ಸುಂಟಿಕೊಪ್ಪ, ಜು. 27: ಕೊಡಗಿನಲ್ಲಿ ರೈತಾಪಿ ವರ್ಗದವರು ಭತ್ತದ ಗದ್ದೆಯನ್ನು ಪಾಳುಬಿಡುತ್ತಿದ್ದು, ಸ್ವಂತ ಶ್ರಮದಿಂದ ಆನೇಕ ಮಂದಿ ಭತ್ತದ ಕೃಷಿ ಚಟುವಟಿಕೆಗೆ ಮುಂದಾಗಿದ್ದರೂ ಪೂರಕ ಬೆಂಬಲವಿಲ್ಲದೆ ಹೈರಾಣಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಒಂದೆಡೆಯಾದರೆ ಮತ್ತೊಂದೆಡೆ ಕೃಷಿ ಚಟುವಟಿಕೆ ನಡೆಸಲು ಕೃಷಿ ಕಾರ್ಮಿಕರ ಕೊರತೆಯು ನಿರಂತರವಾಗಿ ಕಾಡುತ್ತಿದೆ. ಇದೇ ಎಲ್ಲವನ್ನು ನಿಭಾಯಿಸಿ ಭತ್ತದ ಗದ್ದೆಯಲ್ಲಿ ಕೃಷಿ ಕಾರ್ಯವನ್ನು ನಡೆಸಿದರೆ, ಮಳೆ ಹವಾಮಾನ ವೈಪರೀತ್ಯ ಕೀಟ ಭಾದೆ, ಎಲ್ಲವನ್ನು ಸರಿದೂಗಿಸಿ ಬರುವ ಸಂದರ್ಭ ಬೆಂಬಲ ಬೆಲೆ ಸಿಗದೆ ಕೃಷಿಕ ಕೈಯಿಂದ ದುಪ್ಪಟ್ಟು ವೆಚ್ಚವಾಗುತ್ತಿರುವದರಿಂದ ಭತ್ತದ ಕೃಷಿಯನ್ನು ತ್ಯಜಿಸಿ ಇತರೆ ಕೃಷಿಗಳ ಕಡೆ ಮುಖ ಮಾಡುತ್ತಿರುವದು ಸರ್ವೆ ಸಾಮಾನ್ಯವಾಗಿದೆ. ಸರಕಾರವು ಭತ್ತ ಸೇರಿದಂತೆ ಇನ್ನಿತರ ಕೃಷಿಯನ್ನು ನಡೆಸುವಂತೆ ಹಲವು ಯೋಜನೆಗಳನ್ನು ಹಾಕಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ.
ಆದರೆ ನೈಜವಾಗಿ ದೊರೆಯಬೇಕಾದ ಕೃಷಿಕರಿಗೆ ಮೂಲಭೂತ ಸೌಲಭ್ಯಗಳು ದೊರೆಯುತ್ತಿಲ್ಲ. ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ಪಟ್ಟೆಮನೆ ಕುಟುಂಬಸ್ಥರಿಗೆ ಸೇರಿದ 4 ಎಕ್ರೆ ಜಾಗದಲ್ಲಿ ಪೂರ್ವಿಕರ ಕಾಲದಿಂದಲೂ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡು ಜೀವಾನಾಧಾರವನ್ನು ರೂಢಿಸಿಕೊಂಡು ಬರುತ್ತಿದ್ದಾರೆ. ಇತ್ತೀಚಿಗಿನ ಕೆಲ ವರ್ಷದಿಂದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ 1ನೇ, 2ನೇ ಹಾಗೂ 3ನೇ ವಾರ್ಡ್ ಹಾಗೂ ಉಲುಗುಲಿ 2ನೇ ವಾರ್ಡ್ಗಳಲ್ಲಿ ಮನೆ ನಿರ್ಮಿಸಿಕೊಂಡ ಶೇಕಡ 50 ರಷ್ಟು ಮಂದಿ ಶೌಚಾಲಯ ಗುಂಡಿ ನಿರ್ಮಿಸದೆ ಇರುವದರಿಂದ ಕಲುಷಿತ ಕಲ್ಮಷ ವಸ್ತುಗಳು ನೇರವಾಗಿ ತೋಡಿಗೆ ಬಂದು ನೇರವಾಗಿ ಗದ್ದೆಗೆ ಹರಿದು ಬರುವದರಿಂದ ಹಾಗೂ ಕೋಳಿ ಕುರಿ ಮಾಂಸದ ತ್ಯಾಜ್ಯಗಳು ಸಹ ತೋಡಿಗೆ ಬಿಡುವದರಿಂದ ಗದ್ದೆ ನಾಟಿ ಮಾಡಲು ಸಾಧ್ಯವಾಗದೆ ಶ್ರಮಿಕ ಕುಟುಂಬದ ರೈತರು ಪರಿತಪಿಸುವಂತಾಗಿದೆ.
ಸುಂಟಿಕೊಪ್ಪ ಹೋಬಳಿಯಲ್ಲಿ ನಾನಾ ಕಾರಣಗಳಿಂದ ಗದ್ದೆ ಕೃಷಿ ಮಾಡಿರುವವರು ವಿಮುಖವಾಗಿದ್ದಾರೆ. ಕಂದಾಯ ಇಲಾಖೆ, ಕೃಷಿ ಇಲಾಖೆಯಿಂದ ಸೂಕ್ತ ಸ್ಪಂದನ ಸಿಗದೆ ಇರುವದರಿಂದ 1 ಎಕ್ರೆ 2 ಎಕ್ರೆ 3 ಎಕ್ರೆ ಗದ್ದೆ ಇರುವವರು ಗದ್ದೆಯನ್ನು ಪಾಳು ಬಿಟ್ಟಿದ್ದಾರೆ.
ಸುಂಟಿಕೊಪ್ಪದ ಗದ್ದೆಹಳ್ಳದ ಪಟ್ಟೆಮನೆ ಉದಯಕುಮಾರ್ ಅವರು ಪ್ರತಿ ವರ್ಷ ಕಷ್ಟಪಟ್ಟು ಭತ್ತದ ಗದ್ದೆಯಲ್ಲಿ ಪೈರು ಬೆಳೆಯಲು ಶ್ರಮಿಸುತ್ತೇವೆ ಆದರೆ ಸುಂಟಿಕೊಪ್ಪ ಪಂಚಾಯಿತಿ ವ್ಯಾಪ್ತಿಯ ಮನೆಗಳ ತ್ಯಾಜ್ಯ ವಸ್ತುಗಳು, ಮಲ ಮೂತ್ರ, ಪ್ಲಾಸ್ಟಿಕ್ ಕುರಿ ಕೋಳಿ ಅನುಪಯುಕ್ತ ವಸ್ತುಗಳು ತೋಡಿಗೆ ಹರಿದು ಬಂದು ನೇರವಾಗಿ ಗದ್ದೆಗೆ ಸೇರುತ್ತಿದೆ. ರೋಗ ರುಜಿನಗಳಿಗೆ ಆಹ್ವಾನ ನೀಡುವದಲ್ಲದೆ ಕೃಷಿ ಚಟುವಟಿಕೆಗಳಿಗೆ ಕೂಲಿ ಕಾರ್ಮಿಕರೂ ಸಿಗುತ್ತಿಲ್ಲ. ಈ ಬಗ್ಗೆ ಶಾಶ್ವತ ಪರಿಹಾರ ನೀಡಬೇಕೆಂದು ಗ್ರಾ.ಪಂ., ಕೃಷಿ ಇಲಾಖೆಗೆ ಮನವಿ ಸಲ್ಲಿಸಿದರೂ ನಮಗೆ ಯಾವದೇ ಸಕಾರಾತ್ಮಕ ಬೆಂಬಲ ಸಿಗಲಿಲ್ಲ ಎಂದೂ ಉದಯಕುಮಾರ್ ನೊಂದು ನುಡಿದರು.
ರೈತರಿಗೆ ಅವಕಾಶ ನೀಡಿ: ದೇಶದ ಬೆನ್ನಲುಬು ರೈತರು ಕೃಷಿಪ್ರಧಾನವಾದ ಭಾರತ ದೇಶದಲ್ಲಿ ಭತ್ತದ ಬೆಳೆಗೆ ಉತ್ತೇಜನ ನೀಡಬೇಕು ಆದರೆ ಗ್ರಾ.ಪಂ., ಕೃಷಿ ಹಾಗೂ ಕಂದಾಯ ಇಲಾಖೆಯಿಂದ ನಮಗೆ ಸೂಕ್ತ ಸಹಕಾರ ನೀಡುತ್ತಿಲ್ಲ ಪಂಚಾಯಿತಿ ವ್ಯಾಪ್ತಿಯ ಜನವಸತಿ ನಿಲಯದ ಮಲ ಮೂತ್ರ ಪ್ಲಾಸ್ಟಿಕ್ ಕುರಿ ಕೋಳಿಯ ತ್ಯಾಜ್ಯವಸ್ತುಗಳು ತೋಡಿಗೆ ಹರಿಯಬಿಟ್ಟು ತೊಂದರೆ ಮಾಡಲಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದವರು ಸೂಕ್ತ ಕ್ರಮಕೈಗೊಂಡು ರೈತರ ಬದುಕಿಗೆ ಆಶ್ರಯ ನೀಡಿ ಎಂದು ಪಟ್ಟೆಮನೆ ಪ್ರಸನ್ನ ಅವಲತ್ತುಕೊಂಡರು.