ಚೇರಂಬಾಣೆ, ಜು. 31: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಚೇರಂಬಾಣೆಯ ಕೊಡವ ಸಮಾಜದ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ಆಯೋಜಿಸಲಾಗಿದ್ದ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಅವರು, ತಮ್ಮ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕನ್ನಡಿಗರ ಸಮಸ್ಯೆ, ಉದ್ಯೋಗದತ್ತ ಆಶಯ ವ್ಯಕ್ತಪಡಿಸಿದರು.ಕರ್ನಾಟಕದಲ್ಲಿನ ಎಲ್ಲಾ ಸರ್ಕಾರಿ ಕಚೇರಿಗಳ ವ್ಯವಹಾರ ಕನ್ನಡದಲ್ಲಿಯೇ ನಡೆಯಬೇಕು ಎಂಬ ಬಿಗಿ ನಿಲುವು ಹೊರಹಾಕಿದ ಸಮ್ಮೇಳನಾಧ್ಯಕ್ಷರು, ಕಚೇರಿಯಿಂದ ಹೊರಡುವ ಸುತ್ತೋಲೆ, ನ್ಯಾಯಾಲಯದ ಆದೇಶ, ಪತ್ರಿಕೆಗಳ ಜಾಹೀರಾತುಗಳೆಲ್ಲವೂ ಕನ್ನಡಮ ಯವಾಗಬೇಕು. ಸರ್ಕಾರಿ ಸಭೆಗಳಲ್ಲಿ ಅಧಿಕಾರಿಗಳು ಕನ್ನಡವನ್ನೇ ಬಳಸಬೇಕು. ಕನ್ನಡೇತರರಿಗೆ ಭಾಷೆಯ ತೊಡಕು ಆಗುವದರಿಂದ ರಾಜ್ಯದ ಎಲ್ಲಾ ಕಚೇರಿ ಗಳ ಉದ್ಯೋಗಗಳನ್ನು ಕನ್ನಡಿಗರಿಗೇ ನೀಡಬೇಕು ಎಂದು ಆಗ್ರಹಿಸಿದರು.
ಎಲ್ಲಾ ಕನ್ನಡಿಗರು ಕನ್ನಡವನ್ನು ಓದುವ, ಬರೆಯುವ, ಮಾತನಾಡುವ ಜ್ಞಾನ ಪಡೆಯಬೇಕು. ಪ್ರತಿ ಮನೆಯಲ್ಲೂ ಕನ್ನಡ ದಿನಪತ್ರಿಕೆಯನ್ನು ಖರೀದಿಸಿ ಓದಬೇಕು. ಕನ್ನಡ ನಾಮಫಲಕಗಳನ್ನು ತಪ್ಪಿಲ್ಲದಂತೆ ಅಂಗಡಿಗಳಲ್ಲಿ ಹಾಕುವದು ಕಡ್ಡಾಯವಾಗಬೇಕು. ಮಾಧ್ಯಮ ಕ್ಷೇತ್ರದಲ್ಲೂ ತಪ್ಪಿಲ್ಲದಂತೆ ಕನ್ನಡವನ್ನು ಬಳಸಬೇಕು. ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷೆಯ ಕಲಿಕೆ ಕಡ್ಡಾಯವಾಗಬೇಕು. ಆಂಗ್ಲಭಾಷೆಯ ಕಲಿಕೆ ಅಗತ್ಯವಾದರೂ ಮಾತೃ ಭಾಷೆಯನ್ನು ವ್ಯಾಕರಣಬದ್ಧವಾಗಿ ಕಲಿಯಬೇಕು ಎಂದು ಆಶಿಸಿದರು.
ಕೊಡಗಿನಲ್ಲಿ ಉದ್ಯೋಗ ಸೃಷ್ಟಿಗೆ ಸಣ್ಣ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆಯ ಅಗತ್ಯವಿದೆ. ಪ್ರಾಕೃತಿಕ ಸಂಪತ್ತನ್ನು ಉಳಿಸಿಕೊಳ್ಳಬೇಕಿದೆ. ಜಿಲ್ಲೆಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಕಾಫಿ, ಕರಿಮೆಣಸಿಗೆ ಉತ್ತಮ ಬೆಲೆ ದೊರೆಯಬೇಕಿದೆ. ವನ್ಯಮೃಗಗಳ ಹಾವಳಿಯಿಂದ ಕೃಷಿ ಫಸಲು ನಷ್ಟಗೊಳ್ಳುವದನ್ನು ತಪ್ಪಿಸಬೇಕಿದೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣ ಆಗಬೇಕಿದೆ. ಕೊಡಗಿನ ಎಲ್ಲಾ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ ಎಂದು ಸಮ್ಮೇಳನದ ಅಧ್ಯಕ್ಷರಾದ ಕಿಗ್ಗಾಲು ಗಿರೀಶ್ ಅವರು ತಮ್ಮ ಭಾಷಣದಲ್ಲಿ ಕಾಳಜಿ ವ್ಯಕ್ತಪಡಿಸಿದರು.