ಗುಡ್ಡೆಹೊಸೂರು, ಜು. 27: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮಕ್ಕೆ ಸೇರಿದ ಚಿಕ್ಲಿಹೊಳೆ ಜಲಾಶಯವು ಭರ್ತಿಯಾಗಿದ್ದು, ಹೆಚ್ಚುವರಿ ನೀರು ಕಾಲುವೆ ಮೂಲಕ ಕಾವೇರಿ ನದಿ ಸೇರಿ ತಮಿಳುನಾಡಿಗೆ ಹೋಗುತ್ತಿದೆ. ಆದರೆ ನಾಲಾ ವ್ಯಾಪ್ತಿಯ ಅಚ್ಚುಕಟ್ಟುದಾರರಿಗೆ ಇದರಿಂದ ಯಾವದೇ ಪ್ರಯೋಜನ ವಾಗುತ್ತಿಲ್ಲ. ಚಿಕ್ಲಿಹೊಳೆ ಜಲಾಶಯ ನಾಲಾ ವ್ಯಾಪ್ತಿಯು ಎಡದಂಡೆ 10 ಕಿ.ಮೀ. ಮತ್ತು ಬಲದಂಡೆ 22 ಕಿ.ಮೀ. ಆಗಿದ್ದು. ಅದರಲ್ಲಿ ಬಹಳ ಮಂದಿ ರೈತರು ತಮ್ಮ ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಅದಕ್ಕೆ ಇಲ್ಲಿನ ನೀರಿನ ಸಮಸ್ಯೆಯೂ ಒಂದಾಗಿದೆ. ಸರಿಯಾದ ಸಮಯದಲ್ಲಿ ನಾಲೆಯ ಹೂಳೆತ್ತುವ ಕಾಮಗಾರಿ ಮಾಡುವದಿಲ್ಲ.

ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಮಾಡಬೇಕಾದ ಕಾಮಗಾರಿಯನ್ನು ನಾಟಿ ಕೆಲಸ ಮಾಡುವ ಸಮಯದಲ್ಲಿ ನಡೆಸುತ್ತಾರೆ. ನಾಲಾ ವ್ಯಾಪ್ತಿಯ ರಂಗ ಸಮುದ್ರ, ಹೊಸಪಟ್ಟಣ, ನಂಜರಾಯ ಪಟ್ಟಣ, ಬಾಳುಗೋಡು, ಬೆಟ್ಟಗೇರಿ, ಬಸವನಹಳ್ಳಿ, ಬೊಳ್ಳ್ಳೂರು, ಸುಂದರನಗರ ಗ್ರಾಮದ ಒಟ್ಟು 20 ಗ್ರಾಮದ ರೈತರು ಈ ಜಲಾಶಯದ ನೀರನ್ನೇ ಭತ್ತ ನಾಟಿ ಕಾರ್ಯಕ್ಕೆ ಬಳಸುತ್ತಾರೆ. ಅಧಿಕಾರಿಗಳಿಂದ ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದೆ. ಬಲದಂಡೆ ನಾಲಾ ವ್ಯಾಪ್ತಿಯ ಕಬ್ಬಿನ ಗದ್ದೆ ಎಂಬಲ್ಲಿ ಇದೀಗ ನಾಲೆಗೆ ಅಡ್ಡವಾಗಿ ಸೇತುವೆ ಕಾಮಗಾರಿ ನಡೆಸಲು ಕಳೆದವಾರ ಕೆಲಸ ಪ್ರಾರಂಭಿಸಿದ್ದಾರೆ. ನಾಲಾ ಒಳಗಿರುವ ಕಾಡನ್ನು ಕಡಿದು ಕಾಲುವೆಯಲ್ಲಿ ನೀರು ಹರಿಸಿ ರೈತರಿಗೆ ಸಹಾಯ ಮಾಡುವದು ಬಿಟ್ಟು ಗುತ್ತಿಗೆದಾರರ ಜೊತೆ ಶಾಮೀಲಾಗಿ ಪರ್ಸೆಂಟೇಜ್ ಗಾಗಿ ಈ ರೀತಿಯ ಕಾಮಗಾರಿ ನಡೆಸಲಾಗುತ್ತಿದೆ ಎಂದು ಈ ವಿಭಾಗದ ರೈತರು ದೂರಿದ್ದಾರೆ.

ಬಲದಂಡೆ ನಾಲೆಯು ದಟ್ಟ ಅರಣ್ಯ ಪ್ರದೇಶದಂತಿದೆ; ಜನರು ತಿರುಗಾಡುವ ಪ್ರದೇಶದಲ್ಲಿ ಮಾತ್ರ ಕಾಡು ಕಡಿದು ಕಾಮಗಾರಿ ಮುಗಿಸಲಾಗಿದೆ. ಹೇಳುವವರಿಲ್ಲ ಕೇಳುವವರೂ ಇಲ್ಲ. ಇತ್ತ ಜನರನ್ನು ಆಳುವ ಸರಕಾರವೇ ಬೀದಿಗೆ ಬಂದಿದೆ. ಈ ಸಮಸ್ಯೆಯನ್ನು ಯಾರಲ್ಲಿ ಹೇಳುವದು ಎಂದು ಈ ವಿಭಾಗದ ರೈತರ ಪ್ರಶ್ನೆಯಾಗಿದೆ. ಇತ್ತೀಚಿನ ದಿನಗ ಳಲ್ಲಿ ಹಲವು ಇಲಾಖೆಗಳ ಕಾರ್ಯ ವೈಖರಿ ಇದೇ ರೀತಿಯಾಗಿದೆ. ಜನರ ಹಣವನ್ನು ಲೂಟಿ ಮಾಡುವ ತಂತ್ರ ನಡೆಯುತ್ತಿದೆ. ಇದಕ್ಕೆ ಉದಾಹರಣೆ, ಚಿಕ್ಲಿಹೊಳೆ ಜಲಾಶಯದ ಕೆಳಭಾಗದಲ್ಲಿ ಒಂದು ಎಕರೆ ಪ್ರದೇಶದಲ್ಲಿ ವರ್ಷ ವರ್ಷ ಏನಾದರೂ ನೆಪವೊಡ್ಡಿ ಅಲ್ಲಿ ಕಾಮಗಾರಿ ನಡೆಸಿ ಹಣ ಪೋಲು ಮಾಡಲಾಗುತ್ತಿದೆ.

ಕಳೆದ 3 ವರ್ಷದ ಹಿಂದೆ ಅಲ್ಲಿ ಗಾರ್ಡನ್ ಮಾಡುವದಾಗಿ ನೆಲ ಸಮತಟ್ಟು ಮಾಡುವ ಕಾಮಗಾರಿಗೆ ಗುತ್ತಿಗೆ ನೀಡಲಾಗಿತ್ತು. ಅದರಂತೆ ಇದೀಗ ಮತ್ತೆ ಜೆಸಿಬಿ ಯಂತ್ರದ ಮೂಲಕ ಕಾಮಗಾರಿ ನಡೆಯುತ್ತಿದೆ. ಇದು ಕೇವಲ ಬಿಲ್ ಪಾಸ್‍ಗೆ ಮಾತ್ರವೆ ಎಂದು ಕಾದು ನೋಡಬೇಕಾಗಿದೆ. ರೈತರ ಜಮೀನಿಗೆ ನೀರು ಹರಿಸುವ ಕಾಮಗಾರಿಯನ್ನು ಅಪೂರ್ಣವಾಗಿ ನಡೆಸುತ್ತಾರೆ. ಆದರೆ ಈ ರೀತಿಯ ಕಾಮಗಾರಿಗಳನ್ನು ತುಂಬಾ ಶ್ರದ್ಧೆಯಿಂದ ನಡೆಸುತ್ತಾರೆ.

ರೈತರು ತಮ್ಮ ಕೊಳವೆ ಬಾವಿಯ ನೀರನ್ನು ಬಳಸಿ ಭತ್ತದ ಸಸಿಮಡಿ ತಯಾರಿಸಿಕೊಂಡಿದ್ದಾರೆ. ಆದರೆ ನೀರಿನ ಸೌಲಭ್ಯ ಇಲ್ಲದ ರೈತರು ನೀರಿಗಾಗಿ ಕಾಯುತ್ತಿದ್ದಾರೆ. ಇನ್ನೂ ಭತ್ತದ ಸಸಿ ತಯಾರು ಮಾಡಲು ಹಲವು ರೈತರು ಜಲಾಶಯದ ನೀರನ್ನೇ ಅವಲಂಭಿಸಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ನಾಲೆಯೊಳಗೆ ಸೇತುವೆ ಕಾಮಗಾರಿ ನಡೆಸುತ್ತಿದ್ದಾರೆ. ಈ ಬಾರಿ ಮಳೆ ಕಡಿಮೆಯಾದರೂ ಚಿಕ್ಲಿಹೊಳೆ ಜಲಾಶಯವು ಬೇಗನೆ ಭರ್ತಿ ಯಾಗಿದೆ. ಆದರೆ ಏನು ಪ್ರಯೋಜನ ಎಂದು ಆತ್ಮಾವ ಲೋಕನ ಮಾಡು ವಂತಾಗಿದೆ. ಯಾವ ಸಮಯದಲ್ಲಿ ಯಾವ ಕಾಮಗಾರಿ ನಡೆಸಬೇಕು ಎಂದು ಅಧಿಕಾರಿಗಳಿಗೆ ತಿಳಿಯುವದಿ ಲ್ಲವೆ? ಚಿಕ್ಲಿಹೊಳೆ ಜಲಾಶಯವು ಅಧಿಕಾರಿ ಗಳಿಗೆ ‘ಚಿನ್ನದ ಮೊಟ್ಟೆ ಇಡುವ ಕೋಳಿ’ ಎಂದರೆ ತಪ್ಪಾಗಲಾ ರದು. ತಕ್ಷಣದಿಂದಲೇ ಕಾಲುವೆಗೆ ನೀರು ಹರಿಸುವಂತೆ ಬಾಳುಗೋಡು, ಬೆಟ್ಟಗೇರಿ, ರಸಲ್‍ಪುರ, ಆನೆಕಾಡು, ಸುಣ್ಣದಕೆರೆ, ಮಾದಪಟ್ಟಣ ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ಕುಡೆಕ್ಕಲ್ ಗಣೇಶ್