ಗೋಣಿಕೊಪ್ಪಲು, ಜು.26: ವಾಣಿಜ್ಯ ನಗರಿ ಎಂದು ಪ್ರಖ್ಯಾತಿ ಪಡೆದಿರುವ ಗೊಣಿಕೊಪ್ಪ ನಗರ ಕೇರಳ ರಾಜ್ಯಕ್ಕೆ ಅತೀ ಸಮೀಪ ದಲ್ಲಿರುವ ನಗರವಾಗಿದೆ. ಬಹುತೇಕ ವ್ಯಾಪಾರಸ್ಥರು ವಾಣಿಜ್ಯ ನಗರಕ್ಕೆ ಆಗಮಿಸಿ ತಮ್ಮ ವ್ಯಾಪಾರವನ್ನು ಕಂಡುಕೊಂಡಿದ್ದರು. ಕಳೆದ ಒಂದು ವರ್ಷಗಳಿಂದ ನಿರೀಕ್ಷಿತ ವ್ಯಾಪಾರವಿಲ್ಲದೆ ಇಲ್ಲಿನ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಕಳೆದೆರಡು ತಿಂಗಳಿನಿಂದ ಇಲ್ಲಿನ ವ್ಯಾಪಾರವು ಭಾರೀ ಕುಸಿತ ಕಂಡಿದ್ದು ಮುಂದೇನು ಗತಿ ಎಂದು ಯೋಚಿಸುವ ಪರಿಸ್ಥಿತಿ ಇಲ್ಲಿನ ವ್ಯಾಪಾರಸ್ಥರದ್ದಾಗಿದೆ.ನಗರದಲ್ಲಿ ವ್ಯಾಪಾರ ನಡೆಸಲು ಹೊರ ರಾಜ್ಯದಿಂದ, ಜಿಲ್ಲೆಗಳಿಂದ ಆಗಮಿಸಿದ ವ್ಯಾಪಾರಸ್ಥರು ಅಂಗಡಿ ಮಳಿಗೆಯ ಬಾಡಿಗೆಗಳನ್ನು ತೀರಿಸಲಾಗದೇ ಅಂಗಡಿಗಳನ್ನು ಮುಚ್ಚಿ ತಮ್ಮ ತಮ್ಮ ಊರುಗಳಿಗೆ ವಾಪಸ್ಸಾಗಿದ್ದಾರೆ. ಪ್ರತಿ ದಿನ ಕೋಟ್ಯಾಂತರ ವ್ಯಾಪಾರ,ವಹಿವಾಟು ನಡೆಯುತ್ತಿದ್ದ ನಗರದಲ್ಲಿ ಇದೀಗ ವ್ಯಾಪಾರ ಪಾತಾಳಕ್ಕೆ ಕುಸಿದಿದೆ.ದ.ಕೊಡಗಿನ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಬೆಳೆಗಾರರು, ಮಾಲೀಕರು ಹೆಚ್ಚಾಗಿ ಗೋಣಿಕೊಪ್ಪ ನಗರಕ್ಕೆ ಆಗಮಿಸಿ ವ್ಯಾಪಾರ ನಡೆಸುತ್ತಾರೆ ಎಂಬ ದೂರದೃಷ್ಟಿ ಯಿಂದ ಕೇರಳದಿಂದ ಆಗಮಿಸಿ ನಗರದಲ್ಲಿ ಹೊಟೇಲ್, ಲಾಡ್ಜ್, ಮಾರ್ಜಿನ್ ಫ್ರೀ ಮಾರ್ಕೆಟ್, ಪೀಠೋಪಕರಣ ವ್ಯಾಪಾರಗಳಲ್ಲಿ ಕೋಟಿ, ಕೋಟಿ ಹಣವನ್ನು ವಿನಿಯೋಗಿಸಿದ್ದ ವ್ಯಾಪಾರಸ್ಥರು ಇದೀಗ ವ್ಯಾಪಾರವಿಲ್ಲದೆ ಹಾಕಿದ ಬಂಡವಾಳಕ್ಕೆ ಬಡ್ಡಿ ಕಟ್ಟಲಾರದ ಪರಿಸ್ಥಿತಿಯಲ್ಲಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಬೃಹತ್ ವಾಣಿಜ್ಯ ಮಳಿಗೆಗಳಲ್ಲಿ ಕೊಠಡಿಗಳು ಖಾಲಿ ಖಾಲಿಯಾಗಿವೆ.ಇದರಿಂದ ದೊಡ್ಡ ಮೊತ್ತದ ಹಣ ವಿನಿಯೋಗಿಸಿ ಕಟ್ಟಡ ನಿರ್ಮಿಸಿದ ಮಾಲೀಕರಿಗೆ ಬ್ಯಾಂಕಿನಿಂದ ಪಡೆದ ಸಾಲದ ಬಡ್ಡಿಯನ್ನು ತೀರಿಸಲಾರದ ಪರಿಸ್ಥಿತಿಗೆ ತಂದೊಡ್ಡಿದೆ.
ವ್ಯಾಪಾರ ವಹಿವಾಟು ಕಡಿಮೆ ಯಾಗುತ್ತಿದ್ದಂತೆಯೇ ನಗರದಲ್ಲಿರುವ ಅಂಗಡಿ
(ಮೊದಲ ಪುಟದಿಂದ) ಮುಂಗಟ್ಟುಗಳಲ್ಲಿ ಉದ್ಯೋಗದಲ್ಲಿದ್ದ ಯುವಕ ಯುವತಿಯರಿಗೆ ಇದೀಗ ಉದ್ಯೋಗವಿಲ್ಲದಂತಾಗಿದೆ. ಬಹುತೇಕ ಗ್ರಾಮೀಣ ಭಾಗದಿಂದ ಯುವತಿಯರು ಇದನ್ನೇ ನಂಬಿ ಕುಟುಂಬ ಸಾಗಿಸುತ್ತಿದ್ದರು. ಮಾಲೀಕರ ನಿರ್ಧಾರದಿಂದ ಕಂಗೆಟ್ಟಿರುವ ಉದ್ಯೋಗವಂಚಿತರು ಪ್ರತಿನಿತ್ಯ ಅಂಗಡಿ ಮಳಿಗೆಗಳಿಗೆ ತೆರಳಿ ಉದ್ಯೋಗಕ್ಕಾಗಿ ಶ್ರಮ ಪಡುತ್ತಿದ್ದಾರೆ.
ದಿನ ನಿತ್ಯ ಓಡಾಡುವ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರ ಸಂಚಾರ ಕಡಿಮೆಯಾಗಿದ್ದು ಬಸ್ ಮಾಲೀಕ ರಿಗೂ ವ್ಯಾಪಾರದ ಬಿಸಿ ಮುಟಿ ್ಟದಂತಿದೆ. ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ಶಾಲೆ,ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಹೊರತು ಪಡಿಸಿ ಗ್ರಾಮೀಣ ಪ್ರದೇಶದ ಜನತೆ ಹೆಚ್ಚಾಗಿ ಬಸ್ನಲ್ಲಿ ಪ್ರಯಾಣ ಮಾಡುವದು ತೀರ ಕಡಿಮೆಯಾಗಿದೆ.
ವಾಣಿಜ್ಯ ಬೆಳೆ ಕಾಫಿ, ಕರಿಮೆಣಸಿಗೆ ಸೂಕ್ತ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಈ ಬೆಳೆಗಳಿಗೆ ಉತ್ತಮ ಬೆಲೆ ಸಿಕ್ಕದ ಹಿನ್ನೆಲೆಯಲ್ಲಿ ನೇರವಾಗಿ ವ್ಯಾಪಾರಸ್ಥರ ಮೇಲೆ ಇದರ ಪರಿಣಾಮ ಬೀರಿದೆ. ಸೂಕ್ತವಾದ ಬೆಲೆ ಸಿಕ್ಕಿದ ಸಂದರ್ಭದಲ್ಲಿ ವ್ಯಾಪಾರಸ್ಥರಿಗೆ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ.
ಪ್ರತಿ ದಿನ ಜನತೆಗೆ ಅವಶ್ಯ ವಿರುವ ಆಹಾರ ಸಾಮಾಗ್ರಿ ಗಳನ್ನು ಪಡೆಯುವ ದಿನಸಿ ಅಂಗಡಿಗಳಲ್ಲಿ ಸರತಿ ಸಾಲಿನಲ್ಲಿ ಗ್ರಾಹಕರು ಅಂಗಡಿಯ ಮುಂದೆ ನಿಲ್ಲುತ್ತಿದ್ದರು. ಇದರಿಂದ ಪ್ರತಿ ದಿನದ ವಹಿವಾಟು ಲಕ್ಷ ದಾಟುತ್ತಿತ್ತು. ಇದೀಗ ಈ ದಿನಸಿ ಅಂಗಡಿಗಳಲ್ಲಿ ಗ್ರಾಹಕರ ಓಡಾಟ ಕಡಿಮೆಯಾಗಿದೆ. ಪ್ರತಿನಿತ್ಯದ ವ್ಯಾಪಾರ ಪಾತಾಳಕ್ಕೆ ಕುಸಿಯ ಲಾರಂಭಿಸಿದೆ. ಅಂಗಡಿಗ ಳಲ್ಲಿ ಕೆಲಸ ನಿರ್ವಹಿಸುವ ಕೆಲಸ ಗಾರರಿಗೆ ಸಂಜೆಯ ವೇಳೆಯಲ್ಲಿ ವೇತನ ನೀಡುವದೇ ಮಾಲೀಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಆಟೋ ರಿಕ್ಷಾಗಳನ್ನು ಓಡಿಸುತ್ತಾ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದವರ ಬದುಕು ಕೂಡ ಸಂಕಷ್ಟಕ್ಕೆ ತಲಪಿದೆ. ನಗರದಲ್ಲಿ ಈ ಹಿಂದೆ ನಾನೂರಕ್ಕೂ ಅಧಿಕ ಆಟೋ ರಿಕ್ಷಾಗಳು ಸಂಚಾರ ನಡೆಸುತ್ತಿದ್ದವು. ಇದೀಗ ಇವುಗಳ ಸಂಖ್ಯೆಯು ಅರ್ಧದಷ್ಟು ಇಳಿಮುಖ ಗೊಂಡಿವೆ.ಇರುವ ಆಟೋಗಳಿಗೆ ಬಾಡಿಗೆ ಇಲ್ಲದೆ ಚಾಲಕರು, ಮಾಲೀಕರು, ತೊಂದರೆಗೆ ಸಿಲುಕಿದ್ದಾರೆ.ಕೆಲವು ಆಟೋ ಚಾಲಕರುಗಳು ಮುಂಜಾನೆ ಆರು ಗಂಟೆಗೆ ನಗರಕ್ಕೆ ಆಗಮಿಸಿದರೂ ಒಂಭತ್ತು ಗಂಟೆಯಾದರೂ ಬೋಣಿ ಮಾಡಲಾರದ ಪರಿಸ್ಥಿತಿಗೆ ತಲಪಿದ್ದಾರೆ. ವಾರಪೂರ್ತಿ ತೆರೆಯುತ್ತಿದ್ದ ಹೊಟೇಲ್ಗಳು ಇದೀಗ ವಾರದಲ್ಲಿ ನಾಲ್ಕು ದಿನಗಳಷ್ಟೇ ತೆರೆಯುವ ಪರಿಸ್ಥಿತಿ ಎದುರಾಗಿದೆ. ಬ್ಯಾಂಕ್ಗಳಿಂದ ಪಿಗ್ಮಿ ರೂಪದಲ್ಲಿ ಸಾಲ ಪಡೆದು ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರು ಸಾಲವಾಗಿ ಪಡೆದ ಹಣವನ್ನು ಪ್ರತಿ ನಿತ್ಯ ಪಿಗ್ಮಿ ರೂಪದಲ್ಲಿ ಸಂದಾಯ ಮಾಡಲು ಸಾಧ್ಯವಾಗದ ಪರಿಸ್ಥಿತಿಗೆ ಇಲ್ಲಿನ ವ್ಯಾಪಾರ ಕುಸಿದು ಬಿದ್ದಿದೆ. ನಗರದಲ್ಲಿ ದೊಡ್ಡ ವ್ಯಾಪಾರವಲ್ಲದೆ ಸಣ್ಣ ಪುಟ್ಟ ವ್ಯಾಪಾರಗಳಾದ ಬೇಕರಿ,ಪೇಪರ್ ಅಂಗಡಿ,ಹೂ ಅಂಗಡಿ,ಗೂಡಂಗಡಿ,ಸೊಪ್ಪು ಮಾರಾಟ, ತಳ್ಳುಗಾಡಿ, ಪಾನಿಪುರಿ, ಒಡೆಬಜ್ಜಿ, ಫಾಸ್ಟ್ ಫುಡ್ ವ್ಯಾಪಾರಸ್ಥರು ಕೂಡ ಪ್ರತಿ ನಿತ್ಯದ ವ್ಯಾಪಾರವಿಲ್ಲದೆ ಸೊರಗಿ ಹೋಗಿದ್ದಾರೆ.