ಮಡಿಕೇರಿ, ಜು. 25: ಇಲ್ಲಿಗೆ ಸಮೀಪದ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಕರ್ತೋಜಿ ಗ್ರಾಮದ ಕೊಂಡಾಡಿ ಪದ್ಮಾವತಿ ಎಂಬವರ ತೋಟದಲ್ಲಿ ಬಂಡೆಗಳು ಉರುಳಿ ಬಿದ್ದಿವೆ. 2ನೇ ಮೊಣ್ಣಂಗೇರಿ ಬಳಿಯ ಕರ್ತೋಜಿ ಎಂಬಲ್ಲಿ ಭಾರೀ ಮಳೆಗೆ ಸಡಿಲಗೊಂಡ ಮಣ್ಣಿನಿಂದ ಬಂಡೆ ಕಲ್ಲು ಉರುಳಿವೆ. ಅದೃಷ್ಟವಶಾತ್ ಯಾವದೇ ಪ್ರಾಣ ಹಾನಿ ಉಂಟಾಗಿಲ್ಲ. ಬೆಟ್ಟದಿಂದ ಕಲ್ಲು ಬಂಡೆ ಉರುಳಿ ನದಿಗೆ ಬಿದ್ದಿದೆ.ಸ್ಥಳೀಯ ಜನರಲ್ಲಿ ಆತಂಕ ಹೆಚ್ಚಿದೆ. ಮಳೆಗೆ ಕಲ್ಲು ಉರುಳಿ ಬಂದಿದೆ; ಯಾವದೇ ಆತಂಕ ಬೇಡವೆಂದು ಜಿಲ್ಲಾಡಳಿತ ಹೇಳಿದೆ. ಸ್ಥಳಕ್ಕೆ ಕೊಡಗು ಜಿಲ್ಲಾಡಳಿತ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಲ್ಲದೆ, ಮದೆನಾಡು ಬಳಿ ರಾತ್ರಿ ವೇಳೆ ಹೆದ್ದಾರಿಗೆ ಮಣ್ಣು ಕುಸಿದಿದೆ. ಸ್ಥಳದಲ್ಲಿ ಪೊಲೀಸ್ ಇಲಾಖೆ ಬೀಡು ಬಿಟ್ಟು ಸಂಚಾರ ವ್ಯವಸ್ಥೆ ಸುಗಮಗೊಳಿಸುತ್ತಿದ್ದಾರೆ.