ಮಡಿಕೇರಿ, ಜು.27: ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಫೋಕ್ಸೋ ಕಾಯ್ದೆ ಜಾರಿಗೊಳಿಸಲಾಗಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ನೊಂದ ಮಕ್ಕಳಿಗೆ ನ್ಯಾಯ ದೊರಕಿಸಲು ಮುಂದಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ವಿ.ವಿ.ಮಲ್ಲಾಪುರ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಕ್ಕಳ ವಿಶೇಷ ಪೊಲೀಸ್ ಘಟಕ ಇವರ ವತಿಯಿಂದ ಫೋಕ್ಸೋ ಕಾಯ್ದೆ, ಬಾಲ ನ್ಯಾಯ ಮಂಡಳಿ ಹಾಗೂ ಬಾಲ್ಯ ವಿವಾಹ ನಿಷೇಧ ಮತ್ತಿತರ ವಿಷಯಗಳ ಕುರಿತು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನ ಬಳಿ ಇರುವ ಪೊಲೀಸ್ ಕ್ಯಾಂಟೀನ್ ಮೇಲಿನ ಸಭಾಂಗಣದಲ್ಲಿ ನಡೆದ ಕಾನೂನು ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಫೋಕ್ಸೋ) ಜಾರಿಗೊಳಿ ಸಲಾಗಿದ್ದು, ತನಿಖಾಧಿಕಾರಿಗಳಾದ ಪೊಲೀಸರು ಕಾನೂನು ಮತ್ತು ನಿಯಮಗಳನ್ನು ಪಾಲಿಸಿ ನೊಂದವರಿಗೆ ನ್ಯಾಯ ನೀಡಬೇಕು. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜೊತೆಗೆ, ಕಾನೂನು ಮತ್ತು ಮಕ್ಕಳ ವಿಶೇಷ ಘಟಕಕ್ಕೆ ವಿಶೇಷ ಅಧಿಕಾರವಿದ್ದು, ಅದರಂತೆ ನೊಂದ ಮಕ್ಕಳ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಸಲಹೆ ನೀಡಿದರು.
ನೊಂದವರು ದೂರು ನೀಡಿದಾಗ ನೊಂದ ಬಾಲಕಿಯ ಹೆಸರು, ವಿಳಾಸ ಹಾಗೂ ಯಾವದೇ ರೀತಿಯ ಗುರುತು ಸೋರಿಕೆಯಾಗದಂತೆ ಗಮನಹರಿಸು ವದು ತನಿಖಾಧಿಕಾರಿಯ ಕರ್ತವ್ಯ ವಾಗಿದೆ. ಜೊತೆಗೆ ಮಾಧ್ಯಮದವರು ಸಹ 18 ವರ್ಷದೊಳಗಿನ ನೊಂದ ಬಾಲಕಿಯರ ಹೆಸರು, ವಿಳಾಸವನ್ನು ಪ್ರಕಟ/ ಪ್ರಸಾರ ಮಾಡುವಂತಿಲ್ಲ, ಮಕ್ಕಳ ಭಾವಚಿತ್ರವನ್ನು ಮುದ್ರಣ ಮಾಡುವಂತಿಲ್ಲ. ದೂರು ದಾಖಲಿಸಿಕೊಂಡು ವೈದ್ಯಕೀಯ ಉಪಚಾರ ನಡೆದ ನಂತರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ನೀಡಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಮಧ್ಯಂತರ ಪರಿಹಾರ ನೀಡಲಾಗುವದು.
ನೊಂದ ಬಾಲಕಿಯ ಹೇಳಿಕೆ ಯನ್ನು ಮಕ್ಕಳ ವಿಶೇಷ ಘಟಕದಲ್ಲಿ ಪಡೆಯಬೇಕು. ಪೊಲೀಸರು ಸಮವಸ್ತ್ರದಲ್ಲಿ ಹೇಳಿಕೆ ಪಡೆಯ ಬಾರದು, ಹೇಳಿಕೆಯು ನೊಂದವರ ಭಾಷೆಯಲ್ಲಿಯೇ ಇರಬೇಕು. ಪೊಲೀಸ್ ಠಾಣೆಯಲ್ಲಿ ನೊಂದವ ರನ್ನು ರಾತ್ರಿ ಸಮಯದಲ್ಲಿ ಇರಿಸಿಕೊಳ್ಳಬಾರದು, ನೊಂದ ಮಕ್ಕಳು ಮೂಗರು, ಕಿವುಡರು ಆಗಿದ್ದಲ್ಲಿ ತಜ್ಞರನ್ನು ಆಹ್ವಾನಿಸಿ ಹೇಳಿಕೆ ಪಡೆಯಬೇಕು. ಹೇಳಿಕೆ ಪಡೆಯುವಾಗ ವೀಡಿಯೊ ರೇಕಾರ್ಡ್ ಮಾಡಿಕೊಳ್ಳ ಬೇಕು, ಇದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ನುಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ವಿಜಯ ಕುಮಾರ್ ಅವರು ಬಾಲ ನ್ಯಾಯ ಮಂಡಳಿ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ವಿವರಿಸಿದರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಅವರು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವ ಬಗ್ಗೆ ಮಾತನಾಡಿದರು.
ಡಿವೈಎಸ್‍ಪಿ ಮುರಳಿಧರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ, ವಕೀಲರು, ವಿವಿಧ ಠಾಣೆಯ ಪೊಲೀಸ್ ಅಧಿಕಾರಿಗಳು, ಮಕ್ಕಳ ರಕ್ಷಣೆಗಾಗಿ ವಿಶೇಷ ಕಾಳಜಿ ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಇತರರು ಇದ್ದರು.
ನಗರ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಸ್ವಾಗತಿಸಿದರು, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಬಿ.ಎಸ್. ಜಯಪ್ಪ ನಿರೂಪಿಸಿದರು, ಕುಮಾರಿ ಪ್ರಾರ್ಥಿಸಿದರು.