(ವರದಿ-ಚಂದ್ರಮೋಹನ್)
ಕುಶಾಲನಗರ, ಜು 29: ಕುಶಾಲನಗರ ಸರಕಾರಿ ಇಂಜಿನಿಯ ರಿಂಗ್ ಕಾಲೇಜು ಸಮರ್ಪಕ ನಿರ್ವಹಣೆ ಹಾಗೂ ವಿದ್ಯಾರ್ಥಿಗಳ ಕೊರತೆಯೊಂದಿಗೆ ಸಧ್ಯದಲ್ಲಿಯೇ ಮುಚ್ಚುವ ಭೀತಿ ಎದುರಾಗಿದೆ. ಸುಮಾರು 8 ವರ್ಷಗಳ ಹಿಂದೆ ಪ್ರಾರಂಭಗೊಂಡ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಹುತೇಕ ಮೂಲಭೂತ ಸೌಲಭ್ಯ ಗಳು ಲಭ್ಯವಿದ್ದರೂ ಪ್ರಸಕ್ತ ವಿದ್ಯಾರ್ಥಿ ಗಳ ಕೊರತೆ ಇದಕ್ಕೆ ಪ್ರಮುಖ ಕಾರಣ ಎನ್ನಬಹುದು.
ಮೆಕಾನಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ 4 ವಿಭಾಗ ಹೊಂದಿರುವ ಕಾಲೇಜಿನಲ್ಲಿ ಒಟ್ಟು 252 ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡುವ ಅವಕಾಶ ಹೊಂದಿದೆ. 4 ವಿಭಾಗಗಳಲ್ಲಿ ಒಟ್ಟು 1 ಸಾವಿರ ಸಂಖ್ಯೆಯ ಮಕ್ಕಳು ತರಗತಿಗೆ ಹಾಜರಾಗುತ್ತಿದ್ದು ಉತ್ತಮ ಫಲಿತಾಂಶ ಕೂಡ ಹೊರಬೀಳುತ್ತಿತ್ತು. ಆದರೆ ಈ ಬಾರಿ ಪ್ರಥಮ ವರ್ಷದ ತರಗತಿಗೆ ಕೇವಲ 102 ವಿದ್ಯಾರ್ಥಿಗಳು ಮಾತ್ರ ಆಯ್ಕೆ ಯಾಗಿದ್ದು ಇವರ ಪ್ರವೇಶಾತಿ ಸಂದರ್ಭ ಇಲ್ಲಿನ ಕೆಲವು ಸಮಸ್ಯೆಗಳು ವಿದ್ಯಾರ್ಥಿ ಗಳನ್ನು ಬೇರೆಡೆಗೆ ವರ್ಗಾವಣೆ ಗೊಳ್ಳುವಂತೆ ಮಾಡುತ್ತಿರುವದು ಆವಾಂತರಕ್ಕೆ ಕಾರಣವಾಗುತ್ತಿದೆ.
ಕಳೆದ ಸಾಲಿನಲ್ಲಿ 4 ವಿಭಾಗಗಳಲ್ಲಿ ಒಟ್ಟು 198 ವಿದ್ಯಾರ್ಥಿಗಳು ಮಾತ್ರ ಪ್ರಥಮ ವರ್ಷದ ತರಗತಿಗೆ ಸಿಇಟಿ ಮೂಲಕ ಆಯ್ಕೆಯಾಗಿದ್ದರು. ಹಲವು ಕಾರಣಗಳಿಂದ ವಿದ್ಯಾರ್ಥಿಗಳು ಈ ಕೇಂದ್ರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳದೆ ಬೇರೆ ಕೇಂದ್ರಗಳಿಗೆ ಸ್ಥಳಾಂತರ ಗೊಳ್ಳುತ್ತಿರುವದು ವಿದ್ಯಾರ್ಥಿ ಗಳ ಕೊರತೆಗೆ ಪ್ರಮುಖ ಕಾರಣವಾಗಿದೆ.
ಸೌಲಭ್ಯವಿಲ್ಲ
ಕುಶಾಲನಗರಕ್ಕೆ ಸರಕಾರಿ ಇಂಜಿನಿಯರಿಂಗ್ ಕಾಲೇಜೊಂದು ಬರುವಲ್ಲಿ ಅಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಡಿ. ಎಚ್. ಶಂಕರಮೂರ್ತಿ ಅವರು ಕಾರಣಕರ್ತ ರಾಗಿದ್ದು ನಂತರದ ದಿನಗಳಲ್ಲಿ ಕಾಲೇಜಿನ ಅಭಿವೃದ್ಧಿ ಕಾರ್ಯಗಳು ಬಹುತೇಕ ಕ್ಷೀಣಗೊಂಡಿವೆ. ಒಟ್ಟು 1 ಸಾವಿರ ವಿದ್ಯಾರ್ಥಿಗಳಲ್ಲಿ ಶೇ.60 ರಷ್ಟು ವಿದ್ಯಾರ್ಥಿನಿಯರು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಪರವೂರಿನ ವಿದ್ಯಾರ್ಥಿಗಳಿಗೆ ತಂಗಲು ಹಾಸ್ಟೆಲ್ ವ್ಯವಸ್ಥೆಯ ಕೊರತೆ ಕೂಡ ಎದುರಾಗಿದೆ. ನೂರಾರು ಸಂಖ್ಯೆಯ ಬೋಧಕ, ಬೋಧಕೇತರ ಸಿಬ್ಬಂದಿ ಗಳಿಗೆ ಕೂಡ ವಸತಿಗೃಹ ಸೌಲಭ್ಯ ಇನ್ನೂ ಕಲ್ಪಿಸಲಾಗಿಲ್ಲ.
ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಅಂದಾಜು ರೂ 2.95 ಕೋಟಿ ವೆಚ್ಚದಲ್ಲಿ ಎರಡು ವಸತಿ ನಿಲಯ ಕಟ್ಟಡದ ಕಾಮಗಾರಿ ಪ್ರಾರಂಭಗೊಂಡಿ ದ್ದರೂ ಕಳೆದ 5 ವರ್ಷಗಳಿಂದ ಇದು ನೆನೆಗುದಿಗೆ ಬಿದ್ದಿದೆ. ಇದರೊಂದಿಗೆ ಹುಡುಗರ ಹಾಸ್ಟೆಲ್ ಕಟ್ಟಡ ಕಾಮಗಾರಿ ಪ್ರಾರಂಭಗೊಂಡಿದ್ದರೂ ಅರ್ಧಕ್ಕೆ ನಿಂತಿರುವದು ಕಾಣಬಹುದು. ಕಾಲೇಜು ಕ್ಯಾಂಪಸ್‍ನ ಎರಡನೇ ಹಂತದ ಅಭಿವೃದ್ಧಿಗೆ ಕಾಮಗಾರಿಗೆ ಹಣ ಬಿಡುಗಡೆಯಾಗದೆ ವಿದ್ಯಾರ್ಥಿ ಗಳು, ಸಿಬ್ಬಂದಿಗಳು ಮೂಲಭೂತ ಸೌಕರ್ಯದಿಂದ ವಂಚಿತರಾಗು ವಂತಾಗಿದೆ. ಪ್ರಥಮ ಹಂತದಲ್ಲಿ ಸರಕಾರ ರೂ. 20 ಕೋಟಿ ವೆಚ್ಚ ಮಾಡಿದ್ದು ಬಹುತೇಕ ಕಟ್ಟಡಗಳು ನಿರ್ಮಾಣಗೊಂಡಿದ್ದರೂ ಸರಕಾರ ದಿಂದ ಅನುಮೋದನೆಗೊಂಡ ರೂ. 12 ಕೋಟಿ ವೆಚ್ಚದ ಎರಡನೇ ಹಂತದ ಯೋಜನೆಗಳು ಅನುದಾನದ ಕೊರತೆಯಿಂದ ನೆನೆಗುದಿಗೆ ಬಿದ್ದಿದೆ. ಎರಡನೇ ಹಂತದ ಯೋಜನೆಯಲ್ಲಿ ಕಾಲೇಜಿನ ಸುತ್ತಲೂ ಆವರಣ ಗೋಡೆ, ಉದ್ಯಾನ ವನ ನಿರ್ಮಾಣ, ಕ್ಯಾಂಟೀನ್ ಕಟ್ಟಡ, ಆವರಣದಲ್ಲಿ ರಸ್ತೆ ನಿರ್ಮಾಣ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ರೂ. 12 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳ ಬೇಕಿದ್ದು ಇದರಲ್ಲಿ ಕೆಲವು ಕಾಮಗಾರಿಗಳು ಮಾತ್ರ ನಡೆದಿವೆ.
ಸರಕಾರ ಮತ್ತು ಜನಪ್ರತಿನಿಧಿ ಗಳ ಆಸಕ್ತಿಯ ಕೊರತೆಯಿಂದ ಈ ಸಮಸ್ಯೆ ಎದುರಾಗಿದೆ ಎನ್ನುವದು ಸ್ಥಳೀಯರ ಆರೋಪವಾಗಿದೆ. ಜಿಲ್ಲೆಗೆ ದೊರೆತ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸಮರ್ಪಕವಾಗಿ ಅಭಿವೃದ್ಧಿಗೊಳ್ಳ ಬೇಕು. ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಸರಕಾರ ಕಲ್ಪಿಸಬೇಕು ಎನ್ನುತ್ತಾರೆ ಕುಶಾಲನಗರ ಹಿರಿಯ ನಾಗರಿಕ ವಿ. ಎನ್. ವಸಂತಕುಮಾರ್. ಕಾಲೇಜಿನ ಕೆಲವು ವಿಭಾಗಗಳಲ್ಲಿ ಸಿಬ್ಬಂದಿಗಳ ಕೊರತೆ ಕೂಡ ಎದುರಾಗಿದೆ. ಸುಮಾರು 13.5 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ತಲೆ ಎತ್ತಿದ್ದು ಇಡೀ ಕ್ಯಾಂಪಸ್‍ನಲ್ಲಿ ಯೋಜನೆಗಳು ಸಮರ್ಪಕವಾಗಿ ಕಾರ್ಯಗತ ವಾಗದೆ ವಿದ್ಯಾರ್ಥಿಗಳು ಸಿಬ್ಬಂದಿ ಗಳು ಕಾಲೇಜಿನ ಫ್ರೊಫೆಸರ್‍ಗಳು ಮೂಲಭೂತ ಸೌಲಭ್ಯ ಕೊರತೆ ಎದುರಿಸುವಂತಾಗಿದೆ. ರಾಜ್ಯದಲ್ಲಿ ಒಟ್ಟು 10 ಸರಕಾರಿ ಇಂಜಿನಿಯ ರಿಂಗ್ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿದ್ದು ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಎರಡು ಕಾಲೇಜುಗಳಿಗೆ ಸರಕಾರ ಅನುಮತಿ ನೀಡಿದೆ. ಇತ್ತೀಚೆಗೆ ಹೊಳೆ ನರಸಿಪುರದ ಸಮೀಪ ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗೊಂಡಿರುವದನ್ನು ಕಾಣಬಹುದು. ಆದರೆ ಕೊಡಗು ಜಿಲ್ಲೆ ಹೊಂದಿರುವ ಏಕೈಕ ಸರಕಾರಿ ಇಂಜಿನಿಯರಿಂಗ್ ಕಾಲೇಜು ಬಗ್ಗೆ ಸರಕಾರ ಹೊಂದಿರುವ ನಿರ್ಲಕ್ಷ್ಯ ಧೋರಣೆಯನ್ನು ಬದಲಾಯಿಸು ವದರೊಂದಿಗೆ ಕೂಡಲೇ ಈ ಕಾಲೇಜಿಗೆ ಸರಿಯಾದ ಕಾಯಕಲ್ಪ ಕಲ್ಪಿಸುವದ ರೊಂದಿಗೆ ಕೇಂದ್ರದ ಅಭಿವೃದ್ಧಿಯತ್ತ ಗಮನಹರಿಸ ಬೇಕಾಗಿದೆ.