ಕೂಡಿಗೆ, ಜು. 25: ದನ-ಕರುಗಳಿಗೆ ಕುಡಿಯಲು, ಕೆರೆ-ಕಟ್ಟೆಗಳು ತುಂಬಲು ನೀರನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾವೇರಿ ನೀರಾವರಿ ಮಹಾಮಂಡಲದ ಮಹಾಸಭೆಯಲ್ಲಿ ತೀರ್ಮಾನ ಕೈಗೊಂಡಂತೆ ಹಾರಂಗಿ ಅಣೆಕಟ್ಟೆಯಿಂದ ಈಗಾಗಲೇ ಮುಖ್ಯ ನಾಲೆಯ ಮುಖಾಂತರ ನೀರನ್ನು ಹರಿಸಲಾಗಿದೆ.

ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಕೊಡಗಿನ ಗಡಿಭಾಗ ಹಾರಂಗಿಯಿಂದ ಶಿರಂಗಾಲದವರೆಗೆ ಮುಖ್ಯ ನಾಲೆಯಲ್ಲಿ ಹರಿಯುವ ನೀರು ಹೆಚ್ಚು ತೇವಾಂಶವಿರುವ ತಗ್ಗು ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ನೀರಿನ ತೇವಾಂಶವಿರುವದರಿಂದ ಮುಖ್ಯ ನಾಲೆಯಲ್ಲಿ ಹರಿಯುವ ನೀರಿನ ಸೆಳೆತದಿಂದ ತಗ್ಗು ಪ್ರದೇಶದಲ್ಲಿ ಹರಿಯುವಿಕೆ ಪ್ರಾರಂಭವಾಗಿದೆ. ಮುಖ್ಯ ನಾಲೆಯಲ್ಲಿ ಹರಿಯುವ ನೀರನ್ನು ಸ್ವಲ್ಪ ಮಟ್ಟದಲ್ಲಿ ಹುದುಗೂರಿನಿಂದ ಶಿರಂಗಾಲದ ಗಡಿಭಾಗದವರೆಗೆ ಉಪ ನಾಲೆಗೆ ನೀರು ಹರಿಸುವ ಮೂಲಕ ಬೇಸಾಯ ಮಾಡಲು ಅನುವು ಮಾಡಿಕೊಡಬೇಕಾಗಿ ಈ ಭಾಗದ ರೈತರ ಆಗ್ರಹವಾಗಿದೆ.

ಹುದುಗೂರಿನಿಂದ ಶಿರಂಗಾಲದವರೆಗೆ ಇರುವ ಜಲಾನಯನ ಅಚ್ಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ತುಂತುರು ಮಳೆ ಬೀಳುತ್ತಿರುವ ಹಿನ್ನೆಲೆ ಕೃಷಿ ಇಲಾಖೆಯು ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಿಸುತ್ತಿರುವ ಪರಿಷ್ಕøತ ಭತ್ತದ ಬಿತ್ತನೆ ಬೀಜವನ್ನು ಪಡೆದು ಸಸಿ ಮಡಿಗಳನ್ನು ತಯಾರಿಸುತ್ತಿದ್ದಾರೆ. ಹಾರಂಗಿ ಮುಖ್ಯ ನಾಲೆಯಿಂದ ಉಪ ನಾಲೆಗಳಿಗೆ ಸೋರಿಕೆ ನೀರು ಬರುತ್ತಿರುವದರಿಂದ ಈ ವ್ಯಾಪ್ತಿಯ ಕೆರೆಕಟ್ಟೆಗಳು ತುಂಬುತ್ತಿವೆ. ಕೆರೆಗಳ ವ್ಯಾಪ್ತಿಯಲ್ಲೇ ಹೆಚ್ಚು ಅಚ್ಚುಕಟ್ಟು ಪ್ರದೇಶವಿರುವದರಿಂದ ನಾಟಿ ಮಾಡಲು ಅನುಕೂಲವಾಗುವಂತೆ ಸ್ವಲ್ಪ ಪ್ರಮಾಣದ ನೀರನ್ನು ಉಪ ನಾಲೆಗಳಿಗೆ ಹರಿಸಬೇಕು ಎಂದು ಕೊಡಗಿನ ಗಡಿ ಭಾಗದವರೆಗಿನ ರೈತರು ಹಾಗೂ ತೊರೆನೂರು, ಶಿರಂಗಾಲ, ಹೆಬ್ಬಾಲೆ, ಕೂಡಿಗೆ ನೀರು ಬಳಕೆದಾರ ಸಹಕಾರ ಸಂಘದವರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಆಗ್ರಹಿಸಿದ್ದಾರೆ. ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳು ಹುದುಗೂರಿನಿಂದ ಶಿರಂಗಾಲದವರೆಗೆ ಸ್ಥಳ ಪರಿಶೀಲಿಸಿ ಬೇಸಾಯ ಮಾಡಲು ಅನುವು ಮಾಡಿಕೊಡಬೇಕಾಗಿ ಒತ್ತಾಯಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ