ಶನಿವಾರಸಂತೆ, ಆ. 1: ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘ ಹಾಗೂ ಕೈಗಾರಿಕಾ ಮಹಾ ಸಂಸ್ಥೆ ಕೊಡಗಿನಲ್ಲಿ 19 ಸ್ಥಾನೀಯ ಸಮಿತಿಗಳಿಂದ 12 ಸಾವಿರ ವರ್ತಕ ಸದಸ್ಯರನ್ನು ಹೊಂದಿಕೊಂಡು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ನಿಸ್ವಾರ್ಥ ಸೇವೆಯಿಂದ ಅಭಿವೃದ್ಧಿ ಸಾಧ್ಯ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಬಸವೇಶ್ವರ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘ ಹಾಗೂ ಕೈಗಾರಿಕಾ ಮಹಾ ಸಂಸ್ಥೆಯ ಕೊಡ್ಲಿಪೇಟೆ ಸ್ಥಾನೀಯ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ರೂ. 1 ಸಾವಿರ ಪಾವತಿಸುವ ಮೂಲಕ ಜಿಲ್ಲಾ ಸಂಘದಲ್ಲಿ ಅಜೀವ ಸದಸ್ಯತ್ವ ಹೊಂದುವ ಅವಕಾಶ ಇದೆ. ಈ ಹಣವನ್ನು ಎಲ್ಲಾ ಸ್ಥಾನೀಯ ಸಮಿತಿಗಳಿಂದ ಸಂಗ್ರಹಿಸಿ ಜಿಲ್ಲಾ ಸಂಘದಲ್ಲಿ ವರ್ತಕರ ಕಲ್ಯಾಣಕ್ಕಾಗಿ ಸುಮಾರು ರೂ. 9 ಲಕ್ಷ, ಕ್ಷೇಮಾಭಿವೃದ್ಧಿ ನಿಧಿ, ಮರಣ ನಿಧಿ, ಪ್ರಕೃತಿ ವಿಕೋಪ ನಿಧಿಗಳನ್ನು ಸ್ಥಾಪಿಸಿ ವ್ಯಾಪಾರಸ್ಥರ ಹಿತಕಾಪಾಡಲು ಠೇವಣಿ ಇಡಲಾಗಿದೆ ಎಂದರು.

ಜಿಲ್ಲಾ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ಒಗ್ಗಟ್ಟಿನಿಂದ, ಬಾಂಧವ್ಯದಿಂದ ವ್ಯಾಪಾರ, ವ್ಯವಹಾರ ನಡೆಸಿ ಗ್ರಾಹಕರಿಗೆ ಉತ್ತಮ ರೀತಿಯ ಸೇವೆ ಸಲ್ಲಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹೆಚ್.ಸಿ. ಯತೀಶ್‍ಕುಮಾರ್ ಮಾತನಾಡಿ, ವರ್ತಕರ ಪರಸ್ಪರ ಸಹಕಾರ ಮನೋಭಾವದಿಂದ ಸಂಘದ ಅಭಿವೃದ್ಧಿ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ, ಹಿರಿಯ ವರ್ತಕರಾದ ಎಂ.ಹೆಚ್. ಜಾವಿದ್ ಅಹಮದ್ ಹಾಗೂ ತಾಂಡವಮೂರ್ತಿ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಸಂಘಟನಾ ಕಾರ್ಯದರ್ಶಿ ಪ್ರಮೋದ್, ಸ್ಥಾನೀಯ ಸಮಿತಿ ಉಪಾಧ್ಯಕ್ಷ ಜಿ.ಆರ್. ಸುಬ್ರಮಣ್ಯ, ಕೆ.ಬಿ. ಸುಬ್ರಮಣ್ಯಾಚಾರ್, ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ದಿವಾಕರ, ಖಜಾಂಚಿ ಡಿ.ವಿ. ದಿನೇಶ್, ನಿರ್ದೇಶಕರಾದ ಮಹಮ್ಮದ್ ಉಸ್ಮಾನ್, ಸಿ.ಎಸ್. ವಿಜಯಕುಮಾರ್, ಬಿ.ಕೆ. ಯತೀಶ್, ಹೆಚ್.ಜೆ. ಪ್ರವೀಣ್, ಹೆಚ್.ಎಂ. ರಾಜಶೇಖರ್, ಯೋಗೇಶ್ ಆಚಾರ್ಯ ಉಪಸ್ಥಿತರಿದ್ದರು.