ಮಡಿಕೇರಿ, ಜು. 24: ಜಿಲ್ಲೆಯ ಶಾಲೆಗಳಿಗೆ ಧಾರ್ಮಿಕ ಪ್ರಚಾರದ ಪುಸ್ತಕಗಳನ್ನು ಸರಬರಾಜು ಮಾಡಲಾಗುತ್ತಿದ್ದು. ಈ ಬಗ್ಗೆ ತನಿಖೆ ಕೈಗೊಂಡು ಕ್ರಮಕೈಗೊಳ್ಳುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಜಿ.ಪಂ. ಅಧ್ಯಕ್ಷ ಬಿ.ಎ ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಸದಸ್ಯ ಬಾನಂಡ ಪ್ರಥ್ಯು ಅವರು; ಶಾಲೆಗಳಿಗೆ ಧಾರ್ಮಿಕ ಪ್ರಚಾರದ ಪುಸ್ತಕಗಳು ಸರಬರಾಜಾಗಿವೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು; ಇಲ್ಲವಾದಲ್ಲಿ ಹೋರಾಟ ನಡೆಸಲಾಗುವದೆಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ ಅವರು; ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ಸೂಚನೆ ನೀಡಿದ್ದು; ಪುಸ್ತಕಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ಈ ಬಗ್ಗೆ ಪೊಲೀಸ್ ಉನ್ನತಾಧಿಕಾರಿಗೆ ದೂರು ನೀಡಲಾಗಿದೆ. ಒಟ್ಟು 23 ಶಾಲೆಗಳಿಂದ ಪುಸ್ತಕಗಳನ್ನು ಪಡೆದುಕೊಳ್ಳಲಾಗಿದೆ. ಉನ್ನತಾಧಿಕಾರಿಗಳು ಪ್ರಕರಣವನ್ನು ಮಡಿಕೇರಿ ನಗರ ಠಾಣಾಧಿಕಾರಿಗೆ ವರ್ಗಾಯಿಸಿದ್ದು; ಠಾಣಾಧಿಕಾರಿಗಳು ತನಿಖೆ ನಡೆಸುತ್ತಿರುವದಾಗಿ ಮಾಹಿತಿ ನೀಡಿದರು.

ಸದಸ್ಯರುಗಳಾದ ಶಶಿ ಸುಬ್ರಮಣಿ, ಮಹೇಶ್ ಅವರುಗಳು ಪುಸ್ತಕ ಕಳುಹಿಸಿದವರ ವಿಳಾಸ ಲಕೋಟೆಯಲ್ಲಿದೆ. ಅವರುಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ಅವರು, ಈ ವಿಚಾರ ಗಮನಕ್ಕೆ ಬಂದಿದೆ. ಪುಸ್ತಕಗಳನ್ನು ಹಂಚದಂತೆ ತಡೆ ಹಿಡಿಯಲಾಗಿದೆ. ಡಿಡಿಪಿಐ ಪೊಲೀಸ್ ದೂರು ನೀಡಿದ್ದಾರೆ ಕ್ರಮ ಜರುಗಲಿದೆ ಎಂದರು.

ಸದಸ್ಯ ಮುರಳಿ ಕರುಂಬಮಯ್ಯ ಮಾತನಾಡಿ, ಪುಸ್ತಕಗಳಲ್ಲಿ ದೇವರನ್ನು ಅವಹೇಳನ ಮಾಡಿ, ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ. ಪುಸ್ತಕಗಳನ್ನು ಕಚೇರಿಯಲ್ಲಿಟ್ಟುಕೊಳ್ಳದೆ ನಾಶ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಅದು ಸೋರಿಕೆಯಾಗಿ ಸಾರ್ವಜನಿಕರ ಕೈಸೇರುವ ಸಾಧ್ಯತೆಯಿದೆ ಎಂದು ಹೇಳಿದರು.

ಪ್ರಥ್ಯು ಹಾಗೂ ಬೋಪಣ್ಣ ಅವರುಗಳು ಕೊಡವ ಭಾಷೆ ಜಿಲ್ಲೆಯ ಮೂಲನಿವಾಸಿಗಳದ್ದಾಗಿದ್ದು, ಆ ಭಾಷೆಯಲ್ಲಿ ಧಾರ್ಮಿಕ ವಿಚಾರ ಪ್ರಚಾರ ಪಡಿಸಲು ಅಧಿಕಾರ ಕೊಟ್ಟವರಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಕ್ರಿಯಿಸಿದ ಸಿಇಓ ಬಿಇಓ ಕಚೇರಿಯಿಂದ ಎಲ್ಲ ಪುಸ್ತಕಗಳನ್ನು ಪಡೆದುಕೊಂಡು ತಮ್ಮ ಕಚೇರಿಯಲ್ಲಿ ಇರಿಸಿಕೊಳ್ಳುವಂತೆ ಡಿಡಿಪಿಐ ಅವರಿಗೆ ಸೂಚಿಸಿದರು.

ಸದಸ್ಯ ಲತೀಫ್ ಮಾತನಾಡಿ, ಇಂತಹ ಪುಸ್ತಕಗಳನ್ನು ಚರ್ಚ್‍ಗಳಿಗೆ ಕಳುಹಿಸಲಿ, ಶಾಲೆಗೆ ಕಳುಹಿಸಬಾರದು ಇದರಲ್ಲಿ ಕೊಡಗಿನವರ ಕೈವಾಡವೂ ಇದೆ. ಈ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಕೆಲಕಾಲ ಚರ್ಚೆ ನಡೆದು ಪೊಲೀಸ್ ಇಲಾಖೆ ಮುಖಾಂತರ ತನಿಖೆಗೆ ಆಗ್ರಹಿಸಲು ನಿರ್ಣಯ ಕೈಗೊಳ್ಳಲಾಯಿತು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಸದಸ್ಯರುಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.