ಸೋಮವಾರಪೇಟೆ, ಜು.30: ಸೋಮವಾರಪೇಟೆ ಭಾಗದಲ್ಲಿ ಮಳೆ ಮುಂದುವರೆದಿದ್ದು, ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಂಚಾರ ದುಸ್ತರವಾಗುತ್ತಿದೆ. ಸಣ್ಣ ಪುಟ್ಟ ಗುಂಡಿಗಳು ಮಳೆಗೆ ಬೃಹತ್ ಹೊಂಡಗಳಾಗುತ್ತಿದ್ದು, ಪಾದಚಾರಿಗಳಿಗೆ ನಡೆದಾಡಲೂ ಸಹ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.
ಸೋಮವಾರಪೇಟೆ ವ್ಯಾಪ್ತಿಯ ಬಹುತೇಕ ಗ್ರಾಮೀಣ ರಸ್ತೆಗಳು ಇನ್ನಿಲ್ಲದಂತೆ ಹಾಳಾಗಿದ್ದು, ಡಾಂಬರು ರಸ್ತೆಗಳಲ್ಲಿ ಭಾರೀ ಪ್ರಮಾಣದ ಹೊಂಡಾಗುಂಡಿಗಳು ನಿರ್ಮಾಣ ವಾಗಿವೆ. ಹಲವಷ್ಟು ಡಾಂಬರು ರಸ್ತೆಗಳಲ್ಲಿ ಡಾಂಬರು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ವಿವಿಧ ಯೋಜನೆಗಳಡಿ ನಿರ್ಮಾಣ ಮಾಡಿರುವ ಕಾಂಕ್ರೀಟ್ ರಸ್ತೆಗಳು ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಎಲ್ಲಾ ರಸ್ತೆಗಳನ್ನೂ ಕಾಂಕ್ರೀಟೀ ಕರಣಗೊಳಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ವಹಿಸಬೇಕೆಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.
ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೀಟಿಕಟ್ಟೆ ಜಂಕ್ಷನ್ನಿಂದ ಹನಸೆ-ಈಚಲಬೀಡು-ಶನಿವಾರಸಂತೆ ರಸ್ತೆ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮಿಳರ ಕಾಲೋನಿ ರಸ್ತೆ, ಸುಳಿಮಳ್ತೆ ರಸ್ತೆ, ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋವೇರ ಮನೆ ಕಡೆಯಿಂದ ಸೇನೇರ ಮನೆ ಸಂಪರ್ಕ ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರು ಎಂಬಂತಾಗಿದೆ.
ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲುಶೆಟ್ಟಳ್ಳಿ, ಹಾನಗಲ್ಲು ಬಾಣೆ, ಆದಿಗಳಲೆ ರಸ್ತೆ, ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಗಾಂಧಿನಗರ, ಆಲೇಕಟ್ಟೆ, ಚೌಡ್ಲು ಸುಗ್ಗಿಕಟ್ಟೆ ಮುಂಭಾಗದ ರಸ್ತೆ, ಬೇಳೂರು ಗ್ರಾ.ಪಂ. ವ್ಯಾಪ್ತಿಯ ಕೆಂಚಮ್ಮನಬಾಣೆ ರಸ್ತೆ, ತೋಳೂರುಶೆಟ್ಟಳ್ಳಿಯ ಸುಗ್ಗಿಕಟ್ಟೆ, ದೊಡ್ಡತೋಳೂರು ರಸ್ತೆ, ಚಿಕ್ಕತೋಳೂರು-ಕೌಕೋಡಿ ರಸ್ತೆ, ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಂಚಿನಳ್ಳಿ ರಸ್ತೆ, ಬೀದಳ್ಳಿ, ಕೊತ್ನಳ್ಳಿ ರಸ್ತೆ, ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ತಣ್ಣೀರುಹಳ್ಳ-ವಳಗುಂದ ರಸ್ತೆ ಸೇರಿದಂತೆ ಹಲವಷ್ಟು ಗ್ರಾಮೀಣ ಪ್ರದೇಶದ ರಸ್ತೆಗಳು ಗುಂಡಿಮಯವಾಗಿವೆ.
ಡಾಂಬರು ರಸ್ತೆ ನಿರ್ಮಿಸಿದರೆ ವರ್ಷದಲ್ಲೇ ಗುಂಡಿ ಬಿದ್ದು ಸಂಚಾರಕ್ಕೆ ಅಯೋಗ್ಯವಾಗುತ್ತದೆ. ಒಮ್ಮೆ ರಸ್ತೆಗೆ ಅನುದಾನ ಬಿಡುಗಡೆಯಾದರೆ ಮತ್ತೆ ಅನೇಕ ದಶಕಗಳು ಕಳೆದರೂ ಅನುದಾನ ಬಿಡುಗಡೆಯಾಗುವದಿಲ್ಲ. ಈ ಹಿನ್ನೆಲೆ ಗ್ರಾಮೀಣ ಭಾಗದ ರಸ್ತೆಗಳನ್ನು ಕಾಂಕ್ರಿಟೀಕರಣ ಮಾಡಲು ಕ್ರಮ ವಹಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್.ದೀಪಕ್ ಅಭಿಪ್ರಾಯಿಸಿದ್ದಾರೆ.