ಮಡಿಕೇರಿ, ಜು. 31: ಕೊಡಗು ಜಿಲ್ಲೆಯಲ್ಲಿ ವಾಡಿಕೆಯಂತೆ ಪ್ರಸಕ್ತ ಸಾಲಿನಲ್ಲಿ ಪುಷ್ಯ ಮಳೆಯೂ ಕೈಕೊಡುವದರೊಂದಿಗೆ; ಕೊನೆಯ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಸುರಿಯಲಾರಂಭಿಸಿದ್ದು; ಆ. 2ಕ್ಕೆ ಕೊನೆಗೊಳ್ಳಲಿದೆ. ಮುಂಗಾರು ಹಿನ್ನಡೆಯಿಂದ ಕೃಷಿ ಚಟುವಟಿಕೆಯತ್ತ ಪ್ರತಿಕೂಲ ಪರಿಣಾಮ ಬೀರುವಂತಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಶೇ. 10.59 ಮಾತ್ರ ಒಟ್ಟಾರೆ ಕೃಷಿಯಲ್ಲಿ ಸಾಧನೆ ಗೋಚರಿಸಿದೆ.ಪ್ರಸಕ್ತ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮುಂಗಾರು ಮಳೆಯಲ್ಲಿ ಕೂಡ ಶೇ. 45.7 ರಷ್ಟು ಹಿನ್ನಡೆ ಕಂಡುಬಂದಿದೆ. ಜಿಲ್ಲೆಯಲ್ಲಿ 34500 ಹೆಕ್ಟೇರ್ ಮುಂಗಾರು ಕೃಷಿಯ ಪೈಕಿ 3652 ಹೆಕ್ಟೇರ್ ಮಾತ್ರ ಗುರಿ ಸಾಧಿಸಿದ್ದು; ಈ ಪೈಕಿ 822 ಹೆಕ್ಟೇರ್ ಭತ್ತದ ಕೃಷಿಯಷ್ಟೇ ಮುಗಿದಿದೆ. ಮುಸುಕಿನ ಜೋಳ 4000 ಹೆಕ್ಟೇರ್ ಪೈಕಿ 2830 ಹೆಕ್ಟೇರ್ ಪ್ರದೇಶದಲ್ಲಿ ಪ್ರಗತಿ ಕಂಡುಬಂದಿದೆ. ಆ ದಿಸೆಯಲ್ಲಿ ಭತ್ತದ ಸಾಧನೆ ಶೇ. 2.70 ಮಾತ್ರವಾಗಿದ್ದು; 70.75 ರಷ್ಟು ಜೋಳ ಕೃಷಿ ಮಾಡಲಾಗಿದೆ.ಮಡಿಕೇರಿ ತಾಲೂಕು : ಮಡಿಕೇರಿ ತಾಲೂಕಿನಲ್ಲಿ ಶೇ. 20 ರಷ್ಟು ಸಸಿಮಡಿಯೊಂದಿಗೆ 1300 ಹೆಕ್ಟೇರ್‍ನಲ್ಲಿ ಮಾತ್ರ ಕೃಷಿ ಮಾಡಲಾಗಿದ್ದು; ಈ ತಾಲೂಕಿನಲ್ಲಿ ಆರು ಸಾವಿರದ ಐದುನೂರು ಹೆಕ್ಟೇರ್ ಭತ್ತ ಬೆಳೆಯ ಗುರಿ ಹೊಂದಲಾಗಿದೆ.
ಸೋಮವಾರಪೇಟೆ : ಅಂತೆಯೇ ಸೋಮವಾರಪೇಟೆ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಭತ್ತದ ಕೃಷಿಯೊಂದಿಗೆ; 4 ಸಾವಿರ ಹೆಕ್ಟೇರ್ ಮುಸುಕಿನ ಜೋಳ ಗುರಿ ಹೊಂದಲಾಗಿದೆ. ಈ ತಾಲೂಕಿನಲ್ಲಿ 6690 ಹೆಕ್ಟೇರ್‍ಗೆ ಆಗುವಷ್ಟು ಮಾತ್ರ ಸಸಿಮಡಿಯ ಸಿದ್ಧತೆ ಕಂಡು ಬಂದಿದೆ. ತಾಲೂಕಿನಲ್ಲಿ 480 ಹೆಕ್ಟೇರ್ ನಾಟಿ ಮುಗಿದಿದೆ.
ವೀರಾಜಪೇಟೆ : ಇನ್ನು ವೀರಾಜಪೇಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷದ ಮುಂಗಾರುವಿನ ಮಧ್ಯದಲ್ಲಿ ಕೆಲವೆಡೆ ಆಶಾದಾಯಕ ಮಳೆಯಾದರೂ; ಬಳಿಕ ವ್ಯತ್ಯಾಸ ಉಂಟಾಗಿದೆ. ಪರಿಣಾಮ 14 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಗುರಿಯಿದ್ದರೂ; ಪ್ರಗತಿ ಮಾತ್ರ 142 ಹೆಕ್ಟೇರ್ ವ್ಯಾಪ್ತಿಯಲ್ಲಿ ಗೋಚರಿಸಿದೆ. ಈ ತಾಲೂಕಿನಲ್ಲಿ 590 ಹೆಕ್ಟೇರ್ ಮಾತ್ರ ಸಸಿಮಡಿ ಸಿದ್ಧಗೊಂಡಿದೆ. ಹೀಗಾಗಿ ಕೊಡಗಿನಲ್ಲಿ ಕೃಷಿ ಚಟುವಟಿಕೆಗೆ ವ್ಯತಿರಿಕ್ತ ಪರಿಣಾಮ ಎದುರಾಗಿದ್ದು; ಮಳೆ ಕುಂಠಿತಗೊಂಡಿರುವ ಕಾರಣ ರೈತ ಸಮುದಾಯದ ಆತಂಕ ಹೆಚ್ಚಾಗಿದೆ.
ಮಳೆ ವ್ಯತ್ಯಾಸ : ವಾಡಿಕೆಯಂತೆ ಕೊಡಗು ಜಿಲ್ಲೆಯಲ್ಲಿ ಈ ವೇಳೆ ಸರಾಸರಿ 70 ಇಂಚು ಮಳೆಯಾಗಬೇಕಿತ್ತು. ಬದಲಾಗಿ ಈಗಿನ ತನಕ 37.48 ಇಂಚು ಸರಾಸರಿ ಮಳೆ ಯೊಂದಿಗೆ ಶೇ. 45.7 ರಷ್ಟು ಕಡಿಮೆಯಾಗಿದೆ. 2017ರಲ್ಲಿ ಈ ಅವಧಿಗೆ 48.84 ಇಂಚು ಮಳೆಯಾದರೆ ಕಳೆದ ವರ್ಷ 94.18 ಇಂಚು ದಾಖಲಾಗಿತ್ತು.
(ಮೊದಲ ಪುಟದಿಂದ) ಮಡಿಕೇರಿ ತಾಲೂಕಿನಲ್ಲಿ ವಾಡಿಕೆಯಂತೆ ಈ ಅವಧಿಗೆ 99.74 ಇಂಚು ಸರಾಸರಿ ಮಳೆಯಾಗಬೇಕಿದ್ದು; ಪ್ರಸಕ್ತ 49.06 ಇಂಚು ಮಾತ್ರ ದಾಖಲಾಗಿದೆ. 2017ರಲ್ಲಿ ಈ ಅವಧಿಗೆ 64.18 ಇಂಚು ಹಾಗೂ ಕಳೆದ ವರ್ಷ 128 ಇಂಚು ಮಳೆಯಾಗಿತ್ತು. ಇತ್ತ ಸೋಮವಾರಪೇಟೆ ತಾಲೂಕಿನಲ್ಲಿ ವಾಡಿಕೆಯಂತೆ ಈ ಹೊತ್ತಿಗೆ 49.16 ಇಂಚು ಮಳೆಯಾಗಬೇಕಿದ್ದು; ಪ್ರಸಕ್ತ ಕೇವಲ 23.72 ಇಂಚು ದಾಖಲಾಗಿದೆ. 2017ರಲ್ಲಿ ಈ ಅವಧಿಗೆ 40.59 ಇಂಚು ಹಾಗೂ ಕಳೆದ ವರ್ಷ 73.29 ಇಂಚು ಸರಾಸರಿ ತಾಲೂಕಿನಾದ್ಯಂತ ಮಳೆಯಾಗಿತ್ತು.
ವೀರಾಜಪೇಟೆ ತಾಲೂಕಿನಲ್ಲಿ ಮುಂಗಾರು ವಾಡಿಕೆಯಂತೆ 58.68 ಇಂಚು ಮಳೆಯಾಗಬೇಕಿದ್ದು; ಪ್ರಸಕ್ತ ವರ್ಷದಲ್ಲಿ 38.66 ಇಂಚು ದಾಖಲಾಗಿದೆ. ಈ ತಾಲೂಕಿನಲ್ಲಿ 2017ರಲ್ಲಿ ಈ ಅವಧಿಗೆ 41.86 ಇಂಚು ಹಾಗೂ 2018ರಲ್ಲಿ 91.02 ಇಂಚು ಮಳೆಯಾಗಿತ್ತು. ಈ ಎಲ್ಲಾ ಕಾರಣದಿಂದ ಕೊಡಗಿನಲ್ಲಿ ಮುಂಗಾರು ಬೆಳೆಯಲ್ಲಿ ಹಿನ್ನಡೆಯೊಂದಿಗೆ; ವರ್ಷದಿಂದ ವರ್ಷಕ್ಕೆ ಗದ್ದೆಗಳು ಪಾಳು ಬಿಡುವಂತಾಗಿದೆ. ಇನ್ನು ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಏಳು ಗ್ರಾ.ಪಂ. ವ್ಯಾಪ್ತಿಯ 30ಕ್ಕೂ ಅಧಿಕ ಗ್ರಾಮಗಳಲ್ಲಿ ಕಳೆದ ಪ್ರಾಕೃತಿಕ ವಿಕೋಪದಿಂದ ಹಾನಿಗೊಂಡಿರುವ ಭತ್ತ ಗದ್ದೆಗಳಲ್ಲಿ ಈ ವರ್ಷ ನಾಟಿ ಮಾಡದಿರುವದು ಕಂಡು ಬಂದಿದೆ. ಒಟ್ಟಾರೆ ಜಿಲ್ಲೆಯ ಮಾನಿಗದ್ದೆಗಳಲ್ಲಿ (ಒಣಭೂಮಿ) ಮಳೆ ನೀರಿನ ಅಭಾವದಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿರುವದಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.