ಸೋಮವಾರಪೇಟೆ,ಜು.23: ಕೊಡಗಿನೊಳಗೆ ಅಕ್ರಮ ನಾಡ ಪಿಸ್ತೂಲು ಮಾರಾಟದ ಜಾಲವನ್ನು ವಿಸ್ತರಿಸಲು ಮುಂದಾಗಿದ್ದ ಅಕ್ರಮ ಮಾರಾಟಗಾರನನ್ನು ಖಾಕಿ ಪಡೆ, ತನ್ನ ಖೆಡ್ಡಾದೊಳಗೆ ಬೀಳಿಸಿದ್ದು, ಪ್ರಕರಣದ ಕಿಂಗ್‍ಪಿನ್‍ನನ್ನು ಬಂಧಿಸಿದ್ದಾರೆ.ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ನೇತೃತ್ವದಲ್ಲಿ ನಡೆದ ಯಶಸ್ವಿ ಕಾರ್ಯಾಚರಣೆಯಲ್ಲಿ ನಾಡ ಪಿಸ್ತೂಲು, ಸಜೀವ ಗುಂಡಿನೊಂದಿಗೆ ಉತ್ತರ ಪ್ರದೇಶದ ಸುಮಿತ್ ಚೌದರಿ ಎಂಬಾತನನ್ನು ಇಂದು ಬಂಧಿಸಿ, ಕಾನೂನು ಕ್ರಮಕ್ಕೆ ಒಳಪಡಿಸಿದ್ದಾರೆ.ಉತ್ತರ ಪ್ರದೇಶದ ಬನಾರಸ್ ಜಿಲ್ಲೆ, ಗಾಝೀಪುರ್ ತಾಲೂಕು, ಜಾತ್ಪುರ್ ಗ್ರಾಮ ನಿವಾಸಿ ಗೋಪಾಲ್ ಚೌದರಿ ಎಂಬವರ ಪುತ್ರನಾಗಿರುವ ಆರೋಪಿ ಸುಮಿತ್, ಕಳೆದ 6 ತಿಂಗಳ ಹಿಂದೆ ಸೋಮವಾರಪೇಟೆ ತಾಲೂಕಿನ ಗಡಿಗ್ರಾಮವಾದ ಕೊಡ್ಲಿಪೇಟೆಗೆ ಆಗಮಿಸಿ, ವಸೀಂ ಎಂಬವರ ಬಳಿ ಕೆಲಸಕ್ಕಿದ್ದ.ಹೇಮಾವತಿ ನದಿಯಲ್ಲಿ ಮರಳು ತೆಗೆಯುವ ಕೆಲಸ ಮಾಡುತ್ತಿದ್ದ ಸುಮಿತ್, ಅಕ್ರಮವಾಗಿ ನಾಡ ಪಿಸ್ತೂಲುಗಳನ್ನು ಮಾರಾಟ ಮಾಡುವ ಕಾನೂನು ಬಾಹಿರ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ.ಸುಮಾರು 40 ದಿನಗಳ ಕಾಲ ಮರಳು ತೆಗೆಯುವ ಕೆಲಸ
ಮಾಡಿ ನಂತರ
(ಮೊದಲ ಪುಟದಿಂದ) ಉತ್ತರ ಪ್ರದೇಶಕ್ಕೆ ಹಿಂತೆರಳಿದ್ದ ಆರೋಪಿ, ಅಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದ್ದ ಅಕ್ರಮ ಪಿಸ್ತೂಲನ್ನು ಇಲ್ಲಿಗೆ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಖೆಡ್ಡಾಕ್ಕೆ ಕೆಡವಲು ರಣತಂತ್ರ: ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡುವ ಜಾಲವನ್ನು ಪತ್ತೆ ಹಚ್ಚಲು ಪೊಲೀಸರು ರಣತಂತ್ರ ರೂಪಿಸಿದ್ದು, ಅದರಂತೆ ಮಾರುವೇಶದಲ್ಲಿ ಖರೀದಿದಾರರಂತೆ ತೆರಳಿ ಆರೋಪಿಯನ್ನು ಖೆಡ್ಡಾಕ್ಕೆ ಕೆಡವಿದ್ದಾರೆ ಎನ್ನಲಾಗಿದೆ.
ಸಿನಿಮೀಯ ರೀತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಮಿತ್ ಚೌದರಿ ಪೊಲೀಸರ ಅತಿಥಿಯಾಗಿದ್ದು, ಆರೋಪಿಯನ್ನು ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸಿದ್ದಾರೆ. ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಆಗಮಿಸಿದ ಈತ ಇಂತಹ ಅಕ್ರಮದಲ್ಲಿ ಭಾಗಿಯಾಗಿದ್ದು, ಈವರೆಗೆ ಎಷ್ಟು ಮಂದಿಗೆ ಅಕ್ರಮ ಪಿಸ್ತೂಲ್ ನೀಡಿದ್ದಾನೆ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರ ಮಾರ್ಗದರ್ಶನ, ಡಿವೈಎಸ್‍ಪಿ ಮುರುಳೀಧರ್ ನೇತೃತ್ವದಲ್ಲಿ, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ, ವೃತ್ತ ನಿರೀಕ್ಷಕರ ಕಚೇರಿ ಸಿಬ್ಬಂದಿಗಳಾದ ಅನಂತ್‍ಕುಮಾರ್, ಮಂಜುನಾಥ್, ಕುಮಾರ, ಸ್ವಾಮಿ ಅವರುಗಳ ತಂಡ ಪ್ರಕರಣವನ್ನು ಭೇದಿಸಿದ್ದು, ಯಶಸ್ವಿ ಕಾರ್ಯಾಚರಣೆಯ ಮೂಲಕ ಆರೋಪಿಯನ್ನು ಬಂಧಿಸಲಾಗಿದೆ.
ಅಕ್ರಮ ಪಿಸ್ತೂಲು ಮಾರಾಟದ ಜಾಲವನ್ನು ಭೇದಿಸಿರುವ ಪೊಲೀಸರ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ. ಸುಮನ್ ಅವರು ಶ್ಲಾಘಿಸಿದ್ದಾರೆ.
ಅಭಿನಂದನಾರ್ಹ
ಹೊರ ರಾಜ್ಯದ ವ್ಯಕ್ತಿಯೋರ್ವ ಕೊಡಗಿನಲ್ಲಿ ಅಕ್ರಮ ನಾಡ ಪಿಸ್ತೂಲು ಮಾರಾಟದ ಜಾಲವನ್ನು ವಿಸ್ತರಿಸುತ್ತಿರುವ ಬಗ್ಗೆ ‘ಶಕ್ತಿ’ ವರದಿ ಮಾಡಿತ್ತು. ಹೊರ ರಾಜ್ಯದ ವ್ಯಕ್ತಿಯನ್ನು ಗುರುತಿಸಿ, ‘ರೆಡ್‍ಹ್ಯಾಂಡ್’ಆಗಿ ಬಂಧಿಸುವ ಕಾರ್ಯ ಸುಲಭವಲ್ಲದಿದ್ದರೂ ಕೊಡಗಿನ ಪೊಲೀಸರು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿರುವದು ಅಭಿನಂದನಾರ್ಹವೇ ಆಗಿದೆ. ಇಂತಹ ಅಕ್ರಮಗಳು ಮುಂದುವರೆಯದಂತೆ ಸಮಾಜವೂ ಜಾಗೃತವಿರಬೇಕಿದೆ. ಆರಂಭದಲ್ಲಿಯೇ ಅಕ್ರಮದ ಜಾಲಕ್ಕೆ ತಡೆಯೊಡ್ಡಿರುವ ಪೊಲೀಸರ ಕಾರ್ಯಕ್ಕೆ ಹ್ಯಾಟ್ಸ್ ಅಪ್!