ನಾಪೋಕ್ಲು, ಜು. 31: ಇಲ್ಲಿಗೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಗ್ರಾಮದಲ್ಲಿ (ಕೂಡು ನಾಟಿ) ಸಹಕಾರ ಪದ್ಧತಿಯಲ್ಲಿ ಗ್ರಾಮಸ್ಥರು ನಾಟಿ ಕಾರ್ಯ ಮಾಡಿದರು. 32 ಜನ ಗ್ರಾಮಸ್ಥರು ಒಗ್ಗೂಡಿ ಸುಮಾರು 3 ಎಕರೆ ವ್ಯಾಪ್ತಿಯ ಗದ್ದೆಯಲ್ಲಿ ನಾಟಿ ಮಾಡಿದ್ದಾರೆ. ನರಿಯಂದಡ ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮಸ್ಥರೇ ಈ ಜನಪರ ಕೆಲಸ ನಿರ್ವಹಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ನರಿಯಂದಡ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ತೋಟಂಬೈಲ್ ಅನಂತಕುಮಾರ್ ಅವರ ಗದ್ದೆಯನ್ನು ನಾಟಿ ಮಾಡಿ ಗ್ರಾಮಸ್ಥರು ಸೈ ಎನಿಸಿಕೊಂಡಿದ್ದಾರೆ. ಕೊಲೆ, ಸುಲಿಗೆ, ಅತ್ಯಾಚಾರ, ಕಳವು ಮುಂತಾದ ದುಷ್ಕøತ್ಯಗಳೇ ರಾರಾಜಿಸುತ್ತಿರುವ ಇಂದಿನ ದಿನಗಳಲ್ಲಿ ಕೃಷಿ ಕೆಲಸಕ್ಕೂ ಗ್ರಾಮಸ್ಥರು ಸಹಕರಿಸುತ್ತಿರುವದು ವಿಶೇಷ.
ಆನೆ ಹಾವಳಿ, ಕಾಡು ಹಂದಿ ಉಪಟಳ ಸೇರಿದಂತೆ ಹಲವು ಸಮಸ್ಯೆಗಳು ಭತ್ತದ ನಾಟಿ ಕೆಲಸಕ್ಕೆ ಅಡಚಣೆಯಾಗಿದೆ. ಜೊತೆಗೆ ಕೂಲಿ ಕಾರ್ಮಿಕರ ಅಭಾವವೂ ರೈತರನ್ನು ಬಾಧಿಸುತ್ತಿದೆ. ಇವೆಲ್ಲದರ ನಡುವೆ ಗ್ರಾಮಸ್ಥರು ಒಗ್ಗೂಡಿ ಒಂದೇ ದಿನದಲ್ಲಿ ನಾಟಿ ಕೆಲಸ ಪೂರ್ಣ ಗೊಳಿಸಿರುವದು ವಿಶೇಷವಾಗಿದೆ.
ಭತ್ತದ ನಾಟಿ ಕಾರ್ಯದಲ್ಲಿ ಗ್ರಾಮದ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿಲಿಯಂಡ್ರ ಶರಣ್, ಸ್ಥಳೀಯ ಗ್ರಾಮಸ್ಥರು ಪಾಲ್ಗೊಂಡಿದ್ದರು. ನರಿಯಂದಡ ಗ್ರಾಮದಲ್ಲಿ ಹಲವು ವರ್ಷಗಳಿಂದ ಕೂಡು ನಾಟಿ ಪದ್ಧತಿಯನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ ಗ್ರಾಮದಲ್ಲಿ ಪ್ರೀತಿ, ವಿಶ್ವಾಸ, ಬಾಂಧವ್ಯ ಹೆಚ್ಚಲು ಸಹಕಾರಿಯಾಗಿದೆ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅಭಿಪ್ರಾಯಪಟ್ಟರು.
- ದುಗ್ಗಳ