ಮಡಿಕೇರಿ, ಜು. 26: ನಾಡಿನೆಲ್ಲೆಡೆ 20ನೇ ವರ್ಷದ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು. ವಿಶ್ವ ಹಿಂದೂ ಪರಿಷತ್ - ಬಜರಂಗದಳ ಹಾಗೂ ಮಾಜಿ ಸೈನಿಕರ ಸಂಘ; ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಇತರ ಸಂಘ ಸಂಸ್ಥೆಗಳ ಪ್ರಮುಖರು ಮಡಿಕೇರಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಲ್ಲಿನ ಅಶ್ವಿನಿ ಆಸ್ಪತ್ರೆಯಲ್ಲಿ ಬಜರಂಗದಳ ತರುಣರು ರಕ್ತದಾನ ಮಾಡಿದರು.ಇಲ್ಲಿನ ಹುತಾತ್ಮ ಸ್ಮಾರಕದಲ್ಲಿ ಸಂಘಟನೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ ಮಾತನಾಡಿ; ದೇಶದೆಲ್ಲೆಡೆ ಕಾರ್ಗಿಲ್ ವಿಜಯ ದಿವಸವನ್ನು ಕೇಂದ್ರ ಮತ್ತು ಅನೇಕ ರಾಜ್ಯ ಸರಕಾರಗಳಿಂದ ಕಾರ್ಯಕ್ರಮ ಆಯೋಜಿಸಿದ್ದು; ಕೊಡಗು ಜಿಲ್ಲಾಡಳಿತ ಹಾಗೂ ಕರ್ನಾಟಕ ಸರಕಾರದಿಂದ ಈ ಕಾರ್ಯಕ್ರಮ ರೂಪಿಸುವಂತಾಗಬೇಕೆಂದು ಒತ್ತಾಯಿಸಿದರು.ಇಂತಹ ಐತಿಹಾಸಿಕ ಕಾರ್ಯಕ್ರಮವನ್ನು ಜಿಲ್ಲಾಡಳಿತ ಎಲ್ಲಾ ಶಾಲೆಗಳಲ್ಲಿ ಏರ್ಪಡಿಸಿ ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವಂತೆ ಬೇಡಿಕೆ ಇರಿಸಿದ ಚಿಂಗಪ್ಪ; ಜಿಲ್ಲಾಡಳಿತವು ಆಗಿಂದಾಗ್ಗೆ ಮಾಜಿ ಸೈನಿಕರ ಕುಂದುಕೊರತೆ ಆಲಿಸುವಂತೆಯೂ ಗಮನ ಸೆಳೆದರು. ಅಲ್ಲದೆ ಯೋಧರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಬೇಕೆಂದು ಒತ್ತಾಯಿಸಿದರು.

ಮೇ|| ಗೀತಾಶೆಟ್ಟಿ ಕರೆ : ಕೊಡಗು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕಿ ಮೇ|| ಗೀತಾಶೆಟ್ಟಿ ಅವರು ಈ ಸಂದರ್ಭ ಮಾತನಾಡುತ್ತಾ; 1999ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಗಿಲ್ ವಿಜಯ ದಿವಸಾಚರಣೆಗೆ ಚಾಲನೆ ನೀಡಿದ್ದಾಗಿ ನೆನಪಿಸಿದರು. ಅಂದಿನಿಂದ ಇಂದಿನ ತನಕ 20 ವರ್ಷಗಳಿಂದ ಈ ವಿಜಯ ದಿವಸದಲ್ಲಿ ಪಾಲ್ಗೊಳ್ಳುತ್ತಿರುವದಾಗಿ ಮೆಲುಕು ಹಾಕಿದ ಅವರು; ಸಮಾಜ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯೋಧರನ್ನು ಗೌರವಿಸುವಂತೆ ಕರೆ ನೀಡಿದರು.

ಭಾರತೀಯ ಸೈನಿಕ ಪರಂಪರೆಯ ಶೌರ್ಯ, ತ್ಯಾಗ, ಬಲಿದಾನದೊಂದಿಗೆ ಕಾರ್ಗಿಲ್ ಸಮರದ ಕುರಿತು ‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ದಿಕ್ಸೂಚಿ ಭಾಷಣ ಮಾಡಿದರು. ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ಡಿ. ನರಸಿಂಹ ಸ್ವಾಗತಿಸಿದರು. ಬಜರಂಗದಳ ಜಿಲ್ಲಾ ಸಂಚಾಲಕ ಚೇತನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಸಂಚಾಲಕ ವಿನಯ್ ನಿರೂಪಿಸಿದರು. ಮಹೇಶ್ ಅಮೀನ್ ಸಂಚಾಲಕ ಕುಶಾಲನಗರ ವಂದೇ ಮಾತರಂ ಹಾಡಿದರು. ಸೈನಿಕರ ಸಂಘದ ಪ್ರಮುಖರಾದ

(ಮೊದಲ ಪುಟದಿಂದ) ನಿವೃತ್ತ ಕ್ಯಾಪ್ಟನ್ ಬಿ.ಎನ್. ಆನಂದ್, ಕುಟ್ಟಂಡ ನಂದಾ ಕಾವೇರಪ್ಪ, ಎಂ.ಕೆ. ನಾಚಪ್ಪ, ಮೊದಲಾದವರಲ್ಲದೆ, ರಾಷ್ಟ್ರೀಯ ಸ್ವಯಂಸೇವಕ ಸಂಘ, ಬಿಜೆಪಿ, ಹಿಂಜಾವೇ, ಯುವ ಒಕ್ಕೂಟ ಮುಂತಾದ ಪ್ರಮುಖರು ಭಾಗವಹಿಸಿದ್ದರು. ಮಡಿಕೇರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಪ್ರತ್ಯೇಕ ಗೌರವ ನಮನ ಸಲ್ಲಿಸಿದರು.

ಸೋಮವಾರಪೇಟೆಯಲ್ಲಿ

ಸೋಮವಾರಪೇಟೆ : ಕಾರ್ಗಿಲ್ ವಿಜಯೋತ್ಸವದ 20ನೇ ವರ್ಷಾ ಚರಣೆಯನ್ನು ಇಲ್ಲಿನ ಜೈವಾನ್ ಮಾಜೀ ಸೈನಿಕರ ಸಂಘದ ನೇತೃತ್ವದಲ್ಲಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗ ದೊಂದಿಗೆ ಆಚರಿಸಲಾಯಿತು.

ಪತ್ರಿಕಾಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಮರ್ ಜವಾನ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಗಿಲ್ ಯುದ್ಧದ ಸಂದರ್ಭ ದೇಶಕ್ಕಾಗಿ ಹೋರಾಡಿ ಮಡಿದ ವೀರ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜೈಜವಾನ್ ಮಾಜೀ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಅವರು, ಪಾಕಿಸ್ತಾನದ ಸೈನಿಕರೊಂದಿಗೆ ಕಾಶ್ಮೀರಿ ಉಗ್ರರೂ ಸಹ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ವಿರುದ್ಧ ಸಮರ ಸಾರಿದ್ದರು. ದೇಶದ ಹೆಮ್ಮೆಯ ಸೈನಿಕರು ಪ್ರತಿಕೂಲ ಹವಾಮಾನದ ಪರಿಸ್ಥಿತಿಯಲ್ಲೂ ವಿಜಯ ಸಾಧಿಸಿದ್ದು, ದೇಶಕ್ಕೆ ಹಿರಿಮೆ ತಂದಿದೆ ಎಂದರು.

ಪಾಕಿಸ್ತಾನ ಸರ್ಕಾರವನ್ನು ಅಲ್ಲಿನ ಸೈನ್ಯ ಮತ್ತು ಭಯೋತ್ಪಾದಕರು ನಿಯಂತ್ರಿಸುತ್ತಿದ್ದಾರೆ. ಹೀಗಾಗಿಯೇ ಪಾಕಿಸ್ತಾನ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಒಂದೇ ಸಮಯದಲ್ಲಿ ಎರಡೂ ರಾಷ್ಟ್ರಗಳು ಸ್ವಾತಂತ್ರ್ಯ ಗಳಿಸಿದ್ದರೂ ಸಹ ಭಾರತ ಅಭಿವೃದ್ಧಿ ಯಲ್ಲಿ ವಿಶ್ವದೆದುರು ತೆರೆದುಕೊಳ್ಳುತ್ತಿ ದ್ದರೆ, ಪಾಕಿಸ್ತಾನ ಭಯೋತ್ಪಾದನೆಯ ಮೂಲಕ ವಿಶ್ವದಲ್ಲಿ ಕುಖ್ಯಾತಿ ಪಡೆಯುತ್ತಿದೆ ಎಂದು ವ್ಯಂಗ್ಯ ವಾಡಿದರು.

ಸೈನಿಕರ ತ್ಯಾಗ, ಬಲಿದಾನಗಳು ಇಂದಿನ ಯುವ ಜನಾಂಗಕ್ಕೆ ಪ್ರೇರಣೆಯಾಗಬೇಕು. ಯುವಕ/ಯುವತಿಯರು ಹೆಚ್ಚು ಹೆಚ್ಚು ಸೈನ್ಯಕ್ಕೆ ಸೇರುವಂತಾಗಬೇಕು. ಭಾರತವು ವಿಶ್ವಕ್ಕೆ ಗುರುವಾಗಬೇಕಾದರೆ ಪ್ರತಿಯೋರ್ವ ರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೇಜರ್ ಮಂದಪ್ಪ ಮಾತನಾಡಿ, ಭಾರತೀಯ ಸೇನೆ ಶೌರ್ಯ, ತ್ಯಾಗ, ಬಲಿದಾನ, ಶಿಸ್ತಿಗೆ ಹೆಸರುವಾಸಿಯಾದ ಸೇನೆಯಾಗಿದೆ. ಸೈನಿಕರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ಮೋಟಾರ್ ಯೂನಿಯನ್ ಸದಸ್ಯ ಇಬ್ರಾಹಿಂ ಅವರುಗಳು ಕಾರ್ಗಿಲ್ ಯುದ್ಧ, ವಿಜಯೋತ್ಸವದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಜೈಜವಾನ್ ಮಾಜೀ ಸೈನಿಕರ ಸಂಘದ ಸದಸ್ಯರುಗಳು, ಮೋಟಾರ್ ಯೂನಿಯನ್, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಸದಸ್ಯರು, ಲಯನ್ಸ್ ಸಂಸ್ಥೆ ಸದಸ್ಯರು, ನಿವೃತ್ತ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ವೀರಾಜಪೇಟೆ

ವೀರಾಜಪೇಟೆ: ತ್ಯಾಗ ಬಲಿದಾನದಿಂದ 1999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದ ನೆನಪಿಗಾಗಿ ವೀರ ಯೋಧರನ್ನು ಸ್ಮರಿಸಿ ಸೈನಿಕ ಸ್ಮಾರಕಕ್ಕೆ ಗೌರವ ಅರ್ಪಣೆ ಮಾಡಲಾಯಿತು.

ಕೊಡಗು ಮಾಜಿ ಸೈನಿಕರ ಸಂಘ; ವೀರಾಜಪೇಟೆ ಮತ್ತು ವಿವಿದ್ಧ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿರುವ ಸೈನಿಕ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚೆಂದ್ರೀಮಾಡ ಗಣೇಶ್ ನಂಜಪ್ಪ ಅವರು ಮಾತನಾಡಿ 1999 ರಲ್ಲಿ ಕಾರ್ಗಿಲ್ ಯುದ್ಧ ನಡೆದು ಇಂದಿಗೆ 20 ವರ್ಷಗಳು ಸಂದಿವೆ; ಯುದ್ಧದಲ್ಲಿ 527 ಮಂದಿ ಪ್ರಾಣ ತ್ಯಾಗ ಮಾಡಿದರ ಪರಿಣಾಮ ಕಾರ್ಗಿಲ್ ಯುದ್ಧದಲ್ಲಿ ಭಾರತದ ಸೇನೆ ವಿಜಯ ಸಾಧಿಸಿದೆ. ಇಂದು ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತಿದ್ದೇವೆ ನಮ್ಮ ಸೈನಿಕರ ಧೈರ್ಯ, ಶೌರ್ಯ, ಸಮರ್ಪಣೆ ಸದಾ ಸ್ಮರಿಸುತ್ತೇವೆ; ಈ ಸಂದರ್ಭದಲ್ಲಿ ದೇಶಕ್ಕಾಗಿ ತಮ್ಮನ್ನು ಮುಡಿಪಾಗಿಟ್ಟ ಯೋಧರಿಗೆ ನಮ್ಮ ವಿನಮ್ರ ಗೌರವ ಎಂದು ಹೇಳಿದರು.

ತಾಲೂಕು ಆಡಳಿತ ಪರವಾಗಿ ಶಿರೆಸ್ತೇದಾರ್ ಹೆಚ್.ಕೆ ಪೊನ್ನು; ಭಾರತಿಯ ಸ್ಟೇಟ್ ಬ್ಯಾಂಕ್ ಪರವಾಗಿ ವ್ಯವಸ್ಥಾಪಕ ಕಿರಣ್ ಕುಮಾರ್ ಸೈನಿಕ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ಗೌರವ ಸೂಚಿಸಿದರು. ನಂತರದಲ್ಲಿ ಎರಡು ನಿಮಿಷಗಳ ಕಾಲ ಮೌನ ಆಚರಣೆ ಮಾಡಿ ಸಿಹಿ ಹಂಚಿದರು.

ಗೌರವ ಅರ್ಪಣೆಯ ವೇಳೆ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಚಪ್ಪಂಡ ಹರೀಶ್, ಇ.ಸಿ.ಹೆಚ್.ಪಾಲಿ ಕ್ಲಿನಿಕ್‍ನ ವ್ಯವಸ್ಥಾಪಕರಾದ ಚಿಣ್ಣಪ್ಪ, ಮಾಜಿ ಅಧ್ಯಕ್ಷ ಪುಗ್ಗೇರ ನಂಧಾ, ಪಟ್ರಪಂಡ ಕರುಂಬಯ್ಯ ಮತ್ತು ಸಂಘದ ಸದಸ್ಯರು ಮಾಜಿ ಸೈನಿಕರು, ಬ್ಯಾಂಕ್ ಸಿಬ್ಬಂದಿ ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಸೈನಿಕ ಸ್ಮಾರಕಕ್ಕೆ ಗೌರವ ರ್ಪಣೆ ಮಾಡಿದರು.

ಕಾವೇರಿ ಲಘುವಾಹನ

ವೀರಾಜಪೇಟೆ: ನಗರದ ಕಾರು ನಿಲ್ದಾಣದ ಕಾವೇರಿ ಲಘು ವಾಹನ ಮಾಲೀಕ ಮತ್ತು ಚಾಲಕರ ಸಂಘದ ಕಚೇರಿಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ ಮಾಡಲಾಯಿತು ಸಂಘದ ಅಧ್ಯಕ್ಷ ಜೆ.ಎನ್.ರಾಜ ನೇತೃತ್ವದಲ್ಲಿ ಸಂಘದ ಸದಸ್ಯರು ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಒಂದು ನಿಮಿಷ ಮೌನಾಚರಣೆ ಸಲ್ಲಿಸಿ ಗೌರವ ಅರ್ಪಣೆ ಮಾಡಲಾಯಿತು ಬಳಿಕ ಮಾತನಾಡಿದ ಜೆ.ಎನ್ ರಾಜ ಕಾರ್ಗಿಲ್ ಯುದ್ಧದಲ್ಲಿ ದೇಶದ ಸೈನಿಕ ಪಡೆಗಳು ಎದುರಾಳಿಗಳನ್ನು ಸದೆಬಡಿಯುವಲ್ಲಿ ಯಶಸ್ವಿಯಾಯಿತು; ಅನೇಕ ಯೋಧರು ಪ್ರಾಣ ತ್ಯಾಗ ಮಾಡಿದರು ಸೈನಿಕರ ಶೌರ್ಯವನ್ನು ದೇಶವು ಸದಾ ನೆನಪಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ವೇಳೆಯಲ್ಲಿ ಸಂಘದ ಸದಸ್ಯರು ಹಾಜರಿದ್ದರು.

20ನೇ ವಿಜಯ್ ದಿವಸ್

ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ, ರಾಷ್ಟೀಯ ಸೇವಾ ಯೋಜನಾ ಘಟಕ, ರೆಡ್ ರಿಬ್ಬನ್ ಕ್ಲಬ್ ಮತ್ತು ರೆಡ್ ಕ್ರಾಸ್ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ 20ನೇ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ. ಚಿತ್ರಾ .ವೈ ವಹಿಸಿಕೊಂಡು, ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವದರ ಮೂಲಕ ಚಾಲನೆ ನೀಡಿದರು. ಮುಖ್ಯ ಭಾಷಣಕಾರರಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಧನಂಜಯ ಅಗೋಳಿಕಜೆ ವಿದ್ಯಾರ್ಥಿಗಳಿಗೆ ಪ್ರಪಂಚದ ಯಾವದೇ ದೇಶದಲ್ಲಿ ಭಾರತದ ಕಾರ್ಗಿಲ್‍ನಂತಹ ರಣರಂಗವಿರಲಾರದು. ತಮ್ಮ ಪ್ರಾಣದ ಹಂಗನ್ನು ತೊರೆದು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಾಗ್ರಣಿಗಳನ್ನು ಕೊಂಡಾಡಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ದಯಾನಂದ.ಕೆ.ಸಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ಇಂದು ಯುವ ಜನರಲ್ಲಿ ದೇಶಾಭಿಮಾನ ಕುಸಿಯುತ್ತಿದೆ, ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮದ ಅರಿವು ಮುಡಿಸುವದು ಅನಿವಾರ್ಯ ಎಂದರು. ಕಾಲೇಜಿನ ಇನ್ನೋರ್ವ ಉಪನ್ಯಾಸಕ ಪ್ರಕಾಶ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕ ಪ್ರವೀಣ್ ನಿರೂಪಿಸಿ, ಆಕೇಶ ಸ್ವಾಗತಿಸಿ, ಶಿವ ಪ್ರಾರ್ಥಿಸಿ, ರೋಷನ್‍ರವರು ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರಪ್ರಸಾದ್ ಮತ್ತು ಎಲ್ಲಾ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾವೇರಿ ಕಾಲೇಜು: ಕಾರ್ಗಿಲ್ ವಿಜಯೋತ್ಸವ

ಕಾವೇರಿ ಕಾಲೇಜು ವೀರಾಜಪೇಟೆಯಲ್ಲಿ 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ಕಾಂiÀರ್iಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅಥಿತಿಗಳಾಗಿ ಟೆರೆರಿಸ್ಟ್ ಎನ್‍ಕೌಂಟರ್ ಸ್ಪೆಷಲಿಸ್ಟ್, 44ನೇ ರಾಷ್ಟ್ರೀಯ ರೈಫಲ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶೌರ್ಯ ಪ್ರಶಸ್ತಿ ವಿಜೇತ ಯೋಧ ಮಹೇಶ್ ಆಗಮಿಸಿದ್ದರು.

ಸಮಯ ಎಂಬದು ಅಮೂಲ್ಯವಾದದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ದೇಶ ಸೇವೆ ಮಾಡುವದು ತುಂಬಾ ಸಂತೋಷದ ಕೆಲಸವಾಗಿದೆ. ದೇಶ ಕಾಯುವದು ಪ್ರತಿಯೊಬ್ಬ ನಾಗರಿಕನ ಕರ್ತÀವ್ಯವಾಗಿದೆ. ಸಾವು ಹತ್ತಿರ ಬಂದಾಗ ಕುಟುಂಬ ಅಥವಾ ಸಮಾಜದ ಬೆಲೆ ತಿಳಿಯುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ದೇಶ ಕಾಯುವಂತಹ ಕೆಲಸ ಮಾಡಬೇಕು. ಪ್ರತಿಯೊಬ್ಬ ವ್ಯಕ್ತಿಗೆ ದೇಶÀಭಕ್ತಿ ಇರಬೇಕು. ಸೈನಿಕರು ದೇಶ ಕಾಯುತ್ತಾರೆ ಹಾಗೆಯೇ ವಿದ್ಯಾರ್ಥಿ ಗಳು ದೇಶ ನಿರ್ಮಾಣಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ಮಹೇಶ್ ಅವರನ್ನು ಸನ್ಮಾನಿಸ ಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಆನಂದ್ ಕಾರ್ಲ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕಿ ದೇಚಮ್ಮ, ಆಂಗ್ಲ ಉಪನ್ಯಾಸಕಿ ವೀಣಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಟಿ. ಶೆಟ್ಟಿಗೇರಿ

ಶ್ರೀಮಂಗಲ : ಟಿ. ಶೆಟ್ಟಿಗೇರಿಯ ಮಾಜಿ ಸೈನಿಕರ ಸಂಘದಿಂದ ಕಾರ್ಗಿಲ್ ವಿಜಯ ದಿವಸದ 20ನೇ ವರ್ಷದ ವಿಜಯೋತ್ಸವವನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 527 ವೀರ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಇದಕ್ಕೂ ಮೊದಲು ರಾಷ್ಟ್ರ ದ್ವಜಾರೋಹಣ ಮಾಡಿ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಉಳುವಂಗಡ ಗಣಪತಿ, ಖಜಾಂಚಿ ಚಂಗುಲಂಡ ಸತೀಶ್ ಮತ್ತು ಸದಸ್ಯರುಗಳು ಪಾಲ್ಗೊಂಡಿದ್ದರು.

ಮೂರ್ನಾಡು

ಮೂರ್ನಾಡು ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ವತಿಯಿಂದ ಇಲ್ಲಿನ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು. ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆರ್‍ಎಸ್‍ಎಸ್ ಪ್ರಮುಖ್ ಶ್ಯಾಂಪ್ರಸಾದ್, ವಿಹಿಂಪ ಕಾರ್ಯದರ್ಶಿ ನರಸಿಂಹ, ಬಜರಂಗದಳ ಸಂಚಾಲಕ ಚೇತನ್ ಮೊದಲಾದವರು ಪಾಲ್ಗೊಂಡು ಮಾತ ನಾಡಿದರು. ಜಿಲ್ಲಾ ಸಹಕಾರ್ಯದರ್ಶಿ ಪುದಿಯೋಕ್ಕಡ ರಮೇಶ್ ನಿರೂಪಿಸಿದರು. ಸುನಿಲ್ ವಂದೇ ಮಾತರಂ ಹಾಡಿದರು. ಹೆಚ್ಚಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.

ಸುಂಟಿಕೊಪ್ಪ

ಹೋಬಳಿ ಜೈಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ 20ನೇ ವರ್ಷದ ಕಾರ್ಗಿಲ್ ವಿಜಯ ದಿವಸವನ್ನು 7ನೇ ಹೊಸಕೋಟೆ ಯಲ್ಲಿರುವ ಸಂಘದ ಕಚೇರಿಯಲ್ಲಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಗ್ರಾ.ಪಂ. ಉಪಾಧ್ಯಕ್ಷರು ಹಾಗೂ ಸಂಘದ ಅಧ್ಯಕ್ಷರು ಸೇರಿ ಜಂಟಿಯಾಗಿ ನೆರವೇರಿಸಿ ದೇಶಕ್ಕಾಗಿ ಹೋರಾಡಿ ವೀರ ಮೃತ್ಯು ಹೊಂದಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಕಚೇರಿಯ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಿಂದ ನೆರವೇರಿಸಲಾಯಿತು.