ಚೇರಂಬಾಣೆ, ಜು. 31: ಹಚ್ಚಹಸಿರಿನ ಪರಿಸರ, ಮದುವಣ ಗಿತ್ತಿಯಂತೆ ಸಿಂಗಾರಗೊಂಡಿದ್ದ ಸಣ್ಣ ಪಟ್ಟಣ, ಚೇರಂಬಾಣೆಯಲ್ಲಿ ಇಂದು ನಡೆದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡಾಭಿಮಾನಿ ಗಳಲ್ಲಿ ಭಾಷೆ, ಸಂಸ್ಕøತಿಯ ಬಗ್ಗೆ ಇರುವ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿತು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ಆಯೋಜಿಸ ಲಾಗಿದ್ದ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಳೆಯ ಬಿಡುವಿನ ಹಿನ್ನೆಲೆ ಯಶಸ್ಸು ಕಂಡಿತು.ಸಮ್ಮೇಳನಾಧ್ಯಕ್ಷರಾಗಿದ್ದ ಹಿರಿಯ ಸಾಹಿತಿ, ನಿವೃತ್ತ ಯೋಧ ಕಿಗ್ಗಾಲು ಗಿರೀಶ್ ಅವರನ್ನು ತೆರೆದ ವಾಹನದಲಿ,್ಲ ಚೇರಂಬಾಣೆಯ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಸಮ್ಮೇಳನ ನಡೆದ ಬೇಂಗ್ನಾಡ್ ಕೊಡವ ಸಮಾಜದವರೆಗೆ ಕರೆತರಲಾಯಿತು. ಅರುಣ ಪದವಿ ಪೂರ್ವ ಕಾಲೇಜಿನಿಂದ ಸುಮಾರು ಒಂದೂವರೆ ಕಿ.ಮೀ.ನಷ್ಟು ದೂರ ದವರೆಗೆ ನಡೆದ ಕನ್ನಡಾಭಿಮಾನಿಗಳ ಮೆರವಣಿಗೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಭ್ರಮದಿಂದ ಭಾಗಿಯಾಗಿದ್ದರು. ಬಹುಭಾಷೆ ಯನ್ನಾಡುವ ಮಂದಿ ಈ ಭಾಗದಲ್ಲಿ ನೆಲೆಸಿದ್ದರೂ ಸಹ ಕನ್ನಡಕ್ಕೆ ಮೇರು ಸ್ಥಾನ ನೀಡಿರುವದು ಮೆರವಣಿಗೆಯಲ್ಲಿ ಪ್ರತಿಫಲನಗೊಳ್ಳುತ್ತಿತ್ತು.
ಕರುನಾಡಿನ ಧ್ವಜಗಳನ್ನು ಹಿಡಿದು ತಾಯಿ ಭುವನೇಶ್ವರಿಗೆ ಜೈಕಾರ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದ ಕನ್ನಡಾಭಿಮಾನಿಗಳು, ‘ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ, ಕನ್ನಡಾಂಬೆಗೆ ಜೈ, ಕರುನಾಡಿಗೆ ಜೈ, ಕಾವೇರಿ ಮಾತೆಗೆ ಜೈ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸಿದರು. ಇದರೊಂದಿಗೆ ಕನ್ನಡ ಶಾಲೆಗಳ ಉಳಿವಿನ ಬಗ್ಗೆಯೂ ಜಾಗೃತಿಯ ಉದ್ಘೋಷಗಳು ಮೆರವಣಿಗೆಯಲ್ಲಿ ಕೇಳಿಬಂದವು.
ಸಮ್ಮೇಳನದ ಅಂಗವಾಗಿ ಚೇರಂಬಾಣೆ ಪಟ್ಟಣವನ್ನು ತಳಿರುತೋರಣಗಳಿಂದ ಸಿಂಗರಿಸ ಲಾಗಿತ್ತು. ಕೆಂಪು ಮತ್ತು ಹಳದಿ ಬಣ್ಣದ ಕನ್ನಡ ಧ್ವಜಗಳು ಎಲ್ಲೆಲ್ಲೂ ಕಂಡುಬಂದವು. ಪೂಜಾ ಕುಣಿತ, ಡೊಳ್ಳು ಕುಣಿತ, ಕಳಸ ಹೊತ್ತ ಮಹಿಳೆಯರು, ಸಮವಸ್ತ್ರ ಸಹಿತ ಬ್ಯಾಂಡ್ಸೆಟ್ನೊಂದಿಗೆ ಭಾಗಿ ಯಾಗಿದ್ದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕನ್ನಡದ ಮೆರವಣಿಗೆಗೆ ಇನ್ನಷ್ಟು ಕಳೆ ತಂದಿದ್ದರು.
ತಾಲೂಕು ತಹಶೀಲ್ದಾರ್ ಮಹೇಶ್ ಅವರು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು. ಬೇಂಗೂರು ಗ್ರಾ.ಪಂ. ಸದಸ್ಯರಾದ ನೀಲಮ್ಮ, ಸಂತೋಷ್ಕುಮಾರ್ ಉಪಸ್ಥಿತರಿದ್ದರು. ಸಮ್ಮೇಳನಾಧ್ಯಕ್ಷ ಕಿಗ್ಗಾಲು ಗಿರೀಶ್ ಅವರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ಸಾಗರ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ತೆರೆದ ವಾಹನದಲ್ಲಿದ್ದರು.
ಇದಕ್ಕೂ ಮುನ್ನ ರಾಷ್ಟ್ರ ಧ್ವಜಾರೋಹಣವನ್ನು ಬೇಂಗೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ನಾಡ ಧ್ವಜಾ ರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ಸಾಗರ್, ಕನ್ನಡ ಸಾಹಿತ್ಯ ಪರಿಷತ್ನ ಧ್ವಜಾ ರೋಹಣವನ್ನು ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ನೆರವೇರಿಸಿ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಅರುಣ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರಗೀತೆ, ಪ್ರೌಢಶಾಲೆ ವಿದ್ಯಾರ್ಥಿಗಳು ನಾಡ ಗೀತೆ ಹಾಡಿದರು.(ಮೊದಲ ಪುಟದಿಂದ) ಸಮ್ಮೇಳನದ ಅಂಗವಾಗಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ, ನೆಲ, ಜಲಕ್ಕೆ ಸಂಬಂಧಿಸಿದಂತೆ ವಿಶೇಷ ಸೇವೆ ಸಲ್ಲಿಸಿರುವ ಸಾಧಕರ ಹೆಸರಿನಲ್ಲಿ ದ್ವಾರಗಳನ್ನು ನಿರ್ಮಿಸಲಾಗಿತ್ತು. ದಿ. ಕುಟ್ಟನ ರವೀಂದ್ರ ಮಹಾದ್ವಾರವನ್ನು ಗ್ರಾ.ಪಂ. ಉಪಾಧ್ಯಕ್ಷೆ ಟಿ.ಪಿ. ಲಕ್ಷ್ಮೀ ಉದ್ಘಾಟಿಸಿದರು. ಸದಸ್ಯರಾದ ಸುಮನ್, ಶೈಲ, ಚೀಯಣ್ಣ ಅವರುಗಳು ಉಪಸ್ಥಿತರಿದ್ದರು.
ಸಮ್ಮೇಳನ ನಡೆದ ಕೊಡವ ಸಮಾಜದಲ್ಲಿ ವಿವಿಧ ಲೇಖಕರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ತೆರೆಯಲಾಗಿತ್ತು. ತಾಲೂಕು ಪಂಚಾಯಿತಿ ಸದಸ್ಯ ದಬ್ಬಡ್ಕ ಶ್ರೀಧರ್, ಪುಸ್ತಕ ಮಳಿಗೆ ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯರಾದ ದಮಯಂತಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿರುವ ಭಾರತೀಸುತ ಅವರ ಹೆಸರಿನಲ್ಲಿ ನಿರ್ಮಿಸಲಾಗಿದ್ದ ಸಭಾಂಗಣವನ್ನು ಕೊಡವ ಸಮಾಜದ ಉಪಾಧ್ಯಕ್ಷ ಬೆಳ್ಯಪ್ಪ ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯರಾದ ಪದ್ಮಾವತಿ, ಪೂರ್ಣಿಮ ಅವರುಗಳು ಈ ಸಂದರ್ಭ ಇದ್ದರು. ಪಂಜೆ ಮಂಗೇಶರಾಯರ ನೆನಪಿಗಾಗಿ ನಿರ್ಮಿಸಲಾಗಿದ್ದ ಪ್ರಧಾನ ವೇದಿಕೆಯನ್ನು ಗ್ರಾ.ಪಂ. ಅಧ್ಯಕ್ಷ ಕೆ.ಬಿ. ಅಶೋಕ್ ಉದ್ಘಾಟಿಸಿದರು. ಸದಸ್ಯರಾದ ಮಿತ್ರ ಚಂಗಪ್ಪ, ಕೆ.ಎಂ. ಸುಗುಣ ಅವರುಗಳು ಭಾಗವಹಿಸಿದ್ದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ನಂತರ ಕವಿ ಪಂಜೆ ಮಂಗೇಶರಾಯ ಪ್ರಧಾನ ವೇದಿಕೆಯಲ್ಲಿ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಸಾಹಿತ್ಯಿಕ ಕಾರ್ಯಕ್ರಮಗಳು ನಡೆದವು.
-ವಿಜಯ್ ಹಾನಗಲ್