ಶ್ರೀಮಂಗಲ, ಜು. 29: ಜಿಲ್ಲೆಯಲ್ಲಿ ಬೆಳೆಹಾನಿಗೆ ತುತ್ತಾಗಿರುವ ರೈತರಿಗೆ ಎನ್.ಡಿ.ಅರ್.ಎಫ್. ನಿಯಮಾನುಸಾರ 5ಎಕರೆಗೆ ರೂ. 36 ಸಾವಿರ ಪರಿಹಾರ ನೀಡಬೇಕಾಗಿದ್ದು, ಈಗಾಗಲೇ ಇದಕ್ಕೆ ಅನುಗುಣವಾದ ಜಾಗದ ದಾಖಲಾತಿಗೆ ಕಡಿಮೆ ಪರಿಹಾರ ದೊರೆತಿದ್ದರೆ, ಬಾಕಿ ಪರಿಹಾರ ಪಾವತಿಸುವ ಬಗ್ಗೆ ಸರ್ಕಾರದ ಗಮನಕ್ಕೆ ಜಿಲ್ಲಾಧಿಕಾರಿಗಳು ತಂದಿದ್ದಾರೆ. ಆದ್ದರಿಂದ ಮುಂದಿನ ದಿನಗಳಿಂದ ಪರಿಹಾರ ದೊರೆಯಲಿದೆ ಎಂದು ಶ್ರೀಮಂಗಲ ಹೋಬಳಿ ಕಂದಾಯ ಪರಿವೀಕ್ಷಕ ದೇವಯ್ಯ ಮಾಹಿತಿ ನೀಡಿದರು.

ಶ್ರೀಮಂಗಲ ಗ್ರಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಚೋಕೀರ ಕಲ್ಪನಾ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಗ್ರ್ರಾಮ ಸಭೆಯಲ್ಲಿ ಅವರು ಗ್ರಾಮಸ್ಥರ ಪ್ರಶ್ನೆಗೆ ಈ ಮಾಹಿತಿ ನೀಡಿದರು.

ಈಗಾಗಲೇ ಶ್ರೀಮಂಗಲ ಹೋಬಳಿ ವ್ಯಾಫ್ತಿಯಲ್ಲಿ 4,979 ಪರಿಹಾರ ಅರ್ಜಿಗಳು ಬಂದಿದೆ. ಇವುಗಳಲ್ಲಿ ಬಹುತೇಕ ಅರ್ಜಿಗಳಿಗೆ ಪೂರ್ಣ ಪ್ರಮಾಣದ ಪರಿಹಾರ ಸಂದಾಯವಾಗಿಲ್ಲ. 2 ಹೆಕ್ಟೇರ್ ಗರಿಷ್ಠ ಮಿತಿಯಲ್ಲಿ 36 ಸಾವಿರ ಪರಿಹಾರ ಪಾವತಿಸಬೇಕಾಗಿದೆ. ಆದರೆ ಇದಕ್ಕೆ ಅನುಗುಣವಾಗಿ ಪರಿಹಾರ ಪಾವತಿಯಾಗದ ಬಗ್ಗೆ ದಿನನಿತ್ಯ ಅರ್ಜಿ ಸಲ್ಲಿಸಿದ ರೈತರು ವಿಚಾರಿಸುತ್ತಿದ್ದು, ಈ ಬಗ್ಗೆ ತಹಶೀಲ್ದಾರರ ಗಮನಕ್ಕೆ ಕಂದಾಯ ಪರಿವೀಕ್ಷಕರು ತಂದಿದ್ದು, ಈ ಹಿನ್ನಲೆ ಇತ್ತೀಚೆಗೆ ಹಿಂದಿನ ಸರ್ಕಾರದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಜಿಲ್ಲೆಗೆ ಆಗಮಿಸಿದ ಸಂದರ್ಭ ಜಿಲ್ಲಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅದ್ದರಿಂದ ಬಾಕಿ ಇರುವ ಪರಿಹಾರ ಹಣವನ್ನು ನಿಯಮಾನುಸಾರ ಪಾವತಿಸಲು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎಂದು ದೇವಯ್ಯ ಸಭೆಯಲ್ಲಿ ವಿವರಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಮಾತನಾಡಿ, ಗ್ರ್ರಾಮದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಅವುಗಳನ್ನು ಅರಣ್ಯಕ್ಕಟ್ಟಲು ಕ್ರಮ ಕೈಗೊಳ್ಳಬೇಕು ಎಂದರು. ಕಾಳಿಮಾಡ ಪ್ರಶಾಂತ್, ತಮ್ಮು ಮುತ್ತಣ್ಣ ಬಿ.ಎಸ್.ಎನ್.ಎಲ್. ದುಸ್ಥಿತಿಯಿಂದ ಈ ವ್ಯಾಪ್ತಿಯ ಜನರಿಗೆ ತೊಂದರೆಯಾಗುತ್ತಿದೆ. ಇಂಟರ್‍ನೆಟ್ ತೊಂದರೆಯಿಂದ ಕೃಷಿ ಇಲಾಖೆ, ಬ್ಯಾಂಕ್, ಗ್ರಾ.ಪಂ. ಅಂಚೆ ಕಚೇರಿಗಳಲ್ಲಿ ಜನರಿಗೆ ಸೇವೆ ದೊರೆಯುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿಯಿಂದ ಸಂಸದರ ಗಮನ ಸೆಳೆದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

ಕೆ.ಎನ್. ಸುದೀಪ್ ಮಾತನಾಡಿ, ಕಾಕೂರು ಅಂಚೆ ಕಚೇರಿ ಸಮೀಪ ಅಳವಡಿಸಿರುವ ಟ್ರಾನ್ಸ್‍ಫಾರ್ಮರ್ ಪದೇ ಪದೇ ಕೆಟ್ಟುಹೋಗುತ್ತಿದ್ದು, ಇಲ್ಲಿಂದ 3 ಕಿ.ಮೀ. ಇದೇ ಟ್ರಾನ್ಸ್‍ಫಾರ್ಮರ್‍ನಿಂದ ವಿದ್ಯುತ್ ಸಂಪರ್ಕ ನೀಡಲಾಗಿದೆ. ಜಂಗಲ್ ಕಟ್ಟಿಂಗ್ ಮಾಡಿಲ್ಲ ಎಂದು ಶ್ರೀಮಂಗಲ ಶಾಖಾಧಿಕಾರಿ ವಿಜಯ್ ಕುಮಾರ್ ಅವರಲ್ಲಿ ಒತ್ತಾಯಿಸಿದರು.

ಶ್ರೀಮಂಗಲ ಕರುಣಾ ಟ್ಟಸ್ಟ್‍ನ ವೈದ್ಯಾಧಿಕಾರಿ ಡಾ. ಗೌತಮ್ ಗ್ರ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿ ಆರೋಗ್ಯ ಕೇಂದ್ರದಲ್ಲಿ ಪ್ರಸಕ್ತ ಸಾಲಿನಲ್ಲಿ 83 ಹೆರಿಗೆಯಾಗಿದೆ. ಕುಟುಂಬ ಯೋಜನೆಯಡಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದಿದೆ. ನಮ್ಮ ಆರೋಗ್ಯ ಕೇಂದ್ರವು 24 ಗಂಟೆ ಹೆರಿಗೆಗಾಗಿ ಬರುವ ಮಹಿಳೆಯರಿಗೆ ಸೇವೆ ನೀಡುತ್ತದೆ. ಆದರೆ ಬೇರೆ ಆರೋಗ್ಯ ಸಮಸ್ಯೆಗಳಿಗಾಗಿ 24 ಗಂಟೆ ಸೇವೆ ನೀಡಲು ಸೌಲಭ್ಯ ಇರುವದಿಲ್ಲ ಎಂದರು.

ಪಶು ವೈದ್ಯಾಧಿಕಾರಿ ಡಾ.ಬಿ.ಜಿ. ಗಿರೀಶ್ ಅವರು ಮಳೆಯಿಂದ ಜಾನುವಾರು ಸಾವಿಗೀಡಾದರೆ ಸರ್ಕಾರದಿಂದ ಪರಿಹಾರವಿದೆ. ಅದೇ ದಿನ ಮಾಹಿತಿ ನೀಡುವಂತೆ ಮತ್ತು ಮೇವು ಕತ್ತರಿಸುವ ಯಂತ್ರ ಸಬ್ಸಿಡಿಯಲ್ಲಿ ಲಭ್ಯವಿದ್ದು, ಬೇಕಾದವರು ಇಲಾಖೆಯಿಂದ ಪಡೆದುಕೊಳ್ಳಲು ಮಾಹಿತಿ ನೀಡಿದರು.

ಸಭೆಯಲ್ಲಿ ಶ್ರೀಮಂಗಲ ಹೋಬಳಿ ಅತಿ ದೊಡ್ಡ ವ್ಯಾಪ್ತಿ ಹಾಗೂ ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ಕನಿಷ್ಟ 5 ಸಾವಿರ ಟಾರ್ಪಲ್ ಒದಗಿಸಬೇಕು. ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವದರಿಂದ ಭತ್ತದ ಬಿತ್ತನೆ ಬೀಜ ಕೊಳೆತು ಹೋಗುವ ಹಾಗೂ ಕೊಚ್ಚಿ ಹೋಗುವ ಕಾರಣದಿಂದ ಹೆಚ್ಚಿನ ಬಿತ್ತನೆ ಬೀಜ ನೀಡುವಂತೆ ಸಭೆಯಲ್ಲಿ ನಿರ್ಣಯ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತರಲು ನಿರ್ಧರಿಸಲಾಯಿತು.

ವೇದಿಕೆಯಲ್ಲಿ ನೋಡಲ್ ಅಧಿಕಾರಿ ಸೀತಾಲಕ್ಷ್ಮಿ, ಜಿ.ಪಂ. ಸದಸ್ಯ ಶಿವುಮಾದಪ್ಪ, ಎ.ಪಿ.ಎಂ.ಸಿ. ಸದಸ್ಯ ಕಳ್ಳಂಗಡ ಬಾಲಕೃಷ್ಣ, ಉಪಾಧ್ಯಕ್ಷ ಕಳ್ಳಂಗಡ ರಜತ್‍ಪೂವಣ್ಣ, ಸದಸ್ಯರುಗಳಾದ ಅಜ್ಜಮಾಡ ಜಯ, ಚೋನೀರ ಕಾಳಯ್ಯ, ಅಜ್ಜಮಾಡ ಲಲಿತಾ ನಾಚಪ್ಪ, ಅಜ್ಜಮಾಡ ರೇಣು, ಮಲ್ಲಿಗೆ, ಅಮ್ಮಣ, ಕಾಳಿ, ಚಂದ್ರ, ಮಂಜು, ಪಿ.ಡಿ.ಓ. ಸತೀಶ್ ಹಾಜರಿದ್ದರು.