ಗುಡ್ಡೆಹೊಸೂರು, ಜು. 31: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಬಿಡುವಂತೆ ಈ ವಿಭಾಗದ ರೈತರು ಕುಶಾಲನಗರದಲ್ಲಿ ನೀರಾವರಿ ಕಚೇರಿಗೆ ತೆರಳಿ ಮನವಿಪತ್ರ ನೀಡಿದರು.

ಈ ವಿಭಾಗದ ಕಾರ್ಯಪಾಲಕ ಅಭಿಯಂತರರನ್ನು ರೈತರು ತರಾಟೆಗೆ ತೆಗೆದುಕೊಂಡು ಗದ್ದೆಗಳಲ್ಲಿ ಸಸಿಮಡಿ ತಯಾರಿಸಿಕೊಂಡು ನೀರಿಗಾಗಿ ಕಾಯುತ್ತಿರುವ ಸಂದರ್ಭ ನಾಲೆಯೊಳಗೆ ಸೇತುವೆ ಕಾಮಗಾರಿ ನಡೆಸಲು ಅನುವುಮಾಡಿಕೊಟ್ಟ ಬಗ್ಗೆ ಆಕ್ಷೇಪಿಸಿದರು.

ಕಬ್ಬಿನ ಗದ್ದೆ ಎಂಬ ಸ್ಥಳದಲ್ಲಿ ಒಟ್ಟು 5 ಸೇತುವೆಗಳಿಗೆ ಅಡಿಪಾಯದ ಕಾಮಗಾರಿ ನಡೆಯುತ್ತಿದೆ. ತಕ್ಷಣದಿಂದಲೇ ಈ ಕಾಮಗಾರಿಯನ್ನು ನಿಲ್ಲಿಸಿ ಕಾಲುವೆಗೆ ನೀರು ಬಿಡುವಂತೆ ರೈತರು ಆಗ್ರಹಿಸಿದ್ದಾರೆ. ನಿಗಮದ ಮುಖ್ಯ ಇಂಜಿನಿಯರ್ ರಾಜುಗೌಡ ಮತ್ತು ಕಿರಣ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭ ಇಲ್ಲಿನ ರೈತರಾದ ಈರಪ್ಪ, ನೆಹರು, ಲೋಹಿತ್, ಪೊನ್ನಪ್ಪ, ಚೇತನ್, ಲಕ್ಷ್ಮಣ್, ಪೂವಯ್ಯ, ವಚನ, ಆಬ್ರಟ್ ರಾಮಚಂದ್ರ ಮುಂತಾದವರು ಹಾಜರಿದ್ದರು. ಕಚೇರಿ ವ್ಯವಸ್ಥಾಪಕಿ ಪುಷ್ಪ ಅವರಿಗೆ ಮನವಿಪತ್ರ ನೀಡಲಾಯಿತು.