ಬೆಂಗಳೂರು, ಜು. 23: 2018 ರ ಮೇ 14 ರಂದು ಅಧಿಕಾರಕ್ಕೆ ಬಂದಿದ್ದ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿ.ಎಸ್.-ಕಾಂಗ್ರೆಸ್ ಮೈತ್ರಿಕೂಟ ಸರಕಾರ ಪತನಗೊಂಡಿತು. 14 ತಿಂಗಳ ಕಾಲ ಸರಕಾರ ನಡೆಸಿದ ಕುಮಾರಸ್ವಾಮಿ ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಯ ಅಂತಿಮ ದಿನವಾದ ಇಂದು ಸುದೀರ್ಘ ಚರ್ಚೆಯ ನಂತರ ಮತಕ್ಕೆ ಹಾಕಿದಾಗ ಫಲಿತಾಂಶದಲ್ಲಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ವಿಧಾನಸಭೆಯಲ್ಲಿ ಕಳೆದ ಗುರುವಾರ ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸಮತ ನಿರ್ಣಯದ ಮೇಲೆ ನಾಲ್ಕು ದಿನಗಳ ಕಾಲ ನಡೆದ ಸುದೀರ್ಘ ಚರ್ಚೆಗೆ ಉತ್ತರ ನೀಡಿದ ಕುಮಾರಸ್ವಾಮಿ, ಬಳಿಕ ವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕುವಂತೆ ಕೋರಿದರು. ಧ್ವನಿಮತದ ನಂತರ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಮತ ವಿಭಜನೆಗೆ ಒತ್ತಾಯಿಸಿದರು. ಬಳಿಕ ಕೋರಂ ಬೆಲ್ ಹೊಡೆದ ನಂತರ ಪರ ವಿರುದ್ಧ ಶಾಸಕರ ತಲೆ ಎಣಿಕೆ ನಡೆಯಿತು. ವಿಶ್ವಾಸಮತ ನಿರ್ಣಯದ ಪರವಾಗಿ 99 ಮತಗಳು, ವಿರುದ್ಧವಾಗಿ 105 ಮತಗಳು ದೊರೆಯಿತು. ಸದನದಲ್ಲಿ ಸ್ಪೀಕರ್ ಹೊರತುಪಡಿಸಿ ಒಟ್ಟು 204 ಮಂದಿ ಸದಸ್ಯರು ಹಾಜರಿದ್ದರು. ವಿಧಾನಸಭೆಯ ಒಟ್ಟು 224 ಶಾಸಕರ ಪೈಕಿ 15 ಮಂದಿ ಅತೃಪ್ತ ಶಾಸಕರು, ಇಬ್ಬರು ಪಕ್ಷೇತರರು, ಓರ್ವ ಬಿಎಸ್ಪಿ ಶಾಸಕ ಸೇರಿದಂತೆ ಸೇರಿದಂತೆ ಒಟ್ಟು 20 ಮಂದಿ ಶಾಸಕರು ಗೈರು ಹಾಜರಾಗಿದ್ದರು. ಈ ಮೂಲಕ ಕಳೆದ ಮೂರು ವಾರಗಳಿಂದ ನಡೆಯುತ್ತಿದ್ದ ಶಾಸಕರ ರಾಜೀನಾಮೆ, ಆಪರೇಷನ್ ಕಮಲ ಕಾರ್ಯಾಚರಣೆ, ರಾಜಕೀಯ ಅನಿಶ್ಚಿತತೆಗೆ ತೆರೆ ಬಿದ್ದಿದ್ದು, ಕುಮಾರಸ್ವಾಮಿ ನೇತೃತ್ವದ 14 ತಿಂಗಳ ಮೈತ್ರಿ ಸರ್ಕಾರ ಪತನಗೊಂಡಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾ ರೆಡ್ಡಿ, ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಅವರ ಪುತ್ರಿ ಸೌಮ್ಯ ರೆಡ್ಡಿ, ಉಪ ಸಭಾಧ್ಯಕ್ಷ ಎಂ. ಕೃಷ್ಣಾ ರೆಡ್ಡಿ ಸಹ ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಇದೀಗ ಹಾದಿ ಸುಗಮವಾಗಿದೆ.

ಕುಮಾರಸ್ವಾಮಿ ಮುಕ್ತ ಅನಿಸಿಕೆ

ರಾಜ್ಯದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಮಂಗಳವಾರ ನಿರ್ಣಾಯಕ ಘಟ್ಟ ತಲಪಿದ್ದು,

(ಮೊದಲ ಪುಟದಿಂದ) ನಾನು ಸಂತೋಷದಿಂದ ಸಿಎಂ ಸ್ಥಾನ ತ್ಯಜಿಸಲು ಸಿದ್ಧ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದರು.

ಇಂದು ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ, ವಿಶ್ವಾಸಮತವನ್ನು ವಿಳಂಬ ಮಾಡುವ ಉದ್ದೇಶ ನನಗೆ ಇಲ್ಲ. ಆದರೆ ನಾನು ಏಕೆ ರಾಜೀನಾಮೆ ನೀಡುತ್ತಿಲ್ಲ ಮತ್ತು ಸಿಎಂ ಕುರ್ಚಿಗೆ ಅಂಟಿಕೊಂಡಿದ್ದೇನೆ ಎಂಬದರ ಬಗ್ಗೆ ಚರ್ಚೆಯಾಗಬೇಕಿದೆ. ಈ ಸಂಬಂಧ ನಾನು ಸ್ಪೀಕರ್ ಮತ್ತು ರಾಜ್ಯದ ಜನತೆಯ ಕ್ಷಮೆಯಾಚಿಸುತ್ತೇನೆ ಎಂದರು.

ನಾನು ಯಾವದೇ ಕಾರಣಕ್ಕೂ ಓಡಿ ಹೋಗುವದಿಲ್ಲ. ವಿಶ್ವಾಸಮತ ಯಾಚನೆ ಮಾಡಿಯೇ ತೀರುತ್ತೇನೆ. ಯಾರಿಗೆ ಬಲ ಇದೆಯೋ ನೋಡೋಣ. ನಾನು ಕದ್ದು ಪಲಾಯನ ಮಾಡಲ್ಲ. ಸುಮ್ಮನೆ ನಮ್ಮನ್ನು ಕೆಣಕಬೇಡಿ. ತಪ್ಪಾಗಿದ್ದರೆ ತಿದ್ದಿಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

2018ರಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಬಯಸಿದ್ದೆ. ಆದರೆ ಕಾಂಗ್ರೆಸ್‍ನವರು ನೀವೇ ಸಿಎಂ ಆಗಬೇಕು ಎಂದು ಒತ್ತಾಯಿಸಿದರು. ಹೀಗಾಗಿ ನಾನು ಮುಖ್ಯಮಂತ್ರಿಯಾದೆ.

ನಾನು ರಾಜಕೀಯಕ್ಕೆ ಬಂದಿದ್ದೇ ಅನಿರೀಕ್ಷಿತ. ರಾಜಕೀಯಕ್ಕೆ ಬರಲು ನನಗೆ ಇಷ್ಟವಿರಲಿಲ್ಲ. ನಮ್ಮ ತಂದೆಗೂ ಇಷ್ಟವಿರಲಿಲ್ಲ. ರೇವಣ್ಣಗೆ ನಮ್ಮ ತಂದೆ ಆಶೀರ್ವಾದ ನೀಡಿದ್ದರು. ನಮ್ಮ ತಂದೆ ರೈತರಾಗಿ, ರೈತರಿಗಾಗಿ ದುಡಿದಿದ್ದಾರೆ. ಹೀಗಾಗಿ ಕೆಲವು ಪುಸ್ತಕದಲ್ಲಿಯೂ ಇದು ಪ್ರಸ್ತಾಪವಾಗಿದೆ. ಎಂದರು. ಆದರೆ 1996ರಲ್ಲಿ ಅನಿವಾರ್ಯ ಕಾರಣಗಳಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ನನ್ನ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ರೈತರ ಸಾಲಮನ್ನಾ ವಿಚಾರದಲ್ಲಿ ಬಿಜೆಪಿಯವರು ಅಪಪ್ರಚಾರ ಮಾಡಿದರು. ಆದರೆ ಈ ವಿಷಯದಲ್ಲಿ ಸ್ಪಷ್ಟವಾಗಿದ್ದೇನೆ. ಸಾಲಮನ್ನಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನೆರವು ನೀಡಲಾಗಿದೆ. ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲವನ್ನು ಮನ್ನಾ ಮಾಡಲು ಕ್ರಮ ಕೈಗೊಂಡಿದ್ದೇವೆ ಎಂದರು.

ಈ ಹಿಂದೆ ಬಿಜೆಪಿ ಜತೆ ಸೇರಿಕೊಂಡು ಸರ್ಕಾರ ರಚನೆ ಮಾಡಿದ ನಂತರ 20:20 ತಿಂಗಳು ನಂತರ ಅಧಿಕಾರ ಬಿಟ್ಟುಕೊಡಲು ನಾನು ಸಿದ್ದನಿದ್ದೆ. ಆದರೆ ಯಶವಂತ್ ಸಿನ್ಹಾ, ದೇವೇಗೌಡ ಹಾಗೂ ಕೆಲವು ನಾಯಕರು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಷರತ್ತು ವಿಧಿಸಿದರು. ಆಗ ಅಧಿಕಾರ ನೀಡದಿರುವ ನಿರ್ಧಾರವನ್ನು ಪಕ್ಷ ತೆಗೆದುಕೊಂಡಿತು. ಆದರೆ ನಾನು ವಚನ ಭ್ರಷ್ಟ ಆಗಿರಲಿಲ್ಲ. ಯಡಿಯೂರಪ್ಪನವರೇ ನಿಮ್ಮ ನಾಯಕರು, ಕಾರ್ಯಕರ್ತರಿಗೆ ಹೇಳಿ ನನ್ನನ್ನು ವಚನ ಭ್ರಷ್ಟ ಎನ್ನಬೇಡಿ. ನಾನು ಅಧಿಕಾರ ಹಸ್ತಾಂತರ ಮಾಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸಿದ್ದರಾಮಯ್ಯ ವಾಗ್ದಾಳಿ

ರಾಜ್ಯದಲ್ಲಿ ರಾಜಕಾರಣ ವ್ಯಾಪಾರವಾಗಿದೆ. ಬಿಜೆಪಿಯು ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆ. ಆದರೂ ನಮ್ಮ ಅತೃಪ್ತ ಶಾಸಕರಿಗೂ ತಮಗೂ ಸಂಬಂಧ ಇಲ್ಲ ಎಂದು ಹೇಳುತ್ತಿದ್ದಾರೆ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಗೊತ್ತಾಗಲ್ವೆ? ನೇರವಾಗಿ ನಾವೇ ಮಾಡಿದ್ದು ಎಂದು ಹೇಳಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸಮತಕ್ಕೂ ಮುನ್ನ ಸದನದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮ ಶಾಸಕರ ಬೆಂಬಲ ಇಲ್ಲದೆ ನೀವು ಸಿಎಂ ಆಗಲು ಸಾಧ್ಯವೇ? ಎಂದು ಬಿಎಸ್ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು. ಈ ಪಕ್ಷಾಂತರ ಪಿಡುಗಿನ ನಂತರ ರಚನೆಯಾಗುವ ಸರ್ಕಾರ ಸಂಪೂರ್ಣ ಆಡಳಿತ ನಡೆಸಲು ಸಾಧ್ಯವೇ ಇಲ್ಲ. ನಮಗೆ ಈಗ ಆಗಿರುವ ತಂತ್ರ ನಿಮಗೆ ತಿರುಗುಬಾಣವಾಗುತ್ತದೆ. ಯಡಿಯೂರಪ್ಪನವರೇ ನೀವು ಕೂಡ ಸರ್ಕಾರ ರಚಿಸಿದರೆ, ಒಂದು ವರ್ಷ ಕೂಡ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ ಈಗ ವ್ಯಾಪಾರಿ ರಾಜಕಾರಣ ಆಗುತ್ತಿದೆ. ವ್ಯಾಪಾರದಲ್ಲಿ ಎರಡು ರೀತಿ ಇದೆ. ಒಂದು ಹೋಲ್ ಸೇಲ್ ಮತ್ತು ರೀಟೇಲ್. ಆದರೆ ಇಲ್ಲಿ ಹೋಲ್ ಸೇಲ್ ರೀಟೇಲ್ ಮಾಡುತ್ತಿದ್ದರೆ ಪ್ರಜಾತಂತ್ರಕ್ಕೆ ನಾವು ನೀಡುತ್ತಿರುವ ಗೌರವ ಏನು. ಈ ರೀತಿಯ ಹೋಲ್‍ಸೇಲ್ ಮಾರಾಟ ನಾಚಿಕೆಗೇಡಿನ ಸಂಗತಿ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು ಈ ರೀತಿಯ ಪಕ್ಷಾಂತರ ಆಗುತ್ತಿದ್ದರೆ ಪ್ರಜಾಪ್ರಭುತ್ವದಡಿ ಆಯ್ಕೆಯಾಗಿರುವ ಯಾವದೇ ಸರ್ಕಾರ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.ತಮಿಳುನಾಡಿನಲ್ಲಿ ಶಾಸಕರು ಬೆಂಬಲ ವಾಪಸ್ ಪಡೆದ ನಂತರ ರಾಜ್ಯಪಾಲರಿಗೆ ಪತ್ರ ನೀಡಿದ ತಕ್ಷಣ ಅವರನ್ನು ಅನರ್ಹಗೊಳಿಸಲಾಯಿತು. ಸ್ಪೀಕರ್‍ಗೆ ಆ ಪವರ್ ಇದೆ. ಈ ವಿಷಯ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆಯಾಯಿತು. ಪಕ್ಷಾಂತರ ಎಂಬ ರೋಗಕ್ಕೆ ತಕ್ಷಣ ಪರಿಹಾರ ಕಂಡುಹಿಡಿಯಬೇಕಾಗಿದೆ ಎಂದರು.

ಅನರ್ಹ ಮಾಡುವ ಅಧಿಕಾರ ಸ್ಪೀಕರ್‍ಗೆ ಇದೆ. ಈ ವಿಷಯದ ಕುರಿತಾಗಿಯೇ ನಾನು ಕ್ರಿಯಾಲೋಪ ಎತ್ತಿದ್ದು. ಈ ಕುರಿತು ಸ್ಪೀಕರ್ ತಮ್ಮ ವಿವೇಚನೆಯನ್ನು ನ್ಯಾಯಯುತವಾಗಿ ಬಳಸಿದ್ದಾರೆ ಎಂದರು.

ವಿಧಾನಸಭೆ ಚುನಾವಣೆ ನಂತರ ಯಾವದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲಿಲ್ಲ. ಆದರೂ ಬಿಜೆಪಿ ದೊಡ್ಡ ಪಕ್ಷ ಎಂಬ ಕಾರಣಕ್ಕೆ ಯಡಿಯೂರಪ್ಪನವರಿಗೆ ಮೊದಲು ಸರ್ಕಾರ ರಚಿಸಲು ಅವಕಾಶ ನೀಡಲಾಗಿತ್ತು. ಆದರೆ ಅವರು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರು. ನಂತರ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚನೆಯಾಯಿತು ಎಂದು ಸಿದ್ದರಾಮಯ್ಯ ಹೇಳಿದರು.

ಎರಡು ದಿನ ನಿಷೇಧಾಜ್ಞೆ

ಪ್ರಸಕ್ತ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ನಗರದಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ಸಂಜೆ 6 ಗಂಟೆಯಿಂದ ಮುಂದಿನ 48 ಗಂಟೆಗಳ ಕಾಲ ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದರು.

ಅತೃಪ್ತ ಶಾಸಕರ ಅನರ್ಹತೆ

ತೀರ್ಪು ಕಾಯ್ದಿರಿಸಿದ ಸ್ಪೀಕರ್

ವಿಧಾನಸಭೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 15 ಅತೃಪ್ತ ಶಾಸಕರ ಸದಸ್ಯತ್ವ ಅನರ್ಹತೆ ವಿಚಾರಣೆ ತೀರ್ಪನ್ನು ಸ್ಪೀಕರ್ ರಮೇಶ್ ಕುಮಾರ್ ಕಾಯ್ದಿರಿಸಿದ್ದಾರೆ.

ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲ್ಲಿಸಿದ್ದು ಸೇರಿದಂತೆ 8 ಅರ್ಜಿಗಳ ವಿಚಾರಣೆಯನ್ನು ಸ್ಪೀಕರ್ ರಮೇಶ್ ಕುಮಾರ್ ಮಂಗಳವಾರ ಕೈಗೆತ್ತಿಕೊಂಡರು.

ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ಶಾಸಕರಿಗೆ ನೋಟಿಸ್ ನೀಡಿದ್ದು, ನಾಲ್ಕು ವಾರಗಳ ಕಾಲಾವಕಾಶ ನೀಡುವಂತೆ ಶಾಸಕರು ಸ್ಪೀಕರ್‍ಗೆ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪರವಾಗಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾದ ಮಂಡಿಸಿ, ಶಾಸಕರ ಪರವಾಗಿ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ತಂಡದ ಆರು ವಕೀಲರು ಪ್ರತಿವಾದ ಮಾಡಿದರು.

ವಿಚಾರಣೆ ವೇಳೆ ಶಾಸಕರು ರಾಜೀನಾಮೆ ನೀಡಿದ ಬಳಿಕ ಅವರ ಮೇಲೆ ಒತ್ತಡ ಹೇರಲು ವಿಪ್ ಜಾರಿಮಾಡಲಾಗಿದೆ. ಶಾಸಕರು ಸ್ವಯಂಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿರುವುದರಿಂದ ಅವರಿಗೆ ಅನರ್ಹತೆ ಅನ್ವಯ ಆಗುವುದಿಲ್ಲ. ಶಾಸಕರು ಸ್ಪೀಕರ್ ಕಚೇರಿಗೆ ವಿಚಾರಣೆಗೆ ಆಗಮಿಸಲು ಕಾಲಾವಕಾಶ ನೀಡಬೇಕು ಎಂದು ಶಾಸಕರ ಪರ ವಕೀಲರು ಪ್ರತಿವಾದ ಮಾಡಿದರು.

ವಾದ ಮಂಡಿಸಿದ ವಿ.ಎಸ್.ಉಗ್ರಪ್ಪ, ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರಿಗೆ ಕಳೆದ ಫೆಬ್ರವರಿಯಲ್ಲಿ ವಿಪ್ ನೀಡಲಾಗಿದೆ. 11 ಜನ ಶಾಸಕರಿಗೆ ರಾಜೀನಾಮೆ ಸಲ್ಲಿಸುವ ಮೊದಲೇ ವಿಪ್ ನೀಡಿದ್ದು, ವಿಪ್ ನಿಂದ ಬಚಾವ್ ಆಗಲು ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಅವರ ಶಾಸಕತ್ವವನ್ನು ಅನರ್ಹಗೊಳಿಸಬೇಕೆಂದು ಮನವಿ ಮಾಡಿದರು.

ಸತತ ಎರಡು ಗಂಟೆಗಳ ಕಾಲ ನಡೆದ ವಾದ ಪ್ರತಿವಾದವನ್ನು ಆಲಿಸಿದ ಸ್ಪೀಕರ್ ರಮೇಶ್ ಕುಮಾರ್, ತಮ್ಮ ಆದೇಶ ಕಾಯ್ದಿರಿಸಿದರು.