ಸಿದ್ದಾಪುರ, ಜು. 24: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕೊಡಗು ಜಿಲ್ಲೆ, ಸಿದ್ದಾಪುರ ನಗರ ಪತ್ರಕರ್ತರ ಸಂಘ, ಜಿಲ್ಲಾ ಅಗ್ನಿ ಶಾಮಕ ದಳ,ಯುನಿಸೆಫ್, ಆರೋಗ್ಯ ಇಲಾಖೆ, ಬಾಂಬ್ ನಿಷ್ಕ್ರಿಯ ದಳ, ಪೊಲೀಸ್ ಇಲಾಖೆ ಹಾಗೂ ಸಿದ್ದಾಪುರ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಮೂರು ದಿನಗಳವರೆಗೆ ನಡೆಯಲಿರುವ ಪ್ರಕೃತಿ ವಿಕೋಪ ನಿರ್ವಹಣಾ ತರಬೇತಿ ಕಾರ್ಯಾಗಾರವು ಬುಧವಾರದಂದು ಸಿದ್ದಾಪುರ ಜಿ.ಎಂ.ಪಿ. ಶಾಲೆಯಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡಿತು.
ಪ್ರಾಸ್ತಾವಿಕ ಮಾತನಾಡಿದ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಜಿಮ್ಮಿ ಸೀಕ್ವೇರಾ ಕಳೆದ ಭಾರಿ ಕೊಡಗಿನಲ್ಲಿ ಸಂಭವಿಸಿದ ವಿಕೋಪದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂ ಸೇವಕರು ಯಾವ ರೀತಿಯಲ್ಲಿ ಕಾರ್ಯಪ್ರವೃತರಾಗಬೇಕೆಂಬ ಕುರಿತು ತರಬೇತಿಯನ್ನು ಶಿಬಿರದಲ್ಲಿ ನೀಡಲಾಗುವದು. ಈ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳ, ಆರೋಗ್ಯ ಇಲಾಖೆ, ಬಾಂಬ್ ನಿಷ್ಕ್ರಿಯ ದಳ, ಪೊಲೀಸ್ ಇಲಾಖೆ, ಗ್ರಾ.ಪಂ., ಯುನಿಸೆಫ್ ಅಧಿಕಾರಿಗಳ ತಂಡ ದಿಂದ ಶಿಬಿರಾರ್ಥಿಗಳಿಗೆ ತರಬೇತಿ ಯನ್ನು ನೀಡಲಾಗುವದು ಎಂದು ಮಾಹಿತಿ ನೀಡಿದರು. ಕಾರ್ಯಾ ಗಾರವು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೋಮವಾರಪೇಟೆ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ವಿ.ಕೆ ಲೋಕೇಶ್ ಪ್ರತಿವರ್ಷ ಪ್ರವಾಹದ ಸಂದÀರ್ಭದಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿ ತಾತ್ಕಾಲಿಕ ಪರಿಹಾರ ಕೊಡುತ್ತಿರುವದು ಸಾಮಾನ್ಯವಾಗಿದೆ. ಯಾರೂ ಕೂಡ ಶಾಶ್ವತ ಪರಿಹಾರಕ್ಕೆ ಶ್ರಮಿಸದೇ ಇರುವದು ವಿಪರ್ಯಾಸ ಎಂದು ವಿಷಾದ ವ್ಯಕ್ತಪಡಿಸಿದರು. ಸಿದ್ದಾಪುರ ದಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳು ಶ್ರದ್ದೆ ಯಿಂದ ಭಾಗವಹಿಸುವ ಮೂಲಕ, ಶಿಬಿರದಲ್ಲಿ ಪಡೆದಿರುವ ಶಿಕ್ಷಣವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಕಷ್ಟಕ್ಕೆ ನೆರವಾಗುವಂತೆ ಸಲಹೆಯಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕಾಳಪ್ಪ, ಇಲ್ಲಿ ತರಬೇತಿ ಪಡೆದಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಾರ್ಥಿಗಳು ಪ್ರಕೃತಿ ವಿಕೋಪದ ಸಂದÀರ್ಭದಲ್ಲಿ ನಿಸ್ವಾರ್ಥವಾಗಿ ಭಾಗವಹಿಸ ಬೇಕೆಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತ ಸಂಘದ ಕಾರ್ಯದರ್ಶಿ ಎ.ಎನ್. ವಾಸು, ಸಿದ್ದಾಪುರ ಪೊಲೀಸ್ ಠಾಣೆಯ ಮುಖ್ಯ ಪೇದೆ ಬೋಪಯ್ಯ, ಸಿದ್ದಾಪುರ ಜಿ.ಎಂ.ಪಿ. ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮ ಕುಮಾರಿ, ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಸಂಘಟಕರಾದ ದಮಯಂತಿ, ಜಿಲ್ಲಾ ಕಾರ್ಯದರ್ಶಿ ಶಾಲಿನಿ ಹಾಗೂ ವಿವಿಧ ಶಾಲೆ, ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವೀರಾಜಪೇಟೆ ತಾಲೂಕು ಕಾರ್ಯದರ್ಶಿ ಎಂ.ಕೆ. ನಳಿನಾಕ್ಷಿ ಸ್ವಾಗತಿಸಿ, ವೀರಾಜಪೇಟೆ ತಾಲೂಕು ಸಹಕಾರ್ಯದರ್ಶಿ ಜಾಜಿ ಬಿ.ಬಿ. ಹಾಗೂ ಸ್ಕೌಟ್ಸ್ ಗೈಡ್ಸ್ ಸ್ವಯಂ ಸೇವಕರಾದ ರಂಜಿನಿ ಆರ್. ನಿರೂಪಿಸಿ, ಸಂಸ್ಥೆಯ ಜಿಲ್ಲಾ ತರಬೇತಿ ಆಯುಕ್ತ ಸುರೇಶ್ ವಂದಿಸಿದರು.