ಸೋಮವಾರಪೇಟೆ, ಜು.27: ಒಕ್ಕಲಿಗರ ಯುವ ವೇದಿಕೆ ವತಿಯಿಂದ ಸಮೀಪದ ಹೊಸಳ್ಳಿ ಗ್ರಾಮದ ಡಿ.ಈ. ಕುಶಾಲಪ್ಪ ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ 6ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಒಕ್ಕಲಿಗರು, ಕೆಸರು ಗದ್ದೆಯಲ್ಲಿ ಕ್ರೀಡಾಸ್ಪೂರ್ತಿ ಮೆರೆದರು.
ಕೆಸರುಮಯ ಗದ್ದೆಯಲ್ಲಿ ಕ್ರೀಡಾಪಟುಗಳು ವಿವಿಧ ಸ್ಪರ್ಧೆಯಲ್ಲಿ ಸೆಣಸಿದರು. ಮಳೆ ಬಿಡುವು ನೀಡಿದ್ದ ಹಿನ್ನೆಲೆ ಗದ್ದೆಗಳತ್ತ ಆಗಮಿಸಿದ ಕ್ರೀಡಾಭಿಮಾನಿಗಳು, ತಮ್ಮ ನೆಚ್ಚಿನ ತಂಡಕ್ಕೆ ಶಿಳ್ಳೆ-ಚಪ್ಪಾಳೆಯ ಮೂಲಕ ಪ್ರೋತ್ಸಾಹ ನೀಡಿದರು.
ಮಳೆಯಿಲ್ಲದ ಹಿನ್ನೆಲೆ ಹೊಳೆಯ ನೀರನ್ನು ಗದ್ದೆಯಲ್ಲಿ ಸಂಗ್ರಹಿಸಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಗ್ರಾಮೀಣ ಜನರ ಅಚ್ಚುಮೆಚ್ಚಿನ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತ ಕುಟುಂಬದ ಪುರುಷರು, ಮಹಿಳೆ ಯರು, ಯುವಕ, ಯುವತಿಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಕೆಲವೊಮ್ಮೆ ಜಿಟಿಜಿಟಿ ಬೀಳುತ್ತಿದ್ದ ಮಳೆಯ ನಡುವೆಯೂ ಪಂದ್ಯಾಟಗಳು ಮುಂದುವರೆದವು. ಕೆಸರುಮಯವಾ ಗಿದ್ದ ವಾಲಿಬಾಲ್ನ ಮೇಲೆ ಹಿಡಿತ ಸಾಧಿಸಲು ಪುರುಷರು ಹಾಗೂ ಮಹಿಳೆಯರು ಹರಸಾಹಸ ಪಡಬೇಕಾಯಿತು.
ಪ್ರಶಸ್ತಿಯ ಗುರಿಯೊಂದಿಗೆ ಯುವಕರು ಬಾಲ್ಗೋಸ್ಕರ ಕೆಸರಿನಲ್ಲಿ ಬಿದ್ದು, ಅಂಕ ಪಡೆಯುವ ಯತ್ನ ಮಾಡುತ್ತಿದ್ದರು. ತಮ್ಮೂರಿನ ತಂಡವನ್ನು ಗೆಲ್ಲಿಸಲು ಗ್ರಾಮಸ್ಥರು ಚಪ್ಪಾಳೆಯ ಮೂಲಕ ಪ್ರೋತ್ಸಾಹ ನೀಡುತ್ತಿದ್ದರು. ಪೋಷಕರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಸಂದರ್ಭ ಜೊತೆಯಲ್ಲಿ ಬಂದಿದ್ದ ಪುಟ್ಟ ಮಕ್ಕಳೆಲ್ಲ ಕೆಸರಿನಲ್ಲಿ ಓಡಿ ಬಿದ್ದೆದ್ದು ನೆರದಿದ್ದವರಿಗೆ ಮನೋರಂಜನೆ ನೀಡಿದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಉದ್ಯಮಿ ಹರಪಳ್ಳಿ ರವೀಂದ್ರ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ನಡೆಸುವದರ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು. ಜನಾಂಗದವರು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರೆಯಬೇಕು. ಗ್ರಾಮೀಣ ಭಾಗ ಅಭಿವೃದ್ಧಿಯಾಗಬೇಕಾದರೆ, ಎಲ್ಲರೂ ಒಟ್ಟಾಗಿ ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಬೇಕು. ಆದರೆ ತಾಲೂಕು ಕೇಂದ್ರದಲ್ಲಿ ಸರ್ಕಾರಿ ಆಸ್ಪತ್ರೆ ಇದ್ದರೂ, ಸೂಕ್ತ ಚಿಕಿತ್ಸೆಗೆ ನಗರ ಪ್ರದೇಶಗಳಿಗೆ ತೆರಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು
ಗ್ರಾಮೀಣ ಕ್ರೀಡೆಗಳು ಮರೆ ಯಾಗುತ್ತಿರುವ ಇಂದಿನ ದಿನಗಳಲ್ಲಿ ಒಕ್ಕಲಿಗರ ಯುವವೇದಿಕೆ ಯವರು ಕಳೆದ 5 ವರ್ಷಗಳಿಂದ ಕೆಸರುಗದ್ದೆ ಕ್ರೀಡಾಕೂಟವನ್ನು ನಡೆಸಿಕೊಂಡು ಬರುತ್ತಿರುವದು ಶ್ಲಾಘನೀಯ ಎಂದರು.
ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ ಮಾತನಾಡಿ, ಕೊಡಗಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರು ಇದ್ದರೂ, ಸಂಘಟನೆಯಲ್ಲಿ ಹಿಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಘಟನೆಯಾಗಬೇಕು ಎಂದು ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್, ಜಿಪಂ ಸದಸ್ಯೆ ಪೂರ್ಣಿಮಾ ಗೋಪಾಲ್, ದಾನಿಗಳಾದ ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಹಿರಿಯರಾದ ಮಾದಪ್ಪ, ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಎಚ್. ತಿಮ್ಮಯ್ಯ, ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಜಯಣ್ಣ, ಅಬ್ಬೂರುಕಟ್ಟೆ ಒಕ್ಕಲಿಗರ ಸಂಘದ ಅಧ್ಯಕ್ಷ ವಿನೋದ್ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯೆ ಸುಜಾತ ಚಂಗಪ್ಪ, ಹೊಸಳ್ಳಿ ಗ್ರಾಮಾಧ್ಯಕ್ಷ ಎಚ್.ಕೆ. ಲೋಕೇಶ್ ಮತ್ತಿತರರು ಇದ್ದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಭಿಮಾನಿಗಳು, ಕ್ರೀಡಾಪಟುಗಳಿಗೆ ಬಿಸಿ ಬಿಸಿ ಬೆಲ್ಲದ ಕಾಫಿ ವಿತರಿಸಲಾಯಿತು.