ಸಿದ್ದಾಪುರ, ಜು. 30: ಕಾರ್ಮಿಕ ಮಹಿಳೆಯೋರ್ವರ ಮೇಲೆ ಕಾಡಾನೆ ಧಾಳಿ ನಡೆಸಿದ ಘಟನೆ ಮಾಸುವ ಮುನ್ನವೆ ಮಂಗಳವಾರ ಮತ್ತೊಂದು ಪ್ರಕರಣದಲ್ಲಿ ಕಾಡಾನೆ ಧಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಈರ್ವರು ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಬಾಡಗ ಬಾಣಂಗಾಲ ಗ್ರಾಮದ ಬಿ.ಬಿ.ಟಿ.ಸಿ. ಕಂಪೆನಿಗೆ ಸೇರಿದ ಚೌಡಿಕಾಡು ಕಾಫಿ ತೋಟದೊಳಗೆ ಕೆಲಸ ಮಾಡುತ್ತಿದ್ದ ಸುರೇಶ ಹಾಗೂ ರವಿ ಎಂಬಿಬ್ಬರು ಕೆಲಸದಲ್ಲಿ ಮಗ್ನರಾಗಿದ್ದ ಸಂದರ್ಭ ದಿಢೀರನೆ ಕಾಡಾನೆಗಳ ಹಿಂಡು ತೋಟದೊಳಗೆ ಧಾವಿಸಿ ಬಂತು ಎನ್ನಲಾಗಿದೆ.
ಈ ಸಂದರ್ಭ ಹಿಂಡಿನಲ್ಲಿದ್ದ ಕಾಡಾನೆಯೊಂದು ಕಾರ್ಮಿಕರ ಮೇಲೆ ಧಾಳಿ ನಡೆಸಲು ಮುಂದಾದ ಸಂದರ್ಭ ಎಚ್ಚೆತ್ತುಕೊಂಡ ಕಾರ್ಮಿಕ ರಾದ ಸುರೇಶ್ ಹಾಗೂ ರವಿ ಇಬ್ಬರು ತೋಟದೊಳಗೆ ಓಡಿ ಧಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಭಯದಿಂದ ಓಡುವ ಸಂದರ್ಭ ಬಿದ್ದು ಸುರೇಶನ ಬಲಗೈ ಮೂಳೆ ಮುರಿದಿದ್ದು, ರವಿಗೆ ಕಾಲಿನ ಭಾಗಕ್ಕೆ ಗಂಭೀರ ಗಾಯವಾ ಗಿದೆ. ಗಾಯಾಳುಗಳನ್ನು ಅಮ್ಮತ್ತಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಅರಣ್ಯ ಇಲಾಖೆಯು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಚಲನವಲನ ಪತ್ತೆಹಚ್ಚಲು ರೇಡಿಯೋ ಕಾಲರ್ ಅಳವಡಿಸಿ ಬಿಡಲಾಗಿದ್ದ ಕಾಡಾನೆಯ ಉಪಟಳ ನೀಡುತ್ತಿದೆ ಎಂದು ಕಾರ್ಮಿಕರು ‘ಶಕ್ತಿ’ಗೆ ತಿಳಿಸಿದ್ದಾರೆ.