ಬೆಂಗಳೂರು, ಜು. 29: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ ಎಸ್ ಯಡಿಯೂರಪ್ಪ ಅವರು 15ನೇ ವಿಧಾನಸಭೆಯಲ್ಲಿ ಎರಡನೇ ಬಾರಿಗೆ ಮಂಡಿಸಿದ ವಿಶ್ವಾಸಮತ ಯಾಚನೆ ನಿರ್ಣಯದಲ್ಲಿ ಸರ್ಕಾರಕ್ಕೆ ಇರುವ ಬಹುಮತವನ್ನು ಸಾಬೀತು ಪಡಿಸಿದ್ದಾರೆ.ಈ ಮೂಲಕ ಯಡಿಯೂರಪ್ಪ ಅವರ ಸರ್ಕಾರಕ್ಕೆ ಬಹುಮತ ಪ್ರಾಪ್ತಿಯಾಗಿದ್ದು, ಸದ್ಯಕ್ಕೆ ಆರು ತಿಂಗಳ ಕಾಲ ಸರ್ಕಾರಕ್ಕೆ ಯಾವದೇ ಆಪತ್ತು ಇಲ್ಲದಂತಾಗಿದೆ. ಇಂದು ಸದನ ಆರಂಭವಾದ ನಂತರ ಸ್ಪೀಕರ್ ರಮೇಶ್ ಕುಮಾರ್ ಅವರ ಸೂಚನೆ ಮೇರೆಗೆ ಪ್ರಸಕ್ತ ವಿಧಾನಸಭೆ ಅವಧಿಯಲ್ಲಿ ಎರಡನೇ ಬಾರಿಗೆ ಒಂದು ಸಾಲಿನ ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸಿದರು. ಬಳಿಕ ಧ್ವನಿಮತದ ಮೂಲಕ ನಿರ್ಣಯಕ್ಕೆ ಅನುಮೋದನೆ ದೊರೆಯಿತು.ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ತಾವು ತಮ್ಮ ಆಡಳಿತಾ ವಧಿಯಲ್ಲಿ ದ್ವೇಷದ ರಾಜಕಾರಣ ಮಾಡುವದಿಲ್ಲ. ಈ ಹಿಂದೆ ಸಿದ್ದರಾಮಯ್ಯ ಕುಮಾರಸ್ವಾಮಿ ಅವರುಗಳು ಸಹ ಮುಖ್ಯಮಂತ್ರಿ ಗಳಾಗಿದ್ದು ಅವರೂ ಸೇಡಿನ ರಾಜಕಾರಣ ಮಾಡಿಲ್ಲ. ಇದೇ ರೀತಿ ನಮ್ಮ ಸರ್ಕಾರವೂ ಸೇಡಿನ ರಾಜಕೀಯ ಮಾಡುವದಿಲ್ಲ. ‘ಫರ್ಗೆಟ್ ಅಂಡ್ ಫರ್ ಗೀವ್’ (ಮರೆತುಬಿಡು ಮತ್ತು ಕ್ಷಮಿಸಿ ಬಿಡು) ಎನ್ನುವದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದರು. ನಾಡದೇವತೆ ಚಾಮುಂ ಡೇಶ್ವರಿ, ಅಂಬೇಡ್ಕರ್ ಅವರನ್ನು ನೆನೆದ ಯಡಿಯೂರಪ್ಪ, ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಆಡಳಿತ ವ್ಯವಸ್ಥೆಯನ್ನು ಸರಿ ದಾರಿಗೆ ತರುವದು ತಮ್ಮ ಮೂಲ ಉದ್ದೇಶವಾಗಿದೆ. ಜನತೆ ಎದುರಿಸುತ್ತಿರುವ ಸಮಸ್ಯೆ ಗಳನ್ನು ಬಗೆಹರಿಸಲು ಒತ್ತು ನೀಡಲಾಗುವದು ಎಂದರು.
ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಮಾತನಾಡಿದ ನಂತರ, ಸ್ಪೀಕರ್ ರಮೇಶ್ ಕುಮಾರ್ ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಹೆಚ್ಚಿನ ಚರ್ಚೆ ನಡೆಯುವ ಅಗತ್ಯವಿಲ್ಲ. ಯಾರಿಗೂ ಚರ್ಚೆಗೆ ಅವಕಾಶ ನೀಡುವದಿಲ್ಲ
(ಮೊದಲ ಪುಟದಿಂದ) ಎಂದು ಹೇಳಿ ಚರ್ಚೆಗೆ ತೆರೆ ಎಳೆದರು. ಬಳಿಕ ಯಡಿಯೂರಪ್ಪ ಅವರು ಮಂಡಿಸಿದ ವಿಶ್ವಾಸಮತ ನಿರ್ಣಯವನ್ನು ಸ್ಪೀಕರ್ ಅವರು ಮತಕ್ಕೆ ಹಾಕಿದರು. ಸದನ ಧ್ವನಿಮತದ ಮೂಲಕ ನಿರ್ಣಯಕ್ಕೆ ಅನುಮೋದನೆ ದೊರೆಯಿತು.
ವಿಧೇಯಕಕ್ಕೆ ಅಂಗೀಕಾರ
ಬಹುಮತ ಸಾಬೀತಾದ ಕೂಡಲೇ ಧನವಿನಿಯೋಗ ವಿಧೇಯಕವೂ ಧ್ವನಿಮತದಿಂದ ಅಂಗೀಕಾರಗೊಂಡಿತು. ಹಿಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡಿಸಿದ್ದ ಬಜೆಟ್ ಪ್ರಸ್ತಾವನೆಗೆ ಸದನ ಒಪ್ಪಿಗೆ ಕೊಡಬೇಕು ಎಂದು ಸಭಾ ನಾಯಕ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದ ಮನವಿ ನಂತರ ಹಣಕಾಸು ವಿಧೇಯಕಕ್ಕೆ ಸದನ ಧ್ವನಿಮತದ ಅಂಗೀಕಾರ ನೀಡಿತು.
ಮೂರು ತಿಂಗಳ ಲೇಖಾನುದಾನಕ್ಕೆ ಸದನ ಒಪ್ಪಿಗೆ ನೀಡಿದೆ. 3,327 ಕೋಟಿ ರೂಪಾಯಿ ಪೂರಕ ಬಜೆಟ್ ಗೂ ಸದನ ಇಂದು ಧ್ವನಿಮತದ ಮೂಲಕ ಅಂಗೀಕಾರ ನೀಡಿತು. ಬಜೆಟ್ ಮೇಲೆ ಸಮಗ್ರ ಚರ್ಚೆಯಾಗಬೇಕು, ಹೀಗಾಗಿ ಮೂರು ತಿಂಗಳ ಲೇಖಾನುದಾನಕ್ಕೆ ಸರ್ಕಾರ ಒಪ್ಪಿಗೆ ಪಡೆಯಲು ತಕರಾರು ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದರು. ನಂತರ ಮೂರು ತಿಂಗಳ ಲೇಖಾನುದಾನಕ್ಕೆ ಸದನ ಒಪ್ಪಿಗೆ ನೀಡಿತು.