ಮಡಿಕೇರಿ, ಜು. 21: ಕುಶಾಲನಗರ-ಸಂಪಾಜೆ ನಡುವೆ ಮಂಗಳೂರು ರಸ್ತೆಯ ಅಲ್ಲಲ್ಲಿ ಪ್ರಸಕ್ತ ಮಳೆಯಿಂದ ಯಾವದೇ ಅಪಾಯ ಎದುರಾಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಪ್ಪ ತಿಳಿಸಿದ್ದಾರೆ.ಮಂಗಳೂರು ರಸ್ತೆಯ ಕಾಟಕೇರಿ ಬಳಿ ಕಳೆದ ಮುಂಗಾರುವಿನಲ್ಲಿ ಕುಸಿತ ಉಂಟಾಗಿ ಸಂಚಾರಕ್ಕೆ ಸುಮಾರು ಮೂರು ತಿಂಗಳು ತೊಂದರೆಯಾಗಿದ್ದ ಸ್ಥಳಗಳಲ್ಲಿ ಕೈಗೊಂಡಿರುವ ತಾತ್ಕಾಲಿಕ ಕಾಮಗಾರಿಯ ಪರಿಶೀಲನೆ ವೇಳೆ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿದರು.ಕುಶಾಲನಗರ-ಸಂಪಾಜೆ ನಡುವೆ ಕಳೆದ ವರ್ಷ ಸುಮಾರು 47 ಕಡೆಗಳಲ್ಲಿ ಅಪಾಯ ಸಂಭವಿಸಿದ್ದಾಗಿ ಬೊಟ್ಟು ಮಾಡಿದ ಅವರು, ಅಂತಹ ಕಡೆಗಳಲ್ಲಿ ಈಗಾಗಲೇ ತಾತ್ಕಾಲಿಕ ದುರಸ್ತಿಯೊಂದಿಗೆ ಬಸ್ ಸಹಿತ ಇತರ ಲಘು ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದರು.ಅಲ್ಲದೆ ಮದೆನಾಡುವಿನ ಕರ್ತೋಜಿ ಬಳಿ ಹಾನಿಗೀಡಾಗಿದ್ದ ರಸ್ತೆಯ ದುರಸ್ತಿಯೊಂದಿಗೆ ರೂ. 4.50 ಕೋಟಿ ವೆಚ್ಚದಲ್ಲಿ ಶಾಶ್ವತ ಪುನರ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಸಹಾಯಕ ಅಭಿಯಂತರ ರಮೇಶ್ ಹಾಜರಿದ್ದರು.