ಕುಶಾಲನಗರ, ಜು. 31: ರಾಷ್ಟ್ರೀಯ ವೈದ್ಯ ಆಯೋಗ ಮಸೂದೆಯನ್ನು ಲೋಕಸಭೆ ಅಂಗೀಕರಿಸಿರುವದನ್ನು ಪ್ರತಿಭಟಿಸಿ ಭಾರತೀಯ ವೈದ್ಯ ಸಂಘ ಕರೆ ನೀಡಿದ್ದ ಸಾಂಕೇತಿಕ ಮುಷ್ಕರಕ್ಕೆ ಕುಶಾಲನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ದಿಢೀರ್ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ರೋಗಿಗಳಿಗೆ ಅನಾನುಕೂಲ ಉಂಟಾಗಲಿರುವ ಕಾರಣ ಕುಶಾಲನಗರ ವ್ಯಾಪ್ತಿಯ ಖಾಸಗಿ ಕ್ಲಿನಿಕ್‍ಗಳು ಎಂದಿನಂತೆ ಸೇವೆಗೆ ಲಭ್ಯವಿತ್ತು.

ಕುಶಾಲನಗರ ಸುತ್ತಮುತ್ತ ಪ್ರದೇಶದಲ್ಲಿ ವೈರಲ್ ಫಿವರ್ ಮತ್ತಿತರ ಸಾಂಕ್ರಾಮಿಕ ರೋಗಗಳಿಂದ ರೋಗಿಗಳು ನಲುಗುತ್ತಿದ್ದಾರೆ. ರೋಗಿಗಳಿಗೆ ತಪಾಸಣೆಗೆ ದಿನ ನಿಗಧಿಪಡಿಸಲಾಗಿತ್ತು. ಹಲವು ರೋಗಿಗಳಿಗೆ ಅನಾನುಕೂಲ ಉಂಟಾಗದಂತೆ ಈ ನಿಟ್ಟಿನಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ಕುಶಾಲನಗರದ ಖಾಸಗಿ ವೈದ್ಯರಾದ ಡಾ.ಹರಿ ಎ. ಶೆಟ್ಟಿ ತಿಳಿಸಿದ್ದಾರೆ.

ಸೋಮವಾರಪೇಟೆ : ರಾಷ್ಟ್ರೀಯ ವೈದ್ಯಕೀಯ ಆಯೋಗದ ವಿಧೇಯಕ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ಬುಧವಾರ ಕರೆ ನೀಡಿದ್ದ ದೇಶಾದ್ಯಂತ ಮುಷ್ಕರಕ್ಕೆ ಸೋಮವಾರಪೇಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಖಾಸಗಿ ಆಸ್ಪತ್ರೆಗಳು ಬಂದ್ ಮಾಡಿ ಮುಷ್ಕರ ನಡೆಸಬೇಕೆಂದು ಸೂಚಿಸಲಾಗಿತ್ತು. ಇಲ್ಲಿನ ಕೆಲವು ಕ್ಲಿನಿಕ್‍ಗಳು 11 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಿದರೆ ಇನ್ನು ಕೆಲವು ಬೆಳಗಿನಿಂದಲೇ ಮುಚ್ಚಲ್ಪಟ್ಟಿದ್ದವು. ಸರಕಾರಿ ಆಸ್ಪತ್ರೆಯಲ್ಲಿ ಎಂದಿನಂತೆ ವೈದ್ಯರುಗಳು ಕಾರ್ಯ ನಿರ್ವಹಿಸಿದರು.