(ಹೆಚ್‍ಕೆ.ಜಗದೀಶ್)

ಗೋಣಿಕೊಪ್ಪಲು, ಜು. 30: ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಗೋಣಿಕೊಪ್ಪ ಪಂಚಾಯ್ತಿಯು ರಾತೋರಾತ್ರಿ ನಗರದಲ್ಲಿದ್ದ ತ್ಯಾಜ್ಯದ ರಾಶಿಗಳ ಮೂಟೆಗಳನ್ನು ಸಮೀಪದ ದೇವರಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿಯುವ ಮೂಲಕ ಅಲ್ಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾದ ಘಟನೆ ನಡೆದಿದೆ. ಕಳೆದ ಹಲವಾರು ದಿನಗಳಿಂದ ಮುಖ್ಯ ರಸ್ತೆಯ ಬದಿಯಲ್ಲಿ ಕಸದ ತ್ಯಾಜ್ಯ ಸಂಗ್ರಹಗೊಂಡು ದುರ್ಗಂಧ ಬೀರುತ್ತಿದ್ದವು. ಪಟ್ಟಣದ ಹೃದಯ ಭಾಗದ ವಿದ್ಯುತ್ ಕಂಬದ ಅಡಿಯಲ್ಲಿ ಮೂಟೆಗಟ್ಟಲೆ ಕಸ ಸಂಗ್ರಹವಾಗಿತ್ತು.

ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಗ್ರಾಮ ಪಂಚಾಯಿತಿ ಸತತವಾಗಿ ವಿಫಲವಾಗಿತ್ತು. ತಾ. 30ರಂದು ನಿಗದಿಯಾಗಿದ್ದ ಗ್ರಾಮ ಸಭೆಯಲ್ಲಿ ಕಸ ಸಮಸ್ಯೆಯು ತೀವ್ರ ಚರ್ಚೆಗೆ ಗ್ರಾಸವಾಗಬಹುದು ಎಂಬ ಕಾರಣದಿಂದ ಇಲ್ಲಿಯ ಕಸಗಳನ್ನು ದೇವರಪುರ ಪಂಚಾಯಿತಿ ವ್ಯಾಪ್ತಿಯ ಜನನಿಬಿಡ ಪ್ರದೇಶವಾದ ಚನ್ನಂಗೊಲ್ಲಿ ಸಮೀಪದ ಈಸ್ಟ್ ವೆಸ್ಟ್ ಕಾಫಿ ಕ್ಯೂರಿಂಗ್ ಸಮೀಪವಿರುವ ಗುಂಡಿಯಲ್ಲಿ ರಾತೋರಾತ್ರಿ ಸುರಿದು ಖಾಲಿ ಮಾಡಿದ್ದಾರೆ. ಕಸ ಸುರಿದು ದುರ್ಗಂಧ ಬೀರುತ್ತಿದ್ದ ಸ್ಥಳಗಳಿಗೆ ಮಣ್ಣನ್ನು ಸುರಿದು ಮುಚ್ಚಿದ್ದಾರೆ.

ರಾಶಿಗಟ್ಟಲೆ ಕಸದ ಮೂಟೆಗಳನ್ನು ಗುಂಡಿಗೆ ಸುರಿಯುವ ಆತುರದಲ್ಲಿ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಸುರಿದು ನಂತರ ಜೆಸಿಬಿ ಬಳಸಿ ಈ ಕಸವನ್ನು ಸಮೀಪದ ಗುಂಡಿಗೆ ಹಾಕುವ ಪ್ರಯತ್ನ ಮಾಡಿದ್ದಾರೆ. ಆದರೆ ಕಸಗಳು ಗುಂಡಿಗೆ ಸುರಿಯದೇ ರಸ್ತೆ ಬದಿಯಲ್ಲಿಯೇ ರಾಶಿ ರಾಶಿಯಾಗಿ ರಾರಾಜಿಸುತ್ತಿವೆ. ಇದರಿಂದ ಸುತ್ತಮುತ್ತ ದುರ್ಗಂಧ ಬೀರಲಾರಂಭಿಸಿದೆ.

ಸಮೀಪದಲ್ಲಿ ವಾಸಿಸುವ ಗ್ರಾಮಸ್ಥರು ಮುಂಜಾನೆ ರಸ್ತೆಯಲ್ಲಿ ಬರುತ್ತಿದ್ದ ಸಂದರ್ಭ ಈ ಕಸ ಸುರಿದ ವಿಷಯ ತಿಳಿದು ದೇವರಪುರ ಪಂಚಾಯ್ತಿ ಅಧ್ಯಕ್ಷರಿಗೆ,ಸದಸ್ಯರಿಗೆ ಹಾಗೂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕಾಗಮಿಸಿದ ಪಂಚಾಯಿತಿಯ ಸದಸ್ಯರು ಈ ಬಗ್ಗೆ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒರವರಿಗೆ ಇಲ್ಲಿಯ ಮಾಹಿತಿಯನ್ನು ತಿಳಿಸಿ ಗೋಣಿಕೊಪ್ಪ ಪಂಚಾಯಿತಿ ಮಾಡಿರುವ ಕೆಲಸದ ಬಗ್ಗೆ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

ಈ ಸುದ್ದಿಯು ಗೋಣಿಕೊಪ್ಪ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಿಗೆ, ಸದಸ್ಯರಿಗೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿ ನಮ್ಮ ಸಿಬ್ಬಂದಿಗಳು ನಮಗೆ ಅರಿವಿಲ್ಲದಂತೆ ಈ ಕೆಲಸ ಮಾಡಿದ್ದಾರೆ. ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಆಗಿರುವ ಪ್ರಮಾದಕ್ಕೆ ತಮ್ಮಲ್ಲಿ ಕ್ಷಮೆಯಾಚಿಸುತ್ತೇವೆ ಎಂದು ಮಾಡಿದ ತಪ್ಪನ್ನು ಒಪ್ಪಿಕೊಂಡರು.

ಒಂದು ದಿನದ ಒಳಗೆ ಕಸವನ್ನು ಖಾಲಿ ಮಾಡಬೇಕು ತಪ್ಪಿದಲ್ಲಿ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ಎಂದು ಗ್ರಾಮಸ್ಥರು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಿಗೆ ಎಚ್ಚರಿಕೆ ನೀಡಿದರು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ, ಸದಸ್ಯರಾದ ಕೆ.ಪಿ. ಬೋಪಣ್ಣ, ಬಿ.ಎನ್.ಪ್ರಕಾಶ್, ಜಮ್ಮಡ ಸೋಮಣ್ಣ, ಮುರುಗ, ರಾಮಕೃಷ್ಣ, ಪಿಡಿಒ ಶ್ರೀನಿವಾಸ್‍ರವರು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆ. ಪಂಚಾಯಿತಿ ಸಿಬ್ಬಂದಿಗಳು ಆತುರದಲ್ಲಿ ಮಾಡಿದ ಪ್ರಮಾದದಿಂದ ಈ ರೀತಿ ಸಮಸ್ಯೆಯಾಗಿದೆ. ಇದನ್ನು ಶುಚಿಗೊಳಿಸುವ ಕಾರ್ಯ ಕೂಡಲೇ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇವರ ಮಾತಿಗೆ ದೇವರಪುರ ಪಂಚಾಯಿತಿ ಸದಸ್ಯರಾದ ಕಿರಣ್ ಕುಮಾರ್, ವಾಸು.ಕೆ.ಆರ್., ಗ್ರಾಮಸ್ಥರಾದ ಕಡೇಮಾಡ ಸುನೀಲ್ ಮಾದಪ್ಪ, ಸೇರಿದಂತೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರು. ಒಟ್ಟಿನಲ್ಲಿ ಕಸ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸತತವಾಗಿ ಎಡುವುತ್ತಿದ್ದು ಮುಂದೆ ಈ ಬಗ್ಗೆ ಯಾವ ರೀತಿ ಕ್ರಮಕ್ಕೆ ಮುಂದಾಗುತ್ತದೋ ಕಾದು ನೋಡಬೇಕು.