ಮಡಿಕೇರಿ, ಜು. 27: ಮೊನ್ನೆ ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಕುಟ್ಟ ವಿಭಾಗದ ಜಿಲ್ಲಾ ಪಂಚಾಯತ್ ಸದಸ್ಯ ಶಿವು ಮಾದಪ್ಪ ‘ಶಕ್ತಿ’ಯ ಬಗ್ಗೆ ಆರೋಪ ಮಾಡಿದ್ದಾರೆ. ಕೇಂದ್ರ ಸರಕಾರದ ಪ್ರಶಸ್ತಿ ಪಡೆದ ಪಂಚಾಯತ್ ಅವ್ಯವಸ್ಥೆಯಿಂದ ಕೂಡಿದೆ ಎಂದು ‘ಶಕ್ತಿ’ಯಲ್ಲಿ ವರದಿಯಾಗಿದ್ದಕ್ಕೆ ಆಕ್ರೋಶಗೊಂಡಿದ್ದ ಅವರು ಹಣ ಪಡೆದು ವರದಿ ಪ್ರಕಟಿಸಲಾಗಿದೆ ಎಂದು ಬಹುಶಃ ಅವರ ರಾಜಕೀಯ ಅನುಭವದಂತಹ ಮಾತುಗಳನ್ನಾಡಿದ್ದಾರೆ.

ದಕ್ಷಿಣ ಕೊಡಗಿನ ಗಡಿಯಂಚಿನ ಕುಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆ ಪಟ್ಟಣದ ಹೃದಯ ಭಾಗದಲ್ಲಿ ಒಂದು ಸುತ್ತು ವಾಸ್ತವದ ಕಡೆಗೆ ನೋಟ ಹರಿಸಿದರೆ ಜನಪ್ರತಿನಿಧಿಗಳು ಮತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ಈ ಮಂದಿ ಹೊಂದಿರುವ ಕಾಳಜಿಗೆ ಕನ್ನಡಿ ಹಿಡಿದಂತಿದೆ.

ಇತ್ತೀಚೆಗೆ ಕೊಡಗು ಜಿ.ಪಂ. ಅಧ್ಯಕ್ಷರ ಸಹಿತ ಜನಪ್ರತಿನಿಧಿಗಳ ಪ್ರವಾಸ ಸಂದರ್ಭ ಕುಟ್ಟ ಪಟ್ಟಣದ ವಾಸ್ತವದೆಡೆಗೆ ‘ಶಕ್ತಿ’ ವರದಿಗಾಗಿ ನಾನು ಕೂಡಾ ತೆರಳಿದ್ದೆ.

ಆಗ ನಮ್ಮ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಷ್ಟರ ಮಟ್ಟಿಗೆ ಇಲ್ಲಿ ಜನಹಿತವನ್ನು ಇಟ್ಟುಕೊಂಡು ಸರಕಾರದ ಯೋಜನೆ ಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂಬ ವಾಸ್ತವ ಗೋಚರವಾಯಿತು.

ಊಟದ ಸಂದರ್ಭದಲ್ಲಿ ಅಲ್ಲಿನ ಚೇಂಬರ್ ಅಧ್ಯಕ್ಷ ಮುಕ್ಕಾಟೀರ ನವೀನ್ ಅಯ್ಯಪ್ಪ ಅವರು ನನ್ನನ್ನು ಕುಟ್ಟ ಪಟ್ಟಣಕ್ಕೆ ಪ್ರದಕ್ಷಿಣೆ ಹಾಕಿಸಿ ವಾಸ್ತವ ವಿವರಿಸಿದ್ದರು. ಸತ್ಯಾಂಶ ಕಂಡು ಚಿತ್ರ ಸಹಿತ ವರದಿ ಪ್ರಕಟಿಸಿದ್ದೆ.

ಈ ಬಗ್ಗೆ ‘ಶಕ್ತಿ’ ಬೆಳಕು ಚೆಲ್ಲಿದ್ದು, ಯಾರೊಬ್ಬರ ಟೀಕೆ ಅಥವಾ ಪ್ರಲೋಭನೆಗೆ ಹಾಗೂ ಆಮಿಷಕ್ಕೆ ಒಳಗಾಗದೆ ನೈಜತೆಯನ್ನು ತೋರಿಸುವ ಪ್ರಯತ್ನ ನಡೆಸಿತ್ತಷ್ಟೆ. ಕುಟ್ಟದಲ್ಲಿ ತಾ. 10 ರಂದು ನಡೆದ ಆ ಮುನ್ನ ನಡೆದ ಗ್ರಾಮ ಸಭೆಯಲ್ಲಿ ಸ್ವತಃ ಜಿ.ಪಂ. ಸದಸ್ಯ ಶಿವು ಮಾದಪ್ಪ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಈ ಪಂಚಾಯಿತಿ ವ್ಯಾಪ್ತಿಯ ಕೆಲವಷ್ಟು ಸಮಸ್ಯೆಗಳನ್ನು ನೇರವಾಗಿ ‘ಶಕ್ತಿ’ ನೋಟ ಹರಿಸಿ ಸುದ್ದಿ ಪ್ರಕಟಿಸಿತ್ತು,

ಆ ಪ್ರಕಾರ ಪಟ್ಟಣದ ನಡುವೆಯೇ ಕುಟ್ಟ ಗ್ರಾ.ಪಂ. ಕಾರ್ಯಾಲಯವಿದೆ; ಈ ಕಾರ್ಯಾಲಯದ ಒಂದು ಬದಿ ಅಂಗನವಾಡಿ ಕೇಂದ್ರವಿದೆ. ಅಲ್ಲಿ ಪುಟಾಣಿ ಮಕ್ಕಳು ನಿತ್ಯ ಬಂದು ಹೋಗುವವರಿದ್ದಾರೆ. ಈ ಅಂಗನವಾಡಿ ಕಟ್ಟಡದ ಒತ್ತಿನಲ್ಲಿಯೇ ಪಂಚಾಯಿತಿಯಿಂದ ಒಣ ಕಸ ಸಂಗ್ರಹಾಗಾರ ಸ್ಥಾಪಿಸಲಾಗಿದೆ. ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ಇನ್ನೊಂದೆಡೆ ಈ ಕಸಗಾರದಿಂದ ಅನತಿ ದೂರದಲ್ಲಿ ಗಿರಿಜನ ಹೆಣ್ಣು ಮಕ್ಕಳ ವಸತಿ ನಿಲಯವಿದ್ದು, ಸೊಳ್ಳೆ ಕಾಟದಿಂದ ಆ ಮಕ್ಕಳು ಕತ್ತಲೆಯ ನಡುವೆ ಅನುಭವಿಸುತ್ತಿದ್ದ ಯಾತನೆ ಸ್ವತಃ ಜನಪ್ರತಿನಿಧಿಗಳು ಗಮನಿಸಿದ್ದಾರೆ. ಇನ್ನು ಕುಟ್ಟ ಮಾರುಕಟ್ಟೆಯ ಆವರಣದಲ್ಲಿ ಹಸಿಕಸ ಘಟಕದೊಂದಿಗೆ ಅಲ್ಲಿ ಸೊಳ್ಳೆ, ನೊಣಗಳ ಸಹಿತ ದುರ್ನಾತ ಅನುಭವಿಸುತ್ತಿರುವ ಯಾತನೆಯ ಬಗ್ಗೆ ಸ್ವತಃ ಅಲ್ಲಿನ ವ್ಯಾಪಾರಿಗಳು ಹಾಗೂ ಅಕ್ಕ ಪಕ್ಕ ನಿವಾಸಿಗಳು ಹೇಳಿದ್ದಾರೆ ಹೊರತು ‘ಶಕ್ತಿ’ ಏನನ್ನೂ ಸೃಷ್ಟಿಸಿ; ಆಮಿಷಗಳಿಗೆ ಒಳಗಾಗಿ ಸುದ್ದಿ ಬಿತ್ತರಿಸುವ ಅಗತ್ಯ ಇರಲಿಲ್ಲ.

ಗ್ರಾ.ಪಂ. ಬಳಿಯೇ ಹೆದ್ದಾರಿಯಲ್ಲಿ ಮೀನು ಮಾರಾಟ, ಆಟೋ ನಿಲ್ದಾಣದಲ್ಲಿ ಚಾಲಕರ ಮತ್ತು ಪ್ರಯಾಣಿಕರ ಪಾಡು ಬಗ್ಗೆಯೂ ನನ್ನೊಂದಿಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದರು.

ಆ ಕ್ಷೇತ್ರದ ಓರ್ವ ಜವಾಬ್ದಾರಿಯುತ ಜಿ.ಪಂ. ಸದಸ್ಯರಾಗಿರುವವರು ವಾಸ್ತವದ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗುವ ಬದಲಿಗೆ, ‘ಶಕ್ತಿ’ ದೈನಿಕ ಅಥವಾ ಪತ್ರಿಕೆಯ ಸುದ್ದಿ ಬಗ್ಗೆ ಆಮಿಷದ ಆರೋಪವನ್ನು ಜವಾಬ್ದಾರಿಯುತ ಜಿ.ಪಂ. ಸಭೆಯಲ್ಲಿ ಮಾಡುವ ಮುನ್ನ; ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಸ್ವಚ್ಛ ಸಮಾಜವಿರಬೇಕು ಎಂಬ ಆಶಯವುಳ್ಳ ನಮಗೆ ಕೊಳಕು ಮನಸ್ಸಿನವರ ಆರೋಪಗಳ ಬಗ್ಗೆ ಧಕ್ಕೆ ಅಲ್ಲದಿದ್ದರೂ ತುಂಬಿದ ಸಭೆಯಲ್ಲಿ ಇಂತಹ ಮಾತುಗಳನ್ನು ಕೇಳಿದವರು ‘ಹೌದೆ?’ ಎಂದು ಕೂಡ ಪ್ರಶ್ನಿಸಬಾರದೆನ್ನುವದಕ್ಕೋಸ್ಕರ ಈ ಪ್ರತಿಕ್ರಿಯೆ.

-ಚಿ.ನಾ. ಸೋಮೇಶ್