ಗೋಣಿಕೊಪ್ಪಲು. ಜು. 26: ಕಾಡಾನೆಯ ಹಿಂಡು ಗದ್ದೆ ಪೈರು ಸೇರಿದಂತೆ ಹುಲ್ಲಿನ ಮೆದೆ,ಬಾಳೆ,ತೆಂಗು, ನಾಶ ಪಡಿಸಿದ್ದು ರೈತರು ಕಂಗಾಲಾಗಿದ್ದಾರೆ. ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ ಕಾಕೇರ ರವಿ ಹಾಗೂ, ಕೊರಕುಟ್ಟಿರ ಕರುಂಬಯ್ಯನವರ ಭತ್ತದ ಗದ್ದೆಗೆ ಲಗ್ಗೆ ಇಟ್ಟಿರುವ ಕಾಡಾನೆಯ ಹಿಂಡು 15 ಎಕರೆಗೆ ನಾಟಿ ಮಾಡಲು ತಯಾರು ಮಾಡಿದ್ದ ಭತ್ತದ ಪೈರನ್ನು ದ್ವಂಸಗೊಳಿಸಿದಲ್ಲದೆ ಸಮೀಪದಲ್ಲಿ ಶೇಖರಿಸಿಡಲಾಗಿದ್ದ ಹುಲ್ಲಿನ ಮೆದೆಯನ್ನು ಸಂಪೂರ್ಣ ಹಾಳು ಮಾಡಿದೆ.
ನಾಲ್ಕು ಕಾಡಾನೆ ಸೇರಿದಂತೆ ಒಂದು ಒಂಟಿ ಸಲಗದೊಂದಿಗೆ ಈ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಬೀಡು ಬಿಟ್ಟಿದ್ದು ರೈತರು,ನಾಗರೀಕರು ಭಯದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ. ಈ ಭಾಗದ ಕಾಫಿ ತೋಟಕ್ಕೆ ನುಗ್ಗಿ ಆಶ್ರಯ ಪಡೆದಿರುವ ಕಾಡಾನೆಗಳು ತೋಟದಲ್ಲಿರುವ ಬಾಳೆ,ತೆಂಗು, ಕಾಫಿ ಗಿಡಗಳನ್ನು ನಾಶ ಪಡಿಸಿದ್ದು ಲಕ್ಷಾಂತರ ಫಸಲು ನಾಶವಾಗಿದೆ. ಪೊನ್ನಂಪೇಟೆ ಅರಣ್ಯ ವ್ಯಾಪ್ತಿಯ ಸಿಬ್ಬಂದಿಗಳು ಈ ಹಿಂಡನ್ನು ಓಡಿಸುವ ಪ್ರಯತ್ನ ನಡೆಸಿದರಾದರೂ ಸ್ಥಳ ಬಿಟ್ಟು ಕದಲುತ್ತಿಲ್ಲ. ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪೊನ್ನಂಪೇಟೆ ಹೋಬಳಿಯ ಸಂಚಾಲಕರಾದ ಆಲೇಮಾಡ ಮಂಜುನಾಥ್ ಮುಂದಾಳತ್ವದಲ್ಲಿ ರೈತ ಮುಖಂಡರಾದ ಗಾಡಂಗಡ ಉತ್ತಯ್ಯ, ಎಂ.ಬಿ.ಅಶೋಕ್, ಹೆಚ್.ಜೆ.ದಿನೇಶ್ ಹಾಗೂ ಪ್ರಕಾಶ್ ಅವರು ಅರಣ್ಯ ಅಧಿಕಾರಿಯವರನ್ನು ಭೇಟಿ ಮಾಡಿ ಕಾಡಾನೆಗಳನ್ನು ಓಡಿಸುವಂತೆ ಆಗ್ರಹಿಸಿದ್ದಾರೆ.
-ಹೆಚ್.ಕೆ. ಜಗದೀಶ್