ಸೋಮವಾರಪೇಟೆ, ಜು. 28: ಅಧಿಕ ನಿರ್ವಹಣಾ ವೆಚ್ಚ, ಫಸಲಿನ ಕೊರತೆ, ದುಬಾರಿಯಾದ ಕ್ರಿಮಿನಾಶಕ, ಗೊಬ್ಬರದ ದರ, ಕಾರ್ಮಿಕರ ಸಾಗಾಟ ವೆಚ್ಚ, ಅತೀವೃಷ್ಟಿ, ಅನಾವೃಷ್ಟಿಯಿಂದಾಗಿ ಕಾಫಿ ಉದ್ಯಮ ತತ್ತರಿಸುತ್ತಿರುವ ನಡುವೆಯೇ, ಅವಧಿಗೂ ಮುನ್ನವೇ ಕಾಫಿ ಹಣ್ಣಾಗುತ್ತಿದ್ದು, ಬೆಳೆಗಾರರಲ್ಲಿ ಫಸಲು ನಷ್ಟದ ಭೀತಿ ಸೃಷ್ಟಿಸಿದೆ.ತಾಲೂಕಿನ ಹಲವಷ್ಟು ಕಾಫಿ ತೋಟಗಳಲ್ಲಿ ಅರೇಬಿಕಾ ಕಾಫಿ ಈಗಲೇ ಹಣ್ಣಾಗುತ್ತಿದ್ದು ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.

ವಾತಾವರಣ ಏರುಪೇರಿನ ಕಾರಣ ಪ್ರಸಕ್ತ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಅರೇಬಿಕಾ ಹಣ್ಣಾಗಿದ್ದು, ಮಳೆಗಾಲದಲ್ಲಿ ಕಾಫಿ ಹಣ್ಣನ್ನು ಕೊಯ್ಲು ಮಾಡಿ, ಒಣಗಿಸಲು ಸಾಧ್ಯವಿಲ್ಲದ ಹಿನ್ನೆಲೆ ಬೆಳೆಗಾರ ನಷ್ಟಕ್ಕೆ ಒಳಗಾಗುವಂತಾಗಿದೆ.ಹಣ್ಣಾದ ಕಾಫಿ ಶೀತದಿಂದ ಕೊಳೆತು ಉದುರಿ ಮಣ್ಣು ಸೇರುತ್ತಿದ್ದು, ಕಷ್ಟಪಟ್ಟು ಕೊಯ್ಲು ಮಾಡಿ ಒಣಗಿಸಿದರೂ ಗುಣಮಟ್ಟ ಕಳೆದುಕೊಂಡು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಹಲವಷ್ಟು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.ಕಳೆದ ಮುಂಗಾರಿನಲ್ಲಿ ಧಾರಾಕಾರ ಮಳೆ ಸುರಿದು, ಭೂಮಿಯಲ್ಲಿ ಶೀತ ಹೆಚ್ಚಾಗಿತ್ತು. ನಂತರ ಡಿಸೆಂಬರ್, ಜನವರಿ ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬಿದ್ದ ಮಳೆ ಹಾಗೂ ಸುರಿದ ಮಂಜಿನಿಂದ ಕೆಲ ತೋಟಗಳಲ್ಲಿ ಕಾಫಿ ಹೂ ಅರಳಿದ ಪರಿಣಾಮ ಇದೀಗ ಮಳೆಗಾಲದಲ್ಲೇ ಕಾಫಿ ಹಣ್ಣಾಗಿದೆ.ಮಾರ್ಚ್ ಎರಡನೇ ವಾರ ಅಥವಾ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ (ಮೊದಲ ಪುಟದಿಂದ) ಹೂಮಳೆ ಸುರಿದು, ಬ್ಲಾಸಂ ನಂತರ ಬ್ಯಾಕಿಂಗ್ ಮಳೆ ಸಿಕ್ಕಿದ್ದರೆ, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಾಫಿ ಕೊಯ್ಲಿಗೆ ಬರುತ್ತದೆ. ಅದಕ್ಕಿಂತ ಹಿಂದಿನ ತಿಂಗಳುಗಳಲ್ಲಿ ಕಾಫಿ ಹಣ್ಣಾದರೆ, ಫಸಲು ನಷ್ಟವಾಗುತ್ತದೆ ಎಂದು ಬೆಳೆಗಾರರು ಅಭಿಪ್ರಾಯಿಸಿದ್ದಾರೆ.

ತಾಲೂಕಿನ ಶಾಂತಳ್ಳಿ ಹೋಬಳಿಯಲ್ಲಿ ಹೆಚ್ಚಿನ ಮಳೆ ಬೀಳುವದರಿಂದ, ಕೆಲ ತೋಟಗಳಲ್ಲಿ ಅವಧಿಗೂ ಮುನ್ನವೇ ಕಾಫಿ ಹಣ್ಣಾಗಿದೆ. ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿಯ ಕೆಲ ತೋಟಗಳಲ್ಲೂ ಅಲ್ಪಸ್ವಲ್ಪ ಹಣ್ಣಾಗುತ್ತಿದ್ದು, ಇಂತಹ ಕಾಫಿ ಫಸಲು ಬೆಳೆಗಾರರ ಕೈಸೇರದೇ ಮಣ್ಣುಪಾಲಾಗುವ ಲಕ್ಷಣ ಗೋಚರಿಸುತ್ತಿದೆ.

ಅರೇಬಿಕಾ ಮಾತ್ರವಲ್ಲದೇ ರೋಬಸ್ಟಾ ಕಾಫಿಗೂ ಅಕಾಲಿಕ ಮಳೆಯ ಹೊಡೆತ ತಟ್ಟಿದೆ. ಕುಶಾಲನಗರ, ಸುಂಟಿಕೊಪ್ಪ ಹಾಗು ಸೋಮವಾರಪೇಟೆ ಹೋಬಳಿಯಲ್ಲಿ ಫೆಬ್ರವರಿಯಲ್ಲಿ ಮಳೆ ಬಿದ್ದಿದ್ದರಿಂದ ಕೆಲವು ಪ್ರದೇಶದ ರೋಬಸ್ಟಾ ತೋಟಗಳಲ್ಲಿ ಶೇ. 10ರಷ್ಟು ಹಣ್ಣಾಗಿದೆ. ಮಳೆಗಾಲದಲ್ಲಿ ಹಣ್ಣಾದ ಕಾಫಿಯನ್ನು ಕೊಯ್ಲು ಮಾಡಲು ಸಾಧ್ಯವಾಗದೆ ಬೆಳೆಗಾರರು ಕೈಚೆಲ್ಲಿದ್ದಾರೆ.

ಇದೀಗ ಮುಂಗಾರು ಪ್ರಾರಂಭವಾಗಿದ್ದು, ಒಮ್ಮೊಮ್ಮೆ ಜೋರಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಈಗಾಗಲೇ ಹಣ್ಣಾಗಿರುವ ಕಾಫಿ ಕೆಳಕ್ಕೆ ಬೀಳುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗುತ್ತಿದೆ.

ಕಳೆದ ವರ್ಷ ಪ್ರಾಕೃತಿಕ ವಿಕೋಪದಿಂದಾಗಿ ಭಾರೀ ಫಸಲು ನಷ್ಟ ಅನುಭವಿಸಿದ್ದ ಬೆಳೆಗಾರರಿಗೆ, ಅಕಾಲಿಕ ಮಳೆಯಿಂದ ಹಣ್ಣಾಗುತ್ತಿರುವ ಕಾಫಿ ಇನ್ನಷ್ಟು ಹೊಡೆತ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ ಕೊಳೆರೋಗದಿಂದ ಇನ್ನಷ್ಟು ಕಾಫಿ ಉದುರಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ತೋಳೂರುಶೆಟ್ಟಳ್ಳಿ ಸಮೀಪದ ಸಿಂಗನಳ್ಳಿಯ ಎಸ್.ಪಿ. ಮಾಚಯ್ಯ ಅಭಿಪ್ರಾಯಿಸಿದ್ದಾರೆ.

ತಾಲೂಕಿನಲ್ಲಿ ಒಟ್ಟು 28,590 ಹೆಕ್ಟೇರ್‍ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. 22,900 ಹೆಕ್ಟೇರ್‍ನಲ್ಲಿ ಅರೇಬಿಕಾ ಕಾಫಿ ಹಾಗು 5690 ಹೆಕ್ಟೇರ್‍ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದ್ದು, ಅಕಾಲಿಕ ಮಳೆಯಿಂದ ಹಣ್ಣಾಗುತ್ತಿರುವ ಕಾಫಿ ಬೆಳೆಗಾರರ ಕೈಚೆಲ್ಲಿ ಹೋಗುತ್ತಿದೆ.

ಈಗಾಗಲೇ ಹಣ್ಣಾಗಿರುವ ಕಾಫಿಯನ್ನು ಕೊಯ್ಲು ಮಾಡಿ, ಒಣಗಿಸಿಟ್ಟುಕೊಳ್ಳಬೇಕು. ಗಿಡದಲ್ಲೇ ಬಿಟ್ಟರೆ ಹಣ್ಣಿನೊಳಗೆ ಬೆರ್ರಿ ಬೋರರ್ ಕೀಟಗಳ ಸಂತಾನೋತ್ಪತ್ತಿಯಾಗಿ ಕೀಟಬಾಧೆ ಜಾಸ್ತಿಯಾಗಲಿದೆ. ಬೆಳೆಗಾರರು ಈ ಬಗ್ಗೆ ತುರ್ತು ಗಮನ ಹರಿಸಬೇಕೆಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್ ಸಲಹೆ ನೀಡಿದ್ದಾರೆ.