ಮಡಿಕೇರಿ, ಜು. 29: ಬಸವಣ್ಣನವರು ಬದುಕಿನ ಸಾರ್ಥಕತೆಯ ಮಾರ್ಗವನ್ನು ತೋರುವ ಮೂಲಕ 12ನೇ ಶತಮಾನದಲ್ಲಿ ಶರಣ ಚಳವಳಿಗೆ ನಾಂದಿ ಹಾಡಿದರು. ಆ ಅರಿವಿನ ಮಾರ್ಗವನ್ನು ಮತ್ತೆ ಕಂಡುಕೊಳ್ಳುವ ಪ್ರಯತ್ನವಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಸಾಣೇಹಳ್ಳಿ ಶ್ರೀಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ನಡೆಯುತ್ತಿದ್ದು, ಸರ್ವರು ಕೈಜೋಡಿಸುವಂತೆ ಕಿರಿಕೊಡ್ಲಿ ಮಠಾದೀಶರಾದ ಶ್ರೀಸದಾಶಿವ ಸ್ವಾಮೀಜಿ ಕರೆ ನೀಡಿದ್ದಾರೆ.ಸಹಮತ ವೇದಿಕೆ ವತಿಯಿಂದ ಆ. 5 ರಂದು ಮಡಿಕೇರಿಯಲ್ಲಿ ನಡೆಯಲಿರುವ ‘ಮತ್ತೆ ಕಲ್ಯಾಣ ಆಂದೋಲನ’ (ಮೊದಲ ಪುಟದಿಂದ) ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಎಲ್ಲಾ ಜಾತಿ, ಜನಾಂಗ, ಧರ್ಮದ ಮಂದಿಯನ್ನು ಒಗ್ಗೂಡಿಸಿಕೊಂಡು ಆಂದೋಲನ ನಡೆಸಲಾಗುತ್ತಿದ್ದು, ಸರ್ವರು ಒಂದೇ ಎನ್ನುವ ಭಾವನೆಯನ್ನು ಮೂಡಿಸಲಾಗುತ್ತಿದೆ ಎಂದರು.

ಆಂದೋಲನದ ಅಂಗವಾಗಿ ವಚನಕಾರರನ್ನು ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಸಂವಾದವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಕಾರ್ಯಕ್ರಮದ ರೂಪುರೇಷೆಗಳ ಕುರಿತು ಮಾತನಾಡಿದರು.

ಮಹದೇವಪೇಟೆಯ ಬಸವೇಶ್ವರ ದೇವಾಲಯದಿಂದ ಕಾವೇರಿಹಾಲ್ ವರೆಗೆ ಎಲ್ಲಾ ಸಮುದಾಯ ಗಳನ್ನೊಳಗೊಂಡ ಸಾಮರಸ್ಯ ನಡಿಗೆ ಕಾರ್ಯಕ್ರಮವನ್ನು ಆ. 5 ರಂದು ಹಮ್ಮಿಕೊಳ್ಳಲಾಗುವದು. ಸಾಣೆ ಮಠದ ಪಂಡಿತರಾದ್ಯ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಎಲ್ಲಾ ಧರ್ಮದ ಪ್ರಮುಖರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ನಡೆಯಲಿದೆ ಎಂದರು.

‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಸಂಚಾಲಕ ಎಸ್. ಮಹೇಶ್ ಮಾತನಾಡಿ ಆಂದೋಲನದ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯವೆಂದರು.

ತೊರೆನೂರು ವಿರಕ್ತ ಮಠದ ಶ್ರೀಮಲ್ಲೇಶ ಸ್ವಾಮೀಜಿ, ವೀರಶೈವ ಮಹಾಸಭಾದ ಅಧ್ಯಕ್ಷ ಶಿವಪ್ಪ, ಪ್ರಮುಖರಾದ ಕೆ.ಆರ್. ವಿದ್ಯಾಧರ್, ಕೇಶವ ಕಾಮತ್, ಅಂಬೇಕಲ್ ನವೀನ್ ಕುಶಾಲಪ್ಪ, ಮುನೀರ್ ಅಹಮ್ಮದ್ ಮತ್ತಿತರ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.