ಸೋಮವಾರಪೇಟೆ, ಜು. 29: ದಲಿತರ ಮೇಲಿನ ದೌರ್ಜನ್ಯ ತಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ದಲಿತ ಹಿತರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಪಟ್ಟಣದಲ್ಲಿಂದು ಪ್ರತಿಭಟನಾ ಮೆರವಣಿಗೆ ನಡೆಯಿತು.
ಇಲ್ಲಿನ ವಿವೇಕಾನಂದ ವೃತ್ತದಿಂದ ಪಟ್ಟಣದ ಪ್ರಮುಖ ಮಾರ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಒಕ್ಕೂಟದ ಸದಸ್ಯರುಗಳು, ಇಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ತಾಲೂಕು ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ದಲಿತರ ಮೇಲಿನ ದೌರ್ಜನ್ಯಗಳು ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ನಿಲ್ಲಲಿ; ದೌರ್ಜನ್ಯ ಎಸಗುವವರಿಗೆ ಉಗ್ರ ಶಿಕ್ಷೆಯಾಗಲಿ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ದಲಿತರಿಗೆ ಕೃಷಿ ಭೂಮಿ ಹಾಗೂ ನಿವೇಶನ ಹಂಚಿಕೆ ಮಾಡಬೇಕು. ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ವಿಸ್ತರಿಸಬೇಕು. ಫಾರಂ ನಂ. 53, 57, 94 ಸಿ ಮತ್ತು 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸುವವರ ಪೈಕಿ ಉಳ್ಳವರ ಅರ್ಜಿ ತಿರಸ್ಕರಿಸಬೇಕು. ಅರ್ಹ ಫಲಾನುಭವಿಗಳಾದ ಕಡು ಬಡವರ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿರುವವರು ಮತ್ತು ಮನೆ ನಿರ್ಮಿಸಿಕೊಂಡಿರುವವರಿಗೆ ಫಾರಂ 57 ಮತ್ತು 94 ಸಿ. ಅಡಿಯಲ್ಲಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕು. ದಲಿತ ಹಾಗೂ ಪ್ರಗತಿಪರ ಹೋರಾಟಗಾರರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ಒಕ್ಕೂಟದ ಅಧ್ಯಕ್ಷ ಡಿ.ಎಸ್. ನಿರ್ವಾಣಪ್ಪ ಆಗ್ರಹಿಸಿದರು.
ಜಿಲ್ಲೆಯಲ್ಲಿರುವ ಸಿ ಮತ್ತು ಡಿ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ದಲಿತರಿಗೆ, ಬಡವರಿಗೆ ಹಂಚಬೇಕು. 6ನೇ ಹೊಸಕೋಟೆ ಅಂದಾನಿಪುರದಲ್ಲಿ ದಲಿತರು 15 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಪೊಲೀಸ್ ಇಲಾಖೆಗೆ ಸೇರಿಸಿರುವ ದನ್ನು ರದ್ದುಗೊಳಿಸಬೇಕು. ದಲಿತರ ಭೂಮಿ, ನಿವೇಶನಗಳ ಕಡತಗಳನ್ನು ತಕ್ಷಣ ವಿಲೇವಾರಿ/ಪೋಡಿ ಮಾಡಬೇಕು ಎಂಬ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಹಿತರಕ್ಷಣಾ ಒಕ್ಕೂಟದ ಕಾರ್ಯದರ್ಶಿ ಜೆ.ಆರ್. ಪಾಲಾಕ್ಷ, ಪ್ರಮುಖರಾದ ಸೋಮಪ್ಪ, ರಾಜಪ್ಪ, ಹೊನ್ನಪ್ಪ, ಹನುಮಯ್ಯ, ಜಯಪ್ಪ ಹಾನಗಲ್, ನಾಗರಾಜ್, ತಮ್ಮಯ್ಯ, ರಾಮ್ಕುಮಾರ್, ರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.