ಮಡಿಕೇರಿ, ಜು. 27 : ಗ್ರಾಮ ಪಂಚಾಯಿತಿಗಳು ಆಯಾ ವ್ಯಾಪ್ತಿಯಲ್ಲಿನ ಕೈಗಾರಿಕೆಗಳಿಗೆ ವಿಧಿಸುತ್ತಿರುವ ತೆರಿಗೆ ಹಾಗೂ ಶುಲ್ಕ ಮತ್ತು ವಸೂಲಿ ಕ್ರಮದ ಬಗ್ಗೆ ವಿವರವಾದ ಹೊಸ ಮಾರ್ಗ ಸೂಚಿಯನ್ನು ಸರಕಾರದಿಂದ ಹೊರಡಿಸಲಾಗಿದೆ. ಸರಕಾರದ ಈ ಹೊಸ ಸುತ್ತೋಲೆಯಲ್ಲಿ ಕೆ.ಐ.ಎ.ಡಿ.ಬಿ.ಯ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿನ ಆಸ್ತಿ ತೆರಿಗೆಯನ್ನು ಆನ್‍ಲೈನ್ ಸೇವೆ ಮೂಲಕ ಕೆ.ಐ.ಎ.ಡಿ.ಬಿ.ಯು ವಸೂಲಿ ಮಾಡಿ ತಕ್ಷಣವೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಪಾವತಿ ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.ಗ್ರಾಮ ಪಂಚಾಯಿತಿಗಳು ಕೈಗಾರಿಕೆಗಳ ಕಟ್ಟಡಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‍ರಾಜ್ ಅಧಿನಿಯಮ 1993ರ ಪ್ರಕರಣ 199 ಮತ್ತು ಅನುಸೂಚಿ - Iಗಿ ರಲ್ಲಿ ನಿರ್ದಿಷ್ಟ ಪಡಿಸಿರುವ ಕನಿಷ್ಟ ದರವಾದ ಶೇ. 0.4 ರಿಂದ ಗರಿಷ್ಠ ಶೇ. 0.6ರವರೆಗೆ ಮಾತ್ರ ವಿಧಿಸಿ ಕರ ನಿರ್ಧರಣೆ ಮಾಡುವಂತೆಯೂ ತಿಳಿಸಲಾಗಿದೆ.ರಾಜ್ಯದ ಕೆಲವು ಗ್ರಾಮ ಪಂಚಾಯಿತಿಗಳು ಕೈಗಾರಿಕಾ ಕಟ್ಟಡಗಳಿಗೆ ಮೇಲ್ಕಂಡಂತೆ ತೆರಿಗೆ ವಿಧಿಸದೆ ತಮ್ಮದೇ ಆದ ರೀತಿಯಲ್ಲಿ ತೆರಿಗೆ ನಿಗದಿಪಡಿಸಿಕೊಂಡು ವಸೂಲಿ ಮಾಡುತ್ತಿದ್ದು, ಕೈಗಾರಿಕೆಗಳಿಗೆ ತೊಂದರೆ ಉಂಟು ಮಾಡುತ್ತಿರುವದು ಸರಕಾರದ ಗಮನಕ್ಕೆ ಬಂದಿದೆ. ವ್ಯವಹಾರ ಸರಳೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಕೈಗಾರಿಕಾ ಸ್ನೇಹಿ ನೀತಿಯನ್ನು ಉತ್ತೇಜಿಸುವ ಮತ್ತು ಗ್ರಾಮ ಪಂಚಾಯಿತಿಗಳು ತೆರಿಗೆ ವಿಧಿಸಲು ಏಕರೂಪತೆ ತಂದು ಗ್ರಾ.ಪಂ.ಗಳ ತೆರಿಗೆ ವಿಧಿಸುವ ಮತ್ತು ವಸೂಲಿ ಮಾಡುವ ಪ್ರಕ್ರಿಯೆ ಸುಗಮವಾಗುವದರ ಜತೆಗೆ ಸಂಪನ್ಮೂಲ ಸಂಗ್ರಹವು ಹೆಚ್ಚಲಿದೆ ಎಂದು ಸರಕಾರ ಭಾವಿಸಿರುವದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.ವಿಧಿಸಬಹುದಾದ ತೆರಿಗೆ ಪ್ರಮಾಣ : ಗ್ರಾ.ಪಂ.ಗಳು ಈ ಕೆಳಕಂಡಂತೆ ಕೈಗಾರಿಕೆಗಳ ಕಟ್ಟಡಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 199 ಮತ್ತು ಅನುಸೂಚಿ - Iಗಿ ರಲ್ಲಿ ನಿರ್ದಿಷ್ಟಪಡಿಸಿರುವ ಕನಿಷ್ಟ ದರವಾದ ಶೇ. 0.4 ರಿಂದ ಗರಿಷ್ಠ ಶೇ. 0.64ರವರೆಗೆ ಮಾತ್ರ ವಿಧಿಸಿ ತೆರಿಗೆ ನಿರ್ಧರಿಸಲು ಸೂಚಿಸಲಾಗಿದೆ.
ಇಂತಿಷ್ಟು ದರ
* ಅತಿ ಸಣ್ಣ ಕೈಗಾರಿಕೆ ಅಥವಾ ಇತರ ಸಣ್ಣ ಘಟಕಗಳಿಗೆ ಮತ್ತು ಸಣ್ಣ ಕೈಗಾರಿಕೆ ಅಥವಾ ಇತರ ಸಣ್ಣ ಘಟಕಗಳಿಗೆ ವಿಧಿಸಬಹುದಾದ ತೆರಿಗೆ ಪ್ರಮಾಣವನ್ನು ಶೇ. 0.4ಕ್ಕೆ ನಿಗದಿಪಡಿಸಲಾಗಿದೆ.
* ಮಧ್ಯಮ ಕೈಗಾರಿಕೆ ಅಥವಾ ಮಧ್ಯಮ ಘಟಕಗಳಿಗೆ ಶೇ. 0.5, ಭಾರಿ ಕೈಗಾರಿಕೆ ಅಥವಾ ಭಾರಿ ಘಟಕಗಳಿಗೆ ಶೇ. 0.6ರಷ್ಟು ಪ್ರಮಾಣ ನಿಗದಿ ಮಾಡಲಾಗಿದೆ.
ಖಾಲಿ ಇರುವ ಜಾಗದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಬಳಸುವ ಭಾಗಕ್ಕೆ ಶೇಕಡ 0.5, ಉಳಿದಂತೆ ಉಪಯೋಗಿಸದೆ ಇರುವ ಖಾಲಿ ಜಾಗಕ್ಕೆ ಶೇ. 0.2 ವಿಧಿಸುವದು. ರಸ್ತೆಗಾಗಿ, ಅಲಂಕಾರಿಕ ಉದ್ಯಾನವನ ಕ್ಕಾಗಿ ಅಥವಾ ಪರಿಸರ ಸಂರಕ್ಷಣೆಗಾಗಿ ಅಥವಾ ಹಸಿರೀಕರಣಕ್ಕೆ ಉಳಿಸಿರುವ ಜಾಗಕ್ಕೆ ತೆರಿಗೆ ವಿಧಿಸಬಾರದೆಂದೂ ಸಹ ಸೂಚನೆ ನೀಡಲಾಗಿದೆ. ಈ ಕುರಿತು ತಾ. 24ರಂದು ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಸುತ್ತೋಲೆ ಹೊರಡಿಸಿದ್ದಾರೆ.