ಮಡಿಕೇರಿ, ಜು. 28: ಭಾರತೀಯ ಪುರಾತತ್ವ ಇಲಾಖೆಯಿಂದ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಕೋಟೆ ಆವರಣದೊಳಗಿನ ಎಲ್ಲ ಕಚೇರಿ ಗಳನ್ನು ತೆರವುಗೊಳಿಸುವ ದಿಸೆಯಲ್ಲಿ; ಈಗಾಗಲೇ ಸಂಬಂಧಿ ಸಿದ ಇಲಾಖೆಗಳ ಮುಖ್ಯಸ್ಥರಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಈ ಸಂಬಂಧ ಈಗಾಗಲೇ ರಾಜ್ಯ ಉಚ್ಛನ್ಯಾಯಾಲಯ ಕೂಡ ನಿರ್ದೇಶನ ನೀಡಿದೆ.ಶಿಥಿಲಗೊಂಡಿರುವ ಕೋಟೆ : ನಾಲ್ಕುನೂರು ವರ್ಷಗಳ ಹಿಂದೆ ಕೊಡಗಿನ ರಾಜಪರಂಪರೆಯ ಆಳ್ವಿಕೆಯಲ್ಲಿ ನಿರ್ಮಿಸಲಾಗಿರುವ ಕೋಟೆ ಹಾಗೂ ರಾಜರ ಅರಮನೆಯು; ಬ್ರಿಟೀಷ್ ಆಳ್ವಿಕೆಯ ಲ್ಲಿಯೂ ಕೊಡಗಿನ ಆಡಳಿತ ಕೇಂದ್ರ ಸ್ಥಳವಾಗಿ ಮಾರ್ಪಾಡುಗೊಂಡಿತ್ತು. ದೇಶ ಸ್ವಾತಂತ್ರ್ಯ ಪಡೆದ ಬೆನ್ನಲ್ಲೇ ಅಂದಿನ ಕೊಡಗು ಸರಕಾರದ ಆಳ್ವಿಕೆಯೂ ಇಲ್ಲಿ ಮುಂದುವರಿದಿತ್ತು. ಹೀಗಾಗಿ ಇಂದಿನ ಜಿ.ಪಂ. ಕಲಾಪ ನಡೆಯುವ ಕಟ್ಟಡ ಹಳೆಯ ವಿಧಾನ ಸಭಾಂಗಣ ಎಂದೇ ಕರೆಯಲ್ಪಡುತ್ತಿದೆ.ಈ ಅರಮನೆಯ ಮೇಲ್ಚಾವಣಿ ಕುಸಿಯುವಂತಾಗಿದ್ದು; ಅರಮನೆಯ ಅಪೂರ್ವ ಕೆತ್ತನೆಯ ಮರದ ಕಂಬಗಳ ಸಹಿತ ಪೂರ್ವಕಾಲದ ಗೋಡೆಗಳು ಕೂಡ ಮಳೆಯಿಂದ ಶೀತ ಆವರಿಸಿ ಕುಸಿಯುವಂತಾಗಿದೆ. ಅಲ್ಲಲ್ಲಿ ತಡೆಗಳನ್ನು ಅಳವಡಿಸಿ ತಾತ್ಕಾಲಿಕವಾಗಿ ಈ ಕಟ್ಟಡ ಉಳಿಸಿಕೊಳ್ಳುವ ಯತ್ನ ನಡೆದಿದೆ.ಮೊಕದ್ದಮೆ : ಈ ಎಲ್ಲವನ್ನು ನಿವೃತ್ತ ಅಧಿಕಾರಿ ವಿರೂಪಾಕ್ಷಯ್ಯ ಅವರು ರಾಜ್ಯ ಉಚ್ಛ ನ್ಯಾಯಾಲಯ ದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಗಮನ ಸೆಳೆದು; ಕೂಡಲೇ ಅರಮನೆಗೆ ಕಾಯಕಲ್ಪಕ್ಕೆ ಬೇಡಿಕೆ ಸಲ್ಲಿಸಿದ್ದರು. ಆ ನಂತರದಲ್ಲಿ ನ್ಯಾಯಾಲಯವು ಸಚಿತ್ರ ವರದಿ ಪಡೆದು ಸಂಬಂಧಪಟ್ಟವರಿಗೆ ನೋಟೀಸ್ ಜಾರಿಗೊಳಿಸಿತ್ತು.

ಆ ಬಳಿಕ ವರ್ಷಗಳ ತನಕ ಆಯಾ ಇಲಾಖೆಗಳ ಕಚೇರಿಗಳನ್ನು ತೆರವುಗೊಳಿಸದ ಸಂಬಂಧ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಮುಂದಿನ ಅಕ್ಟೋಬರ್ 31ರೊಳಗೆ; ವಿವಿಧ ಇಲಾಖೆಗಳ ತೆರವಿಗೆ ಗಡುವು ನೀಡಿದೆ. ಮಾತ್ರವಲ್ಲದೆ ಇದೇ ಆಗಸ್ಟ್ 1 ರಂದು ಖುದ್ದಾಗಿ ಪುರಾತತ್ವ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ವಾಸ್ತವ ವರದಿ ನೀಡಲು ಆದೇಶಿಸಿದೆ.

ಜಿಲ್ಲಾಡಳಿತ ಕ್ರಮ : ಈ ಎಲ್ಲದರ ನಡುವೆ ಈಗಾಗಲೇ ಜಿಲ್ಲಾಡಳಿತದಿಂದ ಪುರಾತತ್ವ ಇಲಾಖೆಯ ಅಧೀಕ್ಷಕ ನಿರ್ದೇಶಕಿ ಮೂರ್ತೇಶ್ವರಿ ಸಮ್ಮುಖದಲ್ಲಿ; ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಭೆ ನಡೆಸಿ ಆಯಾ ಇಲಾಖೆಗಳಿಗೆ ಕೋಟೆ ತೆರವಿಗೆ ಸೂಚಿಸಿದ್ದಾರೆ. ಅಂತೆಯೇ ಪುರಾತತ್ವ ಇಲಾಖೆಯಿಂದ ಶಿಥಿಲಗೊಂಡಿರುವ ಕೋಟೆಯ ಆವರಣ ಗೋಡೆ ಇತ್ಯಾದಿಗೆ ಕಾಯಕಲ್ಪಕ್ಕೆ ಮುಂದಾಗಿದ್ದಾಗಿದೆ.

ಎಂಟು ಇಲಾಖೆಗಳು : ಮುಖ್ಯವಾಗಿ ಕೋಟೆ ಆವರಣ ದೊಳಗೆ ನ್ಯಾಯಾಲಯ ಕಟ್ಟಡ; ಜಿ.ಪಂ., ಲೋಕೋಪಯೋಗಿ ಇಲಾಖೆ, ಗ್ರಂಥಾಲಯ, ಕೃಷಿ ಇಲಾಖೆ, ಭೂಮಾಪನ ಇಲಾಖೆ, ಹಿರಿಯರ ಕಲ್ಯಾಣ ಇಲಾಖೆ ಮುಂತಾದ ಎಂಟು ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳ ತೆರವಿಗೆ ಆದೇಶಿಸಲಾಗಿದೆ.

ತೆರವಿಗೆ ಸಮ್ಮತಿ: ಈ ಪೈಕಿ ಈಗಾಗಲೇ ನೂತನ ನ್ಯಾಯಾಲಯ ಕಟ್ಟಡ, ಜಿಲ್ಲಾ ಪಂಚಾಯಿತಿ ಕಟ್ಟಡ, ಲೋಕೋಪಯೋಗಿ ಕಟ್ಟಡಗಳು ನಿರ್ಮಾಣಗೊಂಡಿದ್ದು; ಬಹುತೇಕ ಅಕ್ಟೋಬರ್ (ಮೊದಲ ಪುಟದಿಂದ) ಕೊನೆಯೊಳಗೆ ತೆರವುಗೊಳಿಸಿ ಕೋಟೆಯಿಂದ ನೂತನ ಸಂಕೀರ್ಣಗಳಿಗೆ ಬದಲಾವಣೆಗೊಳ್ಳಲಿರುವದು ಖಾತರಿಯಾಗಿದೆ.

ಇನ್ನು ಕೃಷಿ ಇಲಾಖೆ ಅಧಿಕಾರಿಗಳು ಮಾತ್ರ ಕೋಟೆಯಲ್ಲಿರುವ ಜಂಟಿ ನಿರ್ದೇಶಕರ ಕಚೇರಿ ಸ್ಥಳಾಂತರಕ್ಕೆ ಎರಡು ವರ್ಷ ಕಾಲಾವಕಾಶ ಕೇಳಿರುವದಾಗಿ ಮೂಲಗಳಿಂದ ಗೊತ್ತಾಗಿದೆ. ಆದರೆ ನ್ಯಾಯಾಲಯ ಅಕ್ಟೋಬರ್ ವೇಳೆಗೆ ಗಡುವು ನೀಡಿರುವ ಕಾರಣ; ಈ ಸಂಬಂಧ ಆಗಸ್ಟ್ 1 ರಂದು ಸೂಕ್ತ ಕ್ರಮ ವಹಿಸಲಾಗುವದು ಎಂದು ಪುರಾತತ್ವ ಅಧಿಕಾರಿ ಖಚಿತಪಡಿಸಿದ್ದಾರೆ.

ವಸ್ತು ಸಂಗ್ರಹಾಲಯ ಇರಲಿದೆ : ಕೋಟೆಯಿಂದ ಮಿಕ್ಕೆಲ್ಲ ಕಚೇರಿಗಳನ್ನು ಸ್ಥಳಾಂತರಿಸಿದರೂ; ಭವಿಷ್ಯದಲ್ಲಿ ಕೋಟೆಯನ್ನು ವೀಕ್ಷಿಸಲು ಪ್ರವಾಸಿಗರಿಗಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಆ ಸಂದರ್ಭ ಪ್ರವಾಸೋದ್ಯಮ ಇಲಾಖೆಯಿಂದ ಅಲ್ಲಿರುವ ವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ ನೀಡುವದರೊಂದಿಗೆ; ಈಗಿರುವ ಕಟ್ಟಡದಲ್ಲೇ ಉಳಿಸಿಕೊಳ್ಳುವ ದಿಸೆಯಲ್ಲಿ ಕ್ರಮ ವಹಿಸಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಭಿಪ್ರಾಯಪಟ್ಟಿದ್ದಾರೆ.

ಮಾತ್ರವಲ್ಲದೆ ಕೋಟೆಯ ನಿವೃತ್ತ ನೌಕರರ ಸಂಘದ ಕಟ್ಟಡ, ಕೋಟೆ ಮಹಿಳಾ ಸಮಾಜ ಇತ್ಯಾದಿ ಎಲ್ಲವನ್ನು ತೆರವುಗೊಳಿಸಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.