ಮೊಗೇರ ಸೇವಾ ಸಮಾಜ ಆರೋಪ

ಮಡಿಕೇರಿ, ಜು. 23: ಕೊಡಗು ಜಿಲ್ಲೆಯಲ್ಲಿ ಹೆಚ್1ಎನ್1 ಕಾಯಿಲೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದು, ಇದಕ್ಕೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿರುವ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ, ರೋಗ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ಶಿವಪ್ಪ, ಇತ್ತೀಚೆಗೆ ಸಿದ್ದಾಪುರದಲ್ಲಿ ಪಿ.ಸಿ. ರಾಜು ಎಂಬವರು ಹೆಚ್1ಎನ್1 ಕಾಯಿಲೆಗೆ ಬಲಿಯಾಗಿದ್ದಾರೆ. ಇವರು ಸಂಘಟನೆಯ ಜಿಲ್ಲಾ ಸಮಿತಿಯ ಸದಸ್ಯರೂ ಆಗಿದ್ದರು. ಜ್ವರ ಪೀಡಿತರಾಗಿದ್ದ ರಾಜು ಅವರು ಸಿದ್ದಾಪುರ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು ಅವರ ಕಾಯಿಲೆಗೆ ನಿರ್ಧಿಷ್ಟ ಕಾರಣ ಹುಡುಕುವಲ್ಲಿ ವೈದ್ಯಾಧಿಕಾರಿಗಳು ವಿಫಲರಾಗಿದ್ದರು ಎಂದು ಆರೋಪಿಸಿದರು.

ಅಮ್ಮತ್ತಿಯ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾದಾಗ ಅವರಿಗೆ ಹೆಚ್1ಎನ್1 ಸೋಂಕು ತಗುಲಿರುವದು ದೃಢಪಟ್ಟಿದ್ದು, ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆ ವೇಳೆಗಾಗಲೇ ಪರಿಸ್ಥಿತಿ ಕೈ ಮೀರಿದ್ದರಿಂದ ಅವರು ಬದುಕುಳಿಯಲಿಲ್ಲ ಎಂದು ವಿಷಾದಿಸಿದರು.

ಸಿದ್ದಾಪುರ ವಿಭಾಗದಲ್ಲಿ ಕೂಲಿ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿದ್ದು, ಇಲ್ಲಿಗೆ ಕೇರಳ ಸೇರಿದಂತೆ ವಿವಿಧೆಡೆಗಳಿಂದ ವ್ಯಾಪಾರಿಗಳು ಹಾಗೂ ಇತರರು ಬಂದು ಹೋಗುತ್ತಿದ್ದಾರೆ. ಕೇರಳದಲ್ಲಿ ಈಗಾಗಲೇ ನಿಫಾ ವೈರಸ್ ಇರುವದು ದೃಢಪಟ್ಟಿದ್ದು, ಇಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆ ನಿಫಾ ಹಾಗೂ ಹೆಚ್1ಎನ್1 ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯವನ್ನು ಕೇವಲ ಸರ್ಕಾರಿ ಆಸ್ಪತ್ರೆಗೆ ಸೀಮಿತಗೊಳಿಸದೆ ಖಾಸಗಿ ಆಸ್ಪತ್ರೆಗಳಿಗೂ ವಿಸ್ತರಿಸಬೇಕು ಮತ್ತು ಅದರಲ್ಲಿರುವ ಕೆಲವು ನಿಬಂಧನೆಗಳನ್ನು ಸಡಿಲಗೊಳಿಸಬೇಕು ಎಂದು ಶಿವಪ್ಪ ಆಗ್ರಹಿಸಿದರು. ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಮಾಡಿಲ್ಲ ಎಂಬ ಕಾರಣಕ್ಕಾಗಿ ರಾಜು ಅವರ ಕುಟುಂಬದವರು ಆಯುಷ್ಮಾನ್ ಯೋಜನೆಯ ಸೌಲಭ್ಯದಿಂದ ವಂಚಿತರಾಗುವಂತಾಯಿತು ಎಂದು ಆರೋಪಿಸಿದರು.

ಸಂಘÀಟನೆಯ ಗೌರವಾಧ್ಯಕ್ಷ ಪಿ.ಎಂ. ರವಿ ಮಾತನಾಡಿ, ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಆದಷ್ಟು ಶೀಘ್ರ ಹೆಚ್1ಎನ್1 ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಹಮ್ಮಿಕೊಳ್ಳಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಪಿ.ಬಿ. ಜನಾರ್ಧನ ಉಪಸ್ಥಿತರಿದ್ದರು.