾರಕ್ಕೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಒತ್ತುವರಿ ತೆರವುಗೊಳಿಸುವಂತೆ ಕೋರಿ ಕಾವೇರಿಸೇನೆ ಕಳೆದ ಸಾಲಿನಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಈ ಬಗ್ಗೆ ವಿವರಣೆ ಕೇಳಿರುವ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿರುವ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅರಣ್ಯ ಪ್ರದೇಶ ಒತ್ತುವರಿಯಾಗಿರುವದನ್ನು ಒಪ್ಪಿಕೊಂಡಿರುವದಲ್ಲದೆ, ಮುಂದಿನ ಮೂರು ತಿಂಗಳ ಒಳಗಾಗಿ ತೆರವುಗೊಳಿಸುವದಾಗಿ ತಿಳಿಸಿದ್ದಾರೆ ಎಂದರು.
ಇಲಾಖೆಯ ನ್ಯಾಯವಾದಿಗಳು ಸಲ್ಲಿಸಿರುವ ಪ್ರಮಾಣ ಪತ್ರವನ್ನು ಅಂಗೀಕರಿಸಿರುವ ನ್ಯಾಯಾಲಯ ಜಾಗ ತೆರವುಗೊಳಿಸುವಂತೆ ಇಲಾಖೆಗೆ ಸೂಚನೆ ನೀಡಿದೆ. ಅಲ್ಲದೆ ಜಾಗ ಪರಿವರ್ತನೆಯಾಗಿದ್ದಲ್ಲಿ ಆ ಬಗ್ಗೆಯೂ ಮಾಹಿತಿ ನೀಡುವಂತೆ ಆದೇಶಿಸಿದೆ ಎಂದು ರವಿಚಂಗಪ್ಪ ಹೇಳಿದರು.
ಜಾಗ ಪರಿವರ್ತನೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ತಾ.16ಕ್ಕೆ ಮುಂದೂಡಿದ್ದು, ಜಾಗ ತೆರವುಗೊಳಿಸುವಂತೆ ನೀಡಿರುವ ಆದೇಶವು ಕೊಡಗಿನ ಪರಿಸರದ ಉಳಿವಿಗಾಗಿ ಕಾವೇರಿ ಸೇನೆ ನಡೆಸುತ್ತಿರುವ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಹೊಸಬೀಡು ಶಶಿ, ಕೋಲತಂಡ ರಘು ಮಾಚಯ್ಯ, ಮಾಳೆಯಂಡ ಪೂಣಚ್ಚ ಹಾಗೂ ಶೇಷಪ್ಪ ರೈ ಉಪಸ್ಥಿತರಿದ್ದರು.