ಮಡಿಕೇರಿ, ಜು. 27: ಸರ್ಕಾರಿ ಕಚೇರಿಗಳನ್ನು ಹೊಂದಿರುವ ಕೋಟೆಯನ್ನು ಅಕ್ಟೋಬರ್ 31ರ ಒಳಗೆ ತೆರವುಗೊಳಿಸುವಂತೆ ರಾಜ್ಯ ಉಚ್ಚನ್ಯಾಯಾಲಯ ಆದೇಶಿಸಿರುವ ಬೆನ್ನಲ್ಲೆ ಆಗಸ್ಟ್ 1ರಂದು ಸ್ಥಳ ಪರಿಶೀಲನೆ ನಡೆಸಿ ಜಂಟಿ ಸರ್ವೆ ನಡೆಸಲು ಕೇಂದ್ರ ಸಂಸ್ಕøತಿ ಇಲಾಖೆ ಅಧೀನದಲ್ಲಿ ಇರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕ್ರಮಕೈಗೊಂಡಿದೆ.ಜೆ.ಎಸ್. ವಿರೂಪಾಕ್ಷಯ್ಯ ಎಂಬವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರ ಪರಿಣಾಮ ಸರಕಾರದ ಹೆಚ್ಚುವರಿ ವಕೀಲರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿ ಅಕ್ಟೋಬರ್ 31ರ ಒಳಗೆ ಸರ್ಕಾರಿ ಕಚೇರಿಗಳನ್ನು ತೆರವು ಗೊಳಿಸಲಾಗುವದೆಂದು ತಿಳಿಸಿದ್ದರು. ಇದಕ್ಕೆ ಒಪ್ಪಿದ ನ್ಯಾಯಾಲಯ, ಕೋಟೆ ಮತ್ತು ಅರಮನೆಯನ್ನು ರಕ್ಷಿಸಲು ಕೈಗೊಳ್ಳಬೇಕಾದ ತುರ್ತು ಕ್ರಮದ ಬಗ್ಗೆ ಸ್ವತಃ ಭೇಟಿ ನೀಡಿ ಪರಿಶೀಲಿಸುವಂತೆ ಪುರಾತತ್ವ ಇಲಾಖೆಗೆ ಆದೇಶ ನೀಡಿತ್ತು; ಅಲ್ಲದೆ ಆಗಸ್ಟ್ 8ರ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹಾಗೂ ಪ್ರತಿವಾದಿಗಳು ಜಂಟಿಯಾಗಿ ಭೇಟಿ ನೀಡಿ ಸರ್ವೆ ಮಾಡಲು ಆಗಸ್ಟ್ 1ನೇ ದಿನಾಂಕವನ್ನು ನಿಗದಿಗೊಳಿಸಲಾಗಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎನ್. ರವೀಂದ್ರನಾಥ್ ಕಾಮತ್ ವಾದಿಸಿದ್ದರು.