ಮಡಿಕೇರಿ, ಜು. 26: ಮಡಿಕೇರಿ ನಗರಸಭೆ ಸ್ವಯಂಘೋಷಿತ ಆಸ್ತಿ ತೆರಿಗೆ ಗೊಂದಲವನ್ನು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು; ಅದನ್ನು ಪರಿಶೀಲಿಸಿ ಸರಿಪಡಿಸುವ ಭರವಸೆ ಸಿಕ್ಕಿದೆ ಎಂದು ಆಯುಕ್ತ ಎಂ.ಎಲ್. ರಮೇಶ್ ತಿಳಿಸಿದ್ದಾರೆ.ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಈ ವರ್ಷ ತೀರಾ ಏರಿಕೆ ಉಂಟಾದ ಬಗ್ಗೆ ‘ಶಕ್ತಿ’ ವಿಸ್ತøತ ಬರಹ ಪ್ರಕಟಿಸಿತ್ತು. ಈ ವರ್ಷ ಲಭ್ಯವಾಗುತ್ತಿರುವ ಕಂಪ್ಯೂಟರ್ ಮುದ್ರಿತ ತೆರಿಗೆ ಅರ್ಜಿಯಲ್ಲಿ ಭೂಮಿಯ ಮೌಲ್ಯವನ್ನು ತಪ್ಪಾಗಿ ಕಂಪ್ಯೂಟರ್‍ಗೆ ಅಪ್‍ಲೋಡ್ ಮಾಡಿರುವ ಬಗ್ಗೆ ದಾಖಲಾತಿ ಸಹಿತ ‘ಶಕ್ತಿ’ ಬೆಳಕು ಚೆಲ್ಲಿತ್ತು. ಇದರ ಬೆನ್ನಲ್ಲೇ ಮುಂದಿನ ಆಡಳಿತ ಮಂಡಳಿ ರಚನೆ ಆಗುವವರೆಗೂ ತೆರಿಗೆ ಪಾವತಿಸದಂತೆ ನಗರಸಭಾ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಅವರು ತೆರಿಗೆದಾರರಿಗೆ ಸಲಹೆ ನೀಡಿದರು.ಇಂದು ಪತ್ರಿಕಾ ಹೇಳಿಕೆಯಲ್ಲಿ ಈ ಬಗ್ಗೆ ನಗರಸಭಾ ಆಯುಕ್ತ ರಮೇಶ್ ಅವರು ಸ್ಪಷ್ಟೀಕರಣ ನೀಡಿದ್ದು; ಸಾಫ್ಟ್‍ವೇರ್‍ನಲ್ಲಿ ಆಸ್ತಿ ತೆರಿಗೆ ಲೆಕ್ಕಾಚಾರಕ್ಕೆ ಬೇಕಾದ ಪೂರಕ ಮಾಹಿತಿಯನ್ನು ಹಿಂದಿನ ಸಾಲಿನ ಅಧಿಕಾರಿಗಳ ಅವಧಿಯಲ್ಲಿ ಅಪ್‍ಲೋಡ್ ಮಾಡಲಾಗಿದೆ ಎಂದಿದ್ದಾರೆ. ಈ ವಿಷಯವನ್ನು ಆನ್‍ಲೈನ್ ಅಪ್ಲಿಕೇಷನ್ ಬಗ್ಗೆ ಬರಬಹುದಾದ ಸಮಸ್ಯೆ ಸರಿಪಡಿಸಲು ಸಹಕರಿಸುವ ಜಿಲ್ಲಾ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ಕಾರ್ಯನಿರ್ವಹಿಸುವ ಜಿಲ್ಲಾ ನೋಡಲ್ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಹಿಂದೆಯೇ ಆಸ್ತಿ ತೆರಿಗೆ ಲೆಕ್ಕಾಚಾರಕ್ಕೆ ನಿವೇಶನ ಮಾರುಕಟ್ಟೆ ಬೆಲೆಯನ್ನು ಅಪ್‍ಲೋಡ್ ಮಾಡಲಾಗಿದ್ದು; ಜಿಲ್ಲಾ ಹಂತದಲ್ಲಿ ಪರಿಶೀಲನೆಗೆ, ಮಾರ್ಪಾಡಿಗೆ ಈಗ ಅವಕಾಶ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಆನ್‍ಲೈನ್ ಆಸ್ತಿ ತೆರಿಗೆ ಪದ್ಧತಿಯಲ್ಲಿ ತೆರಿಗೆ ಹೆಚ್ಚಾಗಿ ಲೆಕ್ಕಾಚಾರವಾಗುತ್ತಿರುವ ಸಂಪೂರ್ಣ ಮಾಹಿತಿಯನ್ನು ಕರ್ನಾಟಕ ಮುನಿಸಿಪಲ್ ರಿಫರ್ಮ್ ಸೆಲ್ ಗಮನಕ್ಕೆ ತಂದಿದ್ದು; ಅದನ್ನು ಪರಿಶೀಲಿಸಿ ಸರಿಪಡಿಸುವದಾಗಿ ತಿಳಿಸಿದ್ದಾರೆ ಎಂದು ಆಯುಕ್ತರು ಲಿಖಿತ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಮಡಿಕೇರಿ ನಗರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಪಾವತಿ ಬಗ್ಗೆ ಇರುವ ಗೊಂದಲವನ್ನು ಸರಿಪಡಿಸಲು ನಗರಸಭೆ ಸೂಕ್ತ ಕ್ರಮವಹಿಸುತ್ತಿದ್ದು, ಆಸ್ತಿ ತೆರಿಗೆ ಪಾವತಿದಾರರು ಹೆಚ್ಚು ಅಥವಾ ಕಡಿಮೆ ಪಾವತಿಸಿದಲ್ಲಿ ಹೊಂದಾಣಿಕೆ ಮಾಡಲು ಅವಕಾಶವಿರುವದರಿಂದ ಆಸ್ತಿ ತೆರಿಗೆ ಪಾವತಿದಾರರು ಗೊಂದಲ ಕ್ಕೊಳಗಾಗದೆ ಆಸ್ತಿ ತೆರಿಗೆ ಪಾವತಿಸಿ ನಗರದ ಅಭಿವೃದ್ಧಿಗೆ ಕೈಜೋಡಿಸುವಂತೆ ಎಂ.ಎಲ್.ರಮೇಶ್ ಕೋರಿದ್ದಾರೆ.