ಬೆಂಗಳೂರು, ಜು. 29: ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದಷ್ಟೇ ವಿಶ್ವಾಸಮತ ಗಳಿಸಿದ್ದು, ಪ್ರಪ್ರಥಮವಾಗಿ ಕೊಡಗಿನ ಗಂಭೀರ ಸಮಸ್ಯೆ ಬಗ್ಗೆ ಆದ್ಯ ಗಮನ ಹರಿಸಿರುವದು ಕಂಡುಬಂದಿದೆ.ತೀವ್ರ ಮಳೆ-ಭೂಕುಸಿತದಿಂದ ಕಳೆದ ವರ್ಷ ಜಿಲ್ಲೆಯಲ್ಲಿ ಭಾರೀ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ ನಡೆದ ಪುನರ್ವಸತಿ ವಿದ್ಯಮಾನಗಳ ಕುರಿತು ಮಂಗಳವಾರ (ಇಂದು) ವಿಶೇಷ ಸಭೆ ನಡೆಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಕರೆದಿರುವ ಈ ವಿಶೇಷ ಸಭೆಯಲ್ಲಿ ಕೊಡಗಿನ ಶಾಸಕರುಗಳು ಹಾಗೂ ಪ್ರಮುಖ ಅಧಿಕಾರಿಗಳು ಭಾಗವಹಿಸಲಿ ದ್ದಾರೆ. ಅಲ್ಲದೆ ಪುನರ್ವಸತಿ ಕಾರ್ಯ ದಲ್ಲಿ ಕೈಜೋಡಿಸಿರುವ ಇನ್ಫೋಸಿಸ್ ಪ್ರಮುಖರಾದ ಸುಧಾಮೂರ್ತಿ ಅವರನ್ನೂ ಆಹ್ವಾನಿಸಲಾಗಿದೆ.ನೈಸರ್ಗಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡಿದ್ದ ಸಂತ್ರಸ್ತರ ಪುನರ್ವಸತಿ ಸೌಲಭ್ಯವು ಸಮರ್ಪಕವಾಗಿ ನಡೆದಿಲ್ಲ; ಇನ್ನೂ ಸಂತ್ರಸ್ತರಿಗೆ ಮನೆಗಳು ಲಭ್ಯವಾಗಿಲ್ಲ ಎನ್ನುವ ಕುರಿತು ಕೊಡಗಿನ ಬಿಜೆಪಿ ಶಾಸಕರುಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದರು. ನಿರ್ಮಾಣಗೊಂಡ ಮನೆಗಳ ಹಸ್ತಾಂತರ ಕಾರ್ಯವು ವಿಳಂಬವಾಗುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತುರ್ತಾಗಿ ಈ ಸಭೆ ಕರೆದಿದ್ದು, ಚರ್ಚೆ ನಡೆಸಲಿದ್ದಾರೆ.