ಶನಿವಾರಸಂತೆ, ಜು. 29: ಒಂದು ವರ್ಷದ ಹಿಂದೆ ಅಪಘಾತಕ್ಕೊಳಗಾಗಿ ಚಿಕಿತ್ಸೆ ಕೊಡಿಸಿದರೂ ಚೇತರಿಕೆ ಕಾಣದೆ ಹಾಸಿಗೆ ಹಿಡಿದಿದ್ದ ಪತ್ನಿಯ ಸ್ಥಿತಿ ಕಂಡು ಕೂಲಿಕಾರ್ಮಿಕ ಕೆ.ಕೆ. ರಾಜು (70) ಎಂಬಾತ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಅಜ್ಜಳ್ಳಿ ಗ್ರಾಮದಲ್ಲಿ ನಡೆದಿದೆ.

ಸುಮಾರು ಒಂದು ವರ್ಷದ ಹಿಂದೆ ಮೃತ ರಾಜುವಿನ ಪತ್ನಿ ಲಕ್ಷ್ಮಿಗೆ ಅಪಘಾತವಾಗಿ ಮಂಗಳೂರು ವೆನ್‍ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ, ಫಲಕಾರಿಯಾಗದೆ ಹಾಸಿಗೆ ಹಿಡಿದಿದ್ದರು. ಪತ್ನಿಯ ಸ್ಥಿತಿ ಕಂಡು ರಾಜು ಬಹಳ ದುಃಖದಲ್ಲಿದ್ದರೆನ್ನಲಾಗಿದ್ದು, ಭಾನುವಾರ ಸಂಜೆ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ವಿಷ ಸೇವಿಸಿ ಮನೆಯ ಹಿಂಬದಿ ತೋಟದಲ್ಲಿ ಮಲಗಿದ್ದಾರೆ. ಸಂಶಯಗೊಂಡ ಮಕ್ಕಳು ತಕ್ಷಣ ಆಂಬ್ಯುಲೆನ್ಸ್‍ನಲ್ಲಿ ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಮಗ ಶಿವ ಸೋಮವಾರ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.