*ಸಿದ್ದಾಪುರ, ಜು. 25: ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ಕುಶಾಲನಗರಕ್ಕೆ ಸಾಗುವ ಕಾನನಕಾಡು ಅಂಚೆ ಕಚೇರಿ ಸಮೀಪವಿರುವ ಅಡ್ಡ ರಸ್ತೆಯೊಂದು ಕೆಸರುಮಯವಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣವಾಗಿರುವ ದುಬಾರೆ, ಕುಶಾಲನಗರಕ್ಕೆ ಸಾಗಲು 13 ಕಿಲೋಮೀಟರ್ ವ್ಯಯಿಸಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನನಕಾಡು ಅಂಚೆ ಕಚೇರಿ ಬಳಿಯಿರುವ ರಸ್ತೆ ಮೂಲಕ ಸಾಗಿದರೆ ಕೇವಲ 2 ಕಿಲೋಮೀಟರ್ ಅಂತರದಲ್ಲಿ ತ್ಯಾಗತ್ತೂರು ತಲಪಿ ಬಳಿಕ ದುಬಾರೆ, ಕುಶಾಲನಗರ ತಲಪಬಹುದಾಗಿದೆ. ಇದೀಗ ಪ್ರವಾಸಿಗರು ಸೇರಿದಂತೆ ಇತರ ಸಂಚಾರಕರು ಒಂಟಿಯಂಗಡಿಗೆ ಆಗಮಿಸಿ ನಂತರ 13 ಕಿಲೋಮೀಟರ್ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಪೂರ್ಣ ಕೆಸರುಮಯ ಆಗಿರುವ ಕಾನನಕಾಡು ರಸ್ತೆ ಪಾದಚಾರಿಗಳು ಸಂಚರಿಸಲೂ ಅಯೋಗ್ಯವಾಗಿದೆ. ಈ ರಸ್ತೆಯು ಕೃಷಿ ಗದ್ದೆಯಂತ್ತಾಗಿದ್ದು ಲೋಕೋಪಯೋಗಿ ಅಧೀನಕ್ಕೆ ಬರುವ ಈ ರಸ್ತೆಯನ್ನು ದುರಸ್ತಿಪಡಿಸಲು ಲೋಕೋಪಯೋಗಿ ಇಲಾಖೆ ಕಾಳಜಿ ವಹಿಸದ ಹಿನ್ನೆಲೆ ಯಲ್ಲಿ ಈ ರಸ್ತೆಯಲ್ಲಿ ಸಾಗುವವರಿಗೆ ನರಕಸದೃಶವಾಗಿದೆ ಎಂಬದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. - ಸುಧಿ