ಮಡಿಕೇರಿ, ಜು. 31: ಪ್ರಸಕ್ತ ವರ್ಷ ಮುಂಗಾರು ಮಳೆಯ ಅವಧಿ ಆರಂಭಗೊಂಡು ಇದೀಗ ಎರಡು ತಿಂಗಳು ಪೂರ್ಣಗೊಂಡಿದೆ. ವಾಡಿಕೆಯಂತೆ ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದ ಆಗಸ್ಟ್ - ಸೆಪ್ಟಂಬರ್ ತನಕವೂ ಮುಂಗಾರು ಕಾಣಿಸಿಕೊಳ್ಳುತ್ತದೆ. ಈ ಬಾರಿ ಜುಲೈ ತಿಂಗಳು ಪೂರ್ಣಗೊಂಡಿದ್ದು; ಜಿಲ್ಲೆಯಲ್ಲಿ ಮಳೆ ತೀರಾ ಇಳಿಮುಖವಾಗಿದೆ. 2018ರಲ್ಲಿ ಜನವರಿ ಆರಂಭದಿಂದ ಈ ಅವಧಿಯಲ್ಲಿ ಜಿಲ್ಲೆಗೆ ಸರಾಸರಿ 103.25 ಇಂಚಿನಷ್ಟು ಮಳೆಯಾಗಿದ್ದರೆ; ಈ ವರ್ಷ ಈ ಪ್ರಮಾಣ 38.02 ಇಂಚು ಮಾತ್ರವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸರಾಸರಿ 65 ಇಂಚು ಕಡಿಮೆ ಮಳೆಯಾಗಿದೆ.
ಕಳೆದ ವರ್ಷ ಇಡೀ ಜಿಲ್ಲೆಯನ್ನು ಕಂಗೆಡಿಸುವಂತೆ ಮಾಡಿದ್ದು; ಆಗಸ್ಟ್ ತಿಂಗಳು. ಆಗಸ್ಟ್ ತಿಂಗಳಿನಲ್ಲಿ ಉಂಟಾದ ಮೇಘಸ್ಫೋಟ, ಜಲಪ್ರಳಯದ ಸನ್ನಿವೇಶದಿಂದಾಗಿ ಇಡೀ ಜಿಲ್ಲೆ ಅದರಲ್ಲೂ ಉತ್ತರಕೊಡಗಿನ ಪ್ರದೇಶಗಳು ಅಕ್ಷರಶಃ ನಲುಗುವಂತಾಗಿರುವದು ಇನ್ನೂ ಜನತೆಯ ಸ್ಮøತಿ ಪಟಲದಿಂದ ದೂರವಾಗಿಲ್ಲ. ಇದೀಗ ಆಗಸ್ಟ್ ತಿಂಗಳು ಆರಂಭದ ಮುನ್ನಾದಿನ (ಜು. 31 ರಂದು) ಜಿಲ್ಲೆಯಾದ್ಯಂತ ಮಳೆಗಾಲದ ಸನ್ನಿವೇಶ ಮರೆಯಾಗಿ ಬಿಸಿಲಿನ ವಾತಾವರಣ ಕಂಡು ಬಂದಿರುವದು ವಿಶೇಷವಾಗಿದೆ. ಪ್ರಸ್ತುತ ಮಳೆ ಇಳಿಮುಖವಾಗಿದ್ದರೂ ಮುಂದಿನ ದಿನಗಳಲ್ಲಿ ವಾತಾವರಣದಲ್ಲಿ ಯಾವ ರೀತಿಯ ಬದಲಾವಣೆ ಕಂಡುಬರಬಹುದು ಎಂಬ ಆತಂಕವೂ ಜನತೆಯಲ್ಲಿ ಇರುವದು ಒಂದೆಡೆಯಾಗಿದ್ದರೆ; ಈ ಹಿಂದಿನ ವರ್ಷಗಳಂತೆ ಸರಾಸರಿ ಮಳೆಯಾಗದಿರುವ ಕಳವಳವೂ ಕೃಷಿ ಪ್ರಧಾನ ಜಿಲ್ಲೆ ಕೊಡಗಿನಲ್ಲಿ ಎದುರಾಗಿರುವದು ಈಗಿನ ಪರಿಸ್ಥಿತಿ.
ತಾಲೂಕುಗಳ ವಿವರ
ಮಡಿಕೇರಿ ತಾಲೂಕಿನಲ್ಲಿ ಕಳೆದ ವರ್ಷ ಜನವರಿಯಿಂದ ಈ ತನಕ 144 ಇಂಚು ಮಳೆಯಾಗಿದ್ದರೆ; ಪ್ರಸಕ್ತ ವರ್ಷ 52 ಇಂಚು ಮಳೆಯಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷ 82.97 ಇಂಚು ಹಾಗೂ ಈ ಬಾರಿ 39.42 ಇಂಚು ಮಳೆಯಾಗಿದ್ದರೆ; ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ವರ್ಷ 81.82 ಇಂಚು ಮತ್ತು ಈ ಸಾಲಿನಲ್ಲಿ 22.62 ಇಂಚು ಮಳೆ ಬಿದ್ದಿದೆ.