*ಗೋಣಿಕೊಪ್ಪಲು : ಜು.25: ತಿತಿಮತಿ ಬಳಿಯ ದೇವಮಚ್ಚಿ ಮೀಸಲು ಅರಣ್ಯದಲ್ಲಿ ಪ್ರಾಣಿ ಬೇಟೆಯಾಡುತ್ತಿದ್ದ ಆರೋಪದ ಮೇರೆಗೆ 6 ಮಂದಿ ಆರೋಪಿಗಳಲ್ಲಿ ನಾಲ್ವರನ್ನು ತಿತಿಮತಿ ವಲಯ ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಸಿದ್ದಾಪುರ ಗುಹ್ಯ ಗ್ರಾಮದವರಾದ ಟಿ.ಪಿ. ಸುಬ್ರಮಣಿ, ಟಿ.ಎಂ.ಉಮೇಶ್, ಮಾಲ್ದಾರೆ ಗ್ರಾಮದ ಜೆ.ಕೆ.ಗಣೇಶ್, ಪಿರಿಯಾಪಟ್ಟಣ ರಾಣಿಗೇಟ್‍ನ ಹರೀಶ್ ಬಂಧಿತರು. ಇನ್ನಿಬ್ಬರು ಆರೋಪಿಗಳಾದ ಮಾಲ್ದಾರೆ ಗ್ರಾಮದ ಎಂ. ಸುನಿಲ್, ಗುಹ್ಯ ಗ್ರಾಮದ ಆರ್.ಸುನಿಲ್ ತಲೆ ಮರೆಸಿ ಕೊಂಡಿದ್ದಾರೆ. ಆರೋಪಿಗಳಿಂದ ಓಮಿನಿ ಕಾರ್, ಒಂದು ಡಬಲ್ ಬ್ಯಾರೆಲ್ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳು ದೇವಮಚ್ಚಿ ಮೀಸಲು ಅರಣ್ಯದಲ್ಲಿ ಗುರುವಾರ ಮುಂಜಾನೆ 5 ಗಂಟೆ ವೇಳೆಯಲ್ಲಿ ಪ್ರಾಣಿ ಬೇಟೆಯಾಡುತ್ತಿದ್ದರು ಎನ್ನಲಾಗಿದೆ. ದೊರೆತ ಖಚಿತ ಸುಳಿವಿನ ಮೇರೆಗೆ ಡಿಸಿಎಫ್ ಮರಿಯಾಕ್ರಿಸ್ತರಾಜ್, ಎಸಿಎಫ್ ಶ್ರೀಪತಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಆರ್.ಎಫ್.ಓ. ಅಶೋಕ್ ಹುನುಗುಂದ ನಾಲ್ವರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಸಫಲರಾದರು. ಕಾರ್ಯಾಚರಣೆಯಲ್ಲಿ ಡಿಆರ್‍ಎಫ್‍ಒ ಉಮಾಶಂಕರ್, ಫಾರೆಸ್ಟರ್‍ಗಳಾದ ಶ್ರೀನಿವಾಸ್, ದೇವರಾಜು, ವಾಹನ ಚಾಲಕರಾದ ರಮೇಶ್, ವೆಂಕಟೇಶ್ ಪಾಲ್ಗೊಂಡಿದ್ದರು.

-ಎನ್.ಎನ್.ದಿನೇಶ್