ಮಡಿಕೇರಿ, ಜು. 28: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ 2018-19ನೇ ಸಾಲಿನ ಯುವ ವಿಜ್ಞಾನಿಗಳ ಪ್ರಶಸ್ತಿಗಾಗಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಆಗಸ್ಟ್ 8 ರಂದು ಮಡಿಕೇರಿ ನಗರದ ಬಿ.ಆರ್.ಸಿ. ಕೇಂದ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ಜಿಲ್ಲಾಮಟ್ಟದ ಯುವ ವಿಜ್ಞಾನಿ ಪ್ರಶಸ್ತಿಗೆ ಸ್ಪರ್ಧೆ ನಡೆಯಲಿದೆ.

ತಾ. 27 ಕ್ಕೆ ನಿಗದಿಯಾಗಿದ್ದ ಸ್ಪರ್ಧಾ ದಿನಾಂಕವನ್ನು ಅನಿವಾರ್ಯ ಕಾರಣಗಳಿಗಾಗಿ ಆ.8 ಕ್ಕೆ ಮುಂದೂಡಲಾಗಿದೆ. ಈ ಸ್ಪರ್ಧೆಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ತಮ್ಮ ಮಾರ್ಗದರ್ಶಿ ಶಿಕ್ಷಕರೊಂದಿಗೆ ಹಾಜರಾಗಬೇಕು ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ.

ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸುವ ಪ್ರಸ್ತುತ 9 ರಿಂದ 12 (ಪಿಯುಸಿ)ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ತಾ. 31 ರೊಳಗಾಗಿ ಮಡಿಕೇರಿ ಡಿಡಿಪಿಐ ಕಚೇರಿಗೆ ಅರ್ಜಿ ಸಲ್ಲಿಸಲು ತಿಳಿಸಿದೆ. ಡಿಡಿಪಿಐ ಕಚೇರಿಗೆ ಸಲ್ಲಿಸುವ ಅರ್ಜಿಯ ಮತ್ತೊಂದು ಪ್ರತಿಯನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೇಂದ್ರ ಕಚೇರಿಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಎಸ್.ಟಿ. ವೆಂಕಟೇಶ್, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರು, ಡಿಡಿಪಿಐ ಕಚೇರಿ, ಮಡಿಕೇರಿ (ಮೊ. 94488 73999) ಅಥವಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್ (ಮೊ. 94485 88352) ಸಂಪರ್ಕಿಸಲು ತಿಳಿಸಿದೆ.