ಕೂಡಿಗೆ, ಜು. 29: ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಕಾಯಿಲೆಯಿಂದ ನರಳುತ್ತಿದ್ದು, ಸಾರ್ವಜನಿಕರಲ್ಲಿ ರೋಗ ಹರಡುವ ಭೀತಿ ಹೆಚ್ಚಾಗಿದೆ. ಕೂಡಿಗೆ, ಕೂಡುಮಂಗಳೂರು ಗ್ರಾ.ಪಂ ಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಒಂದು ವಾರದಿಂದ ಬೀದಿ ನಾಯಿಗಳು ನಾಲಿಗೆಯಿಂದ ಜೊಲ್ಲು ಸುರಿಸಿಕೊಂಡು ನರಳುತ್ತಿವೆ. ರೋಗಕ್ಕೆ ತುತ್ತಾಗಿರುವ ನಾಯಿಗಳು ಸಾರ್ವಜನಿಕ ಪ್ರದೇಶಗಳಲ್ಲಿ ಹೆಚ್ಚಾಗಿ ತಿರುಗಾಡುತ್ತಿದ್ದು, ಬೀದಿ ನಾಯಿಗಳಿಂದ ರೋಗ ಹರಡುವ ಭೀತಿ ಹೆಚ್ಚಾಗಿದೆ. ಪುಟಾಣಿ ಮಕ್ಕಳು ಶಾಲೆಗಳಿಗೆ ತೆರಳುವ ವೇಳೆ ಹಾಗೂ ಮನೆಗೆ ಹಿಂದಿರುಗುವ ವೇಳೆ ರೋಗಕ್ಕೆ ತುತ್ತಾಗಿರುವ ಬೀದಿನಾಯಿಗಳು ತಿರುಗುತ್ತಿದ್ದು, ಮಕ್ಕಳಿಗೆ ರೋಗ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ಸಂಬಂಧಪಟ್ಟ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಮಕ್ಕಳ ಪೆÇೀಷಕರು ಆಗ್ರಹಿಸಿದ್ದಾರೆ. ಶಾಲಾ ಮಕ್ಕಳಿಗೆ ಬೀದಿ ನಾಯಿಗಳು ಕಚ್ಚಿರುವ ಪ್ರಸಂಗಗಳು ಕೂಡಾ ನಡೆದಿದ್ದು, ದ್ವಿಚಕ್ರ ವಾಹನ ಚಾಲಕರು ಬೀದಿ ನಾಯಿಗಳಿಂದ ಕೈಕಾಲು ಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆಗಳು ನಡೆದಿವೆ. ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪಂಚಾಯಿತಿಗೆ ಗ್ರಾಮಸ್ಥರು ದೂರು ನೀಡಿದ್ದರೂ ಯಾವದೇ ಪ್ರಯೋಜನವಾಗಲಿಲ್ಲ ಎಂದು ಇಲ್ಲಿನ ಮಂಜುನಾಥ, ವೆಂಕಟೇಶ, ಪ್ರವೀಣ, ಕುಮಾರ, ಕೃಷ್ಣ, ನಾಗರಾಜ್ ಹಾಗೂ ಮತ್ತಿತರರು ಆರೋಪಿಸಿದ್ದಾರೆ. ಜನಜಂಗುಳಿಯಿರುವ ಪ್ರದೇಶದಲ್ಲಿ ಬೀದಿ ನಾಯಿಗಳು ನಾಲಿಗೆಯಿಂದ ಜೊಲ್ಲನ್ನು ಸುರಿಸುತ್ತಾ ಅಲ್ಲಲ್ಲಿ ಬಿದ್ದು ನರಳುತ್ತಿರುವದು ಗ್ರಾಮಸ್ಥರಲ್ಲಿ ಹೆಚ್ಚಿನ ಆತಂಕ ಸೃಷ್ಟಿಯಾಗಿದೆ.

ಒಂದೆಡೆ ಡೆಂಗ್ಯೂ, ಚಿಕನ್ ಗುನ್ಯಾ ಮುಂತಾದ ರೋಗಗಳು ಹರಡುತ್ತಿದ್ದರೆ, ಮತ್ತೊಂದೆಡೆ ಬೀದಿ ನಾಯಿಗಳಿಂದ ರೋಗ ಹರಡುವ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಸಾರ್ವಜನಿಕರಿಗೆ ಬೀದಿ ನಾಯಿಗಳಿಂದ ತೊಂದರೆಯೆದುರಾಗುವದರ ಜೊತೆಗೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿ ಹೆಚ್ಚಾಗುತ್ತಿದೆ. ಒಟ್ಟಿನಲ್ಲಿ ಸಂಬಂಧಪಟ್ಟ ಗ್ರಾ.ಪಂ.ಯವರು ರೋಗಗಳಿಗೆ ತುತ್ತಾಗಿರುವ ನಾಯಿಗಳಿಗೆ ಚಿಕಿತ್ಸೆ ನೀಡುವದರ ಜೊತೆಗೆ ಸಾರ್ವಜನಿಕರಿಗೆ ತಲೆನೋವಾಗಿರುವ ಬೀದಿ ನಾಯಿಗಳನ್ನು ಹಿಡಿದು ಅರಣ್ಯಗಳಿಗೆ ಸಾಗಿಸಬೇಕು ಎಂದು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ