ಮಡಿಕೇರಿ, ಜು. 25: ಕೊಡಗಿನಲ್ಲಿ ಆಯುರ್ವೇದ ಚಿಕಿತ್ಸಾ ಘಟಕ ಸ್ಥಾಪಿಸುವ ಸಂಬಂಧ; ಗುಜರಾತ್ನಿಂದ ಅಲ್ಲಿನ ಗೋತಳಿಗಳನ್ನು ಜಿಲ್ಲೆಗೆ ಸಾಗಿಸುವ ದಿಸೆಯಲ್ಲಿ ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿರುವ ಪ್ರಕರಣ ಸಂಬಂಧ; ಕೇರಳ ಮೂಲದ ವ್ಯಕ್ತಿಗಳು ಬೀದಳ್ಳಿಯಲ್ಲಿ ಯೋಜನೆ ರೂಪಿಸಿರುವ ಸಂಗತಿ ಬೆಳಕಿಗೆ ಬಂದಿದೆ.ವಿಶ್ವಾಸನೀಯ ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ; ಸೋಮವಾರಪೇಟೆ ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀದಳ್ಳಿ ಗ್ರಾಮದಲ್ಲಿ ಈ ವ್ಯಕ್ತಿಗಳು ಗೋ ಶಾಲೆಯೊಂದಿಗೆ ಆಯುರ್ವೇದ ಚಿಕಿತ್ಸಾ ಘಟಕ ಸ್ಥಾಪಿಸಲು ಮುಂದಾಗಿರುವದು ಗೋಚರಿಸಿದೆ.ಬೀದಳ್ಳಿಯ ನಿವಾಸಿಗಳಿಬ್ಬರಿಗೆ ಸೇರಿರುವ ಜಾಗವನ್ನು 20 ವರ್ಷಗಳ ತನಕ ಗುತ್ತಿಗೆಗೆ ಪಡೆದುಕೊಂಡಿದ್ದು; ಈ ದಿಸೆಯಲ್ಲಿ ಒಡಂಬಡಿಕೆ ಮಾಡಿಕೊಂಡಿರುವದಾಗಿ ಅಲ್ಲಿನ ಗ್ರಾಮಸ್ಥರಿಂದ ಮಾಹಿತಿ ಲಭಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ರೀತಿ ಕುಮಟಾ ಎಂಬಲ್ಲಿ ಆಯುರ್ವೇದ ಚಿಕಿತ್ಸಾ ಯೋಗ ಕೇಂದ್ರ ಹೊಂದಿರುವದಾಗಿ ಕೇರಳ ಮೂಲದ ಈ ಮಂದಿ ಕೇಳಿಕೊಂಡಿದ್ದು; ಅದರ ಶಾಖೆಯನ್ನು ಬೀದಳ್ಳಿಯಲ್ಲಿ ಪ್ರಾರಂಭಿಸುತ್ತಿರುವದಾಗಿ ಜಾಗವನ್ನು ಹೊಂದಿಕೊಂಡಿರುವದು ಇದೀಗ ದೃಢಪಟ್ಟಿದೆ.
ಮಾತ್ರವಲ್ಲದೆ ಗುಜರಾತ್ನಿಂದ ‘ಗೀರ್’ ತಳಿಯ ಗೋವುಗಳನ್ನು ಕೊಡಗಿಗೆ ತರುವ ಯತ್ನದಲ್ಲಿ; ಕೊಡಗು ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿದಲ್ಲದೆ; ಗುಜರಾತ್ನಲ್ಲಿ ಸುಮಾರು 71 ಗೋವುಗಳನ್ನು ಖರೀದಿಸಿರುವದು ಕೂಡ ಬಹಿರಂಗಗೊಂಡಿದೆ.
ಆ ಸಂಬಂಧ ಜಿಲ್ಲಾಧಿಕಾರಿಗಳು ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿರುವ ಬೆನ್ನಲ್ಲೇ; ಕೇರಳ ಮೂಲದ ವ್ಯಕ್ತಿಗಳು ತಮಗೇನೂ ಗೊತ್ತಿಲ್ಲವೆಂದು ಅವಲತ್ತುಕೊಂಡಿದ್ದಾರೆ. ನಕಲಿ ಪತ್ರ ಅಥವಾ ಜಿಲ್ಲಾಧಿಕಾರಿಗಳ ಹೆಸರು ದುರ್ಬಳಕೆ ತಿಳಿಯಲಿಲ್ಲ ಎಂದು ಹೇಳಿಕೊಂಡಿದ್ದಾರೆ. ತಾವು ‘ಬ್ರೋಕರ್’ ಮೂಲಕ ಜಿಲ್ಲಾಡಳಿತ ಭವನದಿಂದ ದಾಖಲೆ ಪಡೆಯಲು ಮುಂದಾಗಿದ್ದು; ಆ ವೇಳೆ ಮೋಸ ನಡೆದಿರಬಹುದೆಂದು ಹೇಳಿಕೊಂಡಿರುವದಾಗಿ ‘ಶಕ್ತಿ’ಗೆ ಗೊತ್ತಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ಮುಂದುವರೆಸಿದೆ.