ಗೋಣಿಕೊಪ್ಪಲು, ಜು. 23: ಕೊಡಗು ಒಳಗೊಂಡಂತೆ ವಿವಿಧ ಜಿಲ್ಲೆಯ ಕೃಷಿಕರು, ರೈತರು, ಸ್ವಯಂ ಸೇವಾ ಸಂಘಗಳಿಗೆ, ಗುಡಿ ಕೈಗಾರಿಕೆ ಆಸಕ್ತರಿಗೆ ಇತ್ಯಾದಿ ಉಚಿತ ತರಬೇತಿಯೊಂದಿಗೆ ಜನಾನುರಾಗಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಇನ್ನು ಮುಂದೆ ಕ್ಷಣ ಕ್ಷಣದ (ಗಂಟೆಯ ಲೆಕ್ಕದಲ್ಲಿ) ಜಿಲ್ಲೆಯ ಮಳೆಯ ಪ್ರಮಾಣವನ್ನು ಕೃಷಿಕರಿಗೆ ಒದಗಿಸುವ ಮೂಲಕ ಪೂರಕ ಕೃಷಿ ಚಟುವಟಿಕೆ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನೆರವಾಗಲು ಸಜ್ಜಾಗುತ್ತಿದೆ. ನವದೆಹಲಿಯ ಭಾರತೀಯ ಹವಾಮಾನ ಇಲಾಖೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮೂಲಕ ರೈತರಿಗೆ ನೆರವಾಗಲು ವಿಜ್ಞಾನಿ ಸಹನಾ ಹೆಗ್ಡೆ ಅವರನ್ನು ಮೇ.ತಿಂಗಳಿನಿಂದಲೇ ನಿಯೋಜಿಸಿದೆ.
ಕರ್ನಾಟಕದಲ್ಲಿ ಒಟ್ಟು 8 ವಿಜ್ಞಾನಿಗಳನ್ನು ನೇಮಕ ಮಾಡಲಾಗಿದ್ದು ಗೋಣಿಕೊಪ್ಪಲು ಒಳಗೊಂಡಂತೆ ಬೆಂಗಳೂರಿಗೆ ನಾಲ್ವರು, ಮೂಡಿಗೆರೆ, ಮಂಡ್ಯ
(ಮೊದಲ ಪುಟದಿಂದ) ಹಾಗೂ ರಾಮನಗರಕ್ಕೆ ತಲಾ ಒಬ್ಬರನ್ನು ಸ್ಥಳೀಯ ಹವಾಗುಣಗಳನ್ನು ಅಧ್ಯಯನ ಮಾಡಿ, ಮಳೆಯ ಪ್ರಮಾಣಕ್ಕೆ ಅನುಗುಣವಾದ ಪೂರಕ ಕೃಷಿ ಚಟುವಟಿಕೆ ಹಮ್ಮಿಕೊಳ್ಳಲು ಭಾರತೀಯ ಹವಾಮಾನ ಇಲಾಖೆ ನೇಮಕ ಮಾಡಿದೆ.
ಕೊಡಗು ಇತ್ತೀಚೆಗಿನ ವರ್ಷಗಳಲ್ಲಿ ಜಾಗತಿಕ ತಾಪಮಾನ, ಹವಾಮಾನ ವೈಪರಿತ್ಯ, ಜಲಪ್ರಳಯ, ಮಳೆಯ ಋತುಮಾನದಲ್ಲಿ ಬದಲಾವಣೆಯಿಂದಾಗಿ ಇಲ್ಲಿನ ರೈತಾಪಿ ವರ್ಗ ಕೃಷಿ ಚಟುವಟಿಕೆ ಕೈಗೊಳ್ಳಲು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದೀಗ ರೈತರಿಗೆ ಆ ಪ್ರದೇಶದಲ್ಲಿ ಬಿದ್ದ ಮಳೆಯ ಪ್ರಮಾಣಕ್ಕಾಗಿ ಅನುಗುಣವಾಗಿ ಮಾಡಬಹುದಾದ ಕೃಷಿ, ಬಳಸಬೇಕಾದ ಕೀಟನಾಶಕ, ಗೊಬ್ಬರ ಇತ್ಯಾದಿಗಳಿಗೆ ಪೂರಕವಾಗಿ ಇದೀಗ ನಿಯೋಜಿತಗೊಂಡಿರುವ ಸಹನಾ ಹೆಗ್ಡೆ ಸ್ಪಂದಿಸಲಿದ್ದಾರೆ.
ಇಂದು ‘ಶಕ್ತಿ’ ಪರವಾಗಿ ಅವರಲ್ಲಿ ಮಾಹಿತಿ ಬಯಸಿದಾಗ, ಮುಂದಿನ ಎರಡು ತಿಂಗಳ ಅವಧಿಯಲ್ಲಿ ಕೊಡಗಿನ ಸಮಗ್ರ ಹವಾಗುಣ ಅಧ್ಯಯನಕ್ಕಾಗಿ ಅತ್ಯಾಧುನಿಕ ಮಳೆ ಮಾಪಕ (ಅತ್ತೂರು ಫಾರಂನಲ್ಲಿ ಅಳವಡಿಕೆ), ಆರ್ದತೆ ಉಷ್ಣಾಂಶ, ಗಾಳಿಯ ವೇಗ ಮತ್ತು ದಿಕ್ಕು, ಮಳೆಯ ಮೋಡದ ಬಗ್ಗೆ ಅಧ್ಯಯನ ಮಾಡಲು ಅನುಗುಣವಾಗಿ ಕೆವಿಕೆಯಲ್ಲಿ ಪೂರಕ ಉಪಕರಣಗಳನ್ನು ಅಳವಡಿಸಲಾಗುವದು ಎಂದು ವಿವರಿಸಿದರು. ಕೊಡಗು ಜಿಲ್ಲೆಯ ಇತ್ಯಾದಿ ಭಾಗಗಳಲ್ಲಿ ಅಳವಡಿಕೆಯಾಗಿರುವ ಮಳೆ ಮಾಪಕದ ವಿವರಗಳನ್ನು ಹೊಂದಿಕೊಳ್ಳುವ ಮೂಲಕವೂ ರೈತರಿಗೆ ಸಮರ್ಪಕ ಮಾಹಿತಿ ನೀಡುವ ಉದ್ದೇಶವಿದೆ ಎಂದು ಹೇಳಿದರು.
ಹವಾಮಾನ ಮುನ್ಸೂಚನೆಯನ್ನು ಇನ್ನು ಗೋಣಿಕೊಪ್ಪಲಿನಿಂದಲೇ ಹೊಂದಬಹುದಾಗಿದೆ. ಭಾರತೀಯ ಹವಾಮಾನ ಇಲಾಖೆ ಕೊಡಗು ಜಿಲ್ಲೆಯ ಮೂರು ತಾಲೂಕಿನ ಹವಾಗುಣದ ಬಗ್ಗೆ ಮಾತ್ರ ಮಾಹಿತಿ ನೀಡುತ್ತಿದೆ. ಇನ್ನೂ ಮುಂದೆ ಜಿಲ್ಲೆಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುವ ಮಳೆಯ ಪ್ರಮಾಣವನ್ನು ಅಧ್ಯಯನ ಮಾಡುವ ಮೂಲಕ ಹಾಗೂ ಗಂಟೆ ಗಂಟೆಗೂ ಮೊಬೈಲ್ ಫೆÇೀನ್, ಅಂತರ್ಜಾಲದ ಮೂಲಕ ಮಳೆಯ ಪ್ರಮಾಣ ತಿಳಿದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ರೆಡ್ ಅಲರ್ಟ್ ಯಾಕೆ?
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಆಧರಿಸಿ ಕೊಡಗು ಜಿಲ್ಲೆಗೆ ರೆಡ್ ಅಲರ್ಟ್, ಆರೆಂಜ್ ಅಲರ್ಟ್ ಘೋಷಣೆ ಮಾಡಿರುವದು ಯಾಕಾಗಿ? ಇಲ್ಲಿ ಮಳೆಯ ತೀವ್ರತೆ ಕಾಣಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಹನಾ ಅವರು, ಕಳೆದ ಬಾರಿ ಜಲಪ್ರಳಯದಿಂದಾಗಿ ಕೊಡಗು ಜಿಲ್ಲೆಯ ಹಲವೆಡೆ ಭೂಕುಸಿತ ಉಂಟಾಗಿದೆ. ಈ ಬಾರಿ ಅದೇ ಸ್ಥಳದಲ್ಲಿ ಸಣ್ಣ ಮಳೆಗೂ ಭೂಕುಸಿತದ ಸಾಧ್ಯತೆ ಇರುವದರಿಂದ, ಇಲ್ಲಿನ ಜನತೆ ಅಪಾಯಕ್ಕೆ ಸಿಲುಕಬಾರದೆಂಬ ಸದುದ್ದೇಶ ದಿಂದಾಗಿ ಭಾರತೀಯ ಹವಾಮಾನ ಇಲಾಖೆಯ ನಿರ್ದೇಶನದೊಂದಿಗೆ ಘೋಷಣೆ ಮಾಡಲಾಗಿದೆ ಎಂದು ಉತ್ತರಿಸಿದರು.
‘ರಿಕ್ಟರ್ ಮಾಪಕ’ ಅಳವಡಿಕೆ
ದಕ್ಷಿಣ ಕೊಡಗಿನ ಹಲವೆಡೆ ಇತ್ತೀಚೆಗೆ ಗೋಣಿಕೊಪ್ಪಲು, ಶ್ರೀಮಂಗಲ ಸೇರಿದಂತೆ ಹಲವೆಡೆ ಸಣ್ಣ ಪ್ರಮಾಣದ ಭೂಕಂಪನದ ಅನುಭವ ಹೆಚ್ಚಿನ ಜನತೆಗೆ ಆಗಿದ್ದು, ಈ ಬಗ್ಗೆ ಯಾವದೇ ಪ್ರಮಾಣ, ತೀವ್ರತೆ ‘ರಿಕ್ಟರ್ ಮಾಪಕ’ದಲ್ಲಿ ದಾಖಲಾಗಿಲ್ಲ ಎಂದು ಜಿಲ್ಲೆಯ ಅಧಿಕಾರಿ ವರ್ಗ ಮಾಹಿತಿ ನೀಡಿದ್ದರು. ಆದರೆ, ಮುಂದಿನ ದಿನಗಳಲ್ಲಿ ಈ ಬಗ್ಗೆ ನಿಖರ ಮಾಹಿತಿಗಾಗಿ ಗೋಣಿಕೊಪ್ಪಲು ಕೆವಿಕೆಯಲ್ಲಿ ರಿಕ್ಟರ್ ಮಾಪನವನ್ನು ಅಳವಡಿಸುವ ಉದ್ಧೇಶವಿದೆ ಎಂದು ವಿಷಯತಜ್ಞ ಪ್ರಭಾಕರ್ ಇದೇ ಸಂದರ್ಭ ‘ಶಕ್ತಿ’ಗೆ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ರೈತರಿಗೆ ಸರಿಯಾದ ಮಾಹಿತಿ ನೀಡುವ ಮೂಲಕ, ಅವರು ಮುಂದಾಗುವ ನಷ್ಟದಿಂದ ಪಾರಾಗುವ ನಿಟ್ಟಿನಲ್ಲಿ ಹಲವು ಕಾರ್ಯಯೋಜನೆಯನ್ನು ಭಾರತೀಯ ಹವಾಮಾನ ಇಲಾಖೆ ಮೂಲಕ ಇನ್ನು ಮುಂದೆ ನಿರಂತರವಾಗಿ ಹಮ್ಮಿಕೊಳ್ಳಲಾಗು ವದು. ಉಷ್ಣಾಂಶ, ಆರ್ದತೆ, ಗಾಳಿ, ಮೋಡ ಕವಿದ ವಾತಾವರಣ, ಮಳೆಯ ಪ್ರಮಾಣ ಆಧರಿಸಿ ಇನ್ನು ರೈತರಿಗೆ ಸಮಗ್ರ ಮಾಹಿತಿ ಕೊಡಲು ಉದ್ದೇಶಿಸಲಾಗಿದ್ದು ಆಧುನಿಕ ಉಪಕರಣಗಳ ಅಳವಡಿಕೆ ಆದ ನಂತರ (ಎರಡು ತಿಂಗಳ ನಂತರ) ರೈತರು ತಮ್ಮನ್ನು ಸಂಪರ್ಕಿಸ ಬಹುದಾಗಿದೆ ಎಂದು ಸಹನಾ ಹೆಗ್ಡೆ ತಿಳಿಸಿದ್ದಾರೆ.
ಗೋಣಿಕೊಪ್ಪಲಿಗೆ ಮಳೆ
ಗೋಣಿಕೊಪ್ಪಲಿಗೆ ಇಂದಿನವರೆಗೆ ಕೇವಲ 26 ಇಂಚು ಮಳೆಯಾಗಿದ್ದು, ಕಳೆದ ವರ್ಷಕ್ಕಿಂತಲೂ ಸುಮಾರು 37 ಇಂಚು ಮಳೆಕೊರತೆ ಕಂಡು ಬಂದಿದೆ. ಗೋಣಿಕೊಪ್ಪಲಿಗೆ ಸರಾಸರಿ ವಾರ್ಷಿಕ ಮಳೆ 60 ಇಂಚು. ಕಳೆದ ವರ್ಷ ಇದೇ ಅವಧಿಗೆ 63.60 ಇಂಚು ಮಳೆ ದಾಖಲಾಗಿತ್ತು. ಈ ಬಾರಿ ಕೇವಲ 26 ಇಂಚು ಮಳೆ ದಾಖಲಾಗಿದ್ದು ಜುಲೈ. 6,7,13 ಹಾಗೂ 23 ರಂದು ಮಾತ್ರ ಗೋಣಿಕೊಪ್ಪಲಿನ ಮೇಲೆ 1 ಇಂಚಿಗೂ ಅಧಿಕ ಮಳೆಯಾಗಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
-ವರದಿ: ಟಿ.ಎಲ್. ಶ್ರೀನಿವಾಸ್