ಮಡಿಕೇರಿ ಹಳೆಯ ಖಾಸಗಿ ಬಸ್ ನಿಲ್ದಾಣದ ತಡೆಗೋಡೆಯ ಬಗ್ಗೆ ಇದು ನನ್ನ ಮೂರನೇ ಬರಹ. ಕಳೆದ ವರ್ಷ ನಡೆದ ಅನಾಹುತದ ಬಳಿಕ ಈ ಬಾರಿ ಉಂಟಾಗಬಹುದಾದ ಸಮಸ್ಯೆ ಕುರಿತು ಸಂಬಂಧಿಸಿದವರು ಗಮನ ಹರಿಸಬೇಕಾದಷ್ಟು ವಿವರಣೆಗಳನ್ನು ನೀಡಿದ್ದೆ. ಪ್ರಶ್ನಿಸಬೇಕಾದ ಜನರ ಮೌನ ಹಾಗೂ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರಾಸಕ್ತಿ ಮತ್ತೊಮ್ಮೆ ಬರೆಯುವಂತೆ ಮಾಡಿದೆ.ಕೇವಲ ಮೂರು - ನಾಲ್ಕು ದಿನಗಳ ಮಳೆಗೆ ಇಂದು ಬಲಬದಿಯ ಮೇಲ್ಭಾಗದಿಂದ ಮಣ್ಣು ಕುಸಿದು ನೆಲವನ್ನು ಆಕ್ರಮಿಸಿದೆ. ಮುಂದಿನ ಮಳೆಗಳಲ್ಲಿ ಕೋಟೆ ಹಿಂಬದಿಯ ತಡೆಗೋಡೆ ಸಹಿತ ಕುಸಿಯುವ ಸಾಧ್ಯತೆ ಇಲ್ಲದಿಲ್ಲ.ಒಂದು ವರ್ಷದ ಬೆಳವಣಿಗೆಗಳನ್ನು ಗಮನಿಸಿ:ಹಿಂದಿನ ಜಿಲ್ಲಾಧಿಕಾರಿ ಇಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸುಮಾರು 1.2 ಕೋಟಿ ರೂಪಾಯಿ ಮೀಸಲಿಟ್ಟರು. ಈ ಕಾಮಗಾರಿಗೆ ಯಾರು ಯೋಜನೆ ರೂಪಿಸಿದ್ದರೋ, ಯಾರು ಅಂದಾಜು ಪಟ್ಟಿ ತಯಾರಿಸಿದ್ದರೋ ಗೊತ್ತಿಲ್ಲ. ದಿಢೀರೆಂದು ಗುತ್ತಿಗೆದಾರರೊಬ್ಬರು ಜೆ.ಸಿ.ಬಿ. ಕೆಲಸ ಆರಂಭಿಸಿಬಿಟ್ಟರು. ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ಮಾಡಿದಾಗ ತೆರಿಗೆ ಎಲ್ಲಾ ಕಳೆದು 1.04 ಕೋಟಿ ರೂಪಾಯಿಯಲ್ಲಿ ಕೆಲಸ ಮಾಡುತ್ತಿರುವದಾಗಿ ಮಾಹಿತಿ ಲಭ್ಯವಾಯಿತು.ಬಸ್ ನಿಲ್ದಾಣದ ನೆಲ ಮಟ್ಟದಿಂದ ಅದರ ಎತ್ತರ ಇರುವದು 90 ಅಡಿ, ಅಗಲವಿರುವದು 100 ಅಡಿ. ಆದರೆ, ಗುತ್ತಿಗೆದಾರ ತನಗೆ ಕೊಡುವ ಹಣದಲ್ಲಿ ತಡೆಗೋಡೆ ನಿರ್ಮಿಸಲು ಸಾಧ್ಯವಾಗುವದು ಕೇವಲ 9ರಿಂದ 10 ಅಡಿ ಎತ್ತರ ಮಾತ್ರ ಎಂದರು. ಉಳಿದ 80 ಅಡಿ ಎತ್ತರದ ತಡೆಗೋಡೆ ನಿರ್ಮಾಣ ಹೇಗೆ ಸಾಧ್ಯ? ಉತ್ತರ ಯಾರಲ್ಲಿಯೂ ಇರಲಿಲ್ಲ.ಅಂದಿನ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ವಿವರಿಸಿದೆ. ಆಗಿನ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಹಿರಿಯ ಸದಸ್ಯ ನಂದಕುಮಾರ್ ಇವರುಗಳನ್ನು ಕರೆಯಿಸಿ ಚರ್ಚಿಸಿದರು. ಬೇರೆ ಯಾವದಾದರೂ ದಾರಿ ಇದೆಯೇ ಎಂದು ಪ್ರಯತ್ನಿಸುವ ಜವಾಬ್ದಾರಿಯನ್ನು ನನಗೆ ನೀಡಿದ್ದರು.
ಕೊಡಗಿನಲ್ಲಿಯೇ ಸೇವೆ ಸಲ್ಲಿಸಿ ನಿವೃತ್ತರಾದ ಒಳ್ಳೆಯ ಕಾರ್ಯಪಾಲಕ ಇಂಜಿನಿಯರ್ ಸತ್ಯನಾರಾಯಣ ರಾವ್ ಅವರನ್ನು ಸಂಪರ್ಕಿಸಿ ಹಲವು ಸಭೆಗಳನ್ನು ನಡೆಸಲಾಯಿತು. ಅವರ ಸಲಹೆಯಂತೆ ಬೆಂಗಳೂರಿನ ಬಿ.ಎಂ.ಸ್. ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ನಾಗರಾಜ್ ಅವರ ನೆರವು ಪಡೆಯಲಾಯಿತು. ನಾಗರಾಜ್ ಅವರು ಮಣ್ಣು ಪರೀಕ್ಷೆ ಕ್ಷೇತ್ರದಲ್ಲಿ ಪಿ.ಹೆಚ್ಡಿ ಮಾಡಿ ಅನೇಕ ಯೋಜನೆಗಳನ್ನು ಪೂರೈಸಿದವರು. ಹೊಸ ತಂತ್ರಜ್ಞಾನ ಬಳಸಿ ಕಡಿಮೆ ವೆಚ್ಚ ಹಾಗೂ ಕಡಿಮೆ ಅವಧಿಯಲ್ಲಿ ತಡೆಗೋಡೆ ನಿರ್ಮಿಸಬಹುದೆಂದು ಸಲಹೆಯಿತ್ತರು. ಇದೇ ತಡೆಗೋಡೆ ಬಳಸಿ ಮುಂದೆ ಅದನ್ನು ಪ್ರವಾಸಿ ಆಕರ್ಷಣೆಯ ಮಡಿಕೇರಿ ಸ್ಕ್ವೇರ್ ಆಗಿ ಅಭಿವೃದ್ಧಿಪಡಿಸುವ ಬಗ್ಗೆಯೂ ಚರ್ಚಿಸಲಾಯಿತು. ಕೇರಳದ ಕಲಾ ಶಾಲೆಯ ಪ್ರಾಂಶುಪಾಲ ಪ್ರವೀಣ್ ಕುಮಾರ್ ಅವರು ಬಂದು, ಮುಂದೆ ಅದನ್ನು ಹೇಗೆ ಆಕರ್ಷಣೀಯ ಜಾಗವನ್ನಾಗಿ ನಿರ್ಮಿಸಬಹುದೆಂಬ ಬಗ್ಗೆ ಸಲಹೆ ನೀಡಿದರಲ್ಲದೆ, ಒಂದು ‘‘ಮಾಡೆಲ್’’ ಅನ್ನು ಮಡಿಕೇರಿಯ ಹೊಟೇಲ್ನಲ್ಲೇ ಕುಳಿತು ನಿರ್ಮಿಸಿ ನಗರಸಭೆಗೆ ಕೊಟ್ಟರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಾತ್ಯಕ್ಷಿಕೆ ಕೂಡ ನಡೆಯಿತು. ಕೆಲಸ ಮುಂದುವರೆಸುವಂತೆ ಹೇಳಿದ ಜಿಲ್ಲಾಧಿಕಾರಿ ಜಿಲ್ಲೆಯಿಂದ ನಿರ್ಗಮಿಸಿದರು. ನಗರಸಭೆಯಲ್ಲಿ ವಿಶೇಷ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಯಿತು. ಪರ - ವಿರೋಧ ಅಭಿಪ್ರಾಯಗಳು ಮೂಡಿ ಬಂದು ಮಣ್ಣು ಪರೀಕ್ಷೆಗೆ ನಾಗರಾಜ್ ಅವರಿಗೆ ಅವಕಾಶ ನೀಡಲಾಯಿತು. ಚಿಕ್ಕ ಜೆಸಿಬಿಯಂತಹ ಯಂತ್ರಗಳನ್ನು ಬಳಸಿ ಮಣ್ಣು ಬಿದ್ದ ಮೇಲ್ಭಾಗದಿಂದ ಎರಡು ಸ್ಥಳಗಳಲ್ಲಿ ಸುಮಾರು 110 ಅಡಿ ಆಳ ಕೊರೆದು ಸುಮಾರು 200 ಕಡೆಯ ಮಣ್ಣುಗಳನ್ನು ಸಂಗ್ರಹಿಸಿ ಮಣ್ಣು ಪರೀಕ್ಷೆ ನಡೆಸಿ ವರದಿಯನ್ನು ತಯಾರಿಸಲಾಯಿತು. ಸಡಿಲವಾಗಿರುವ ಮಣ್ಣಿನ ಪ್ರದೇಶದಲ್ಲಿ ಮಣ್ಣಿನೊಳಗೆ ಕಬ್ಬಿಣದ ಸರಳುಗಳನ್ನು ತೂರಿಸಿ ಯಂತ್ರ ಬಳಸಿ ಕಾಂಕ್ರೀಟನ್ನು ಒಳಕ್ಕೆ ಹಾಕುವದು; ಆ ಮೂಲಕ ನೂತನ ತಂತ್ರಜ್ಞಾನದಲ್ಲಿ ಮಣ್ಣಿನ ಸ್ಥಿರತೆ ಕಾಪಾಡಬಹುದೆಂದು ತಂತ್ರಜ್ಞರು ಅಭಿಪ್ರಾಯಪಟ್ಟರು.
(ಮೊದಲ ಪುಟದಿಂದ)
100 ಅಡಿ ಅಗಲ ಹಾಗೂ 90 ಅಡಿ ಎತ್ತರದ ತಡೆಗೋಡೆ ನಿರ್ಮಾಣಕ್ಕೆ ಕೇವಲ 1.25 ಕೋಟಿ ರೂಪಾಯಿ ವೆಚ್ಚವಾಗುತ್ತದೆ. 10 ವರ್ಷಗಳ ಕಾಲ ಖಾತರಿ ನೀಡುವದಾಗಿಯೂ ಬರಹದಲ್ಲಿ ಬಿ.ಎಂ.ಎಸ್. ಕಾಲೇಜಿನವರು ನಗರಸಭೆಗೆ ಅಂದಾಜು ಪಟ್ಟಿ ಸಲ್ಲಿಸಿದರು. ಕೆಲಸದ ಅವಧಿ ಕೇವಲ 60 ದಿನ ಎಂದು ಮಾರ್ಚ್ನಲ್ಲಿ ಬರಹದಲ್ಲಿ ಭರವಸೆ ನೀಡಿದರು.
ಅದೇ ವೇಳೆಯಲ್ಲಿ ನಗರಸಭೆ ಆಡಳಿತ ಅವಧಿ ಮುಗಿದು ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಮಾರ್ಚ್ನಲ್ಲಿ ನೀಡಿದ್ದ ಅಂದಾಜು ಪಟ್ಟಿ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಸತ್ಯನಾರಾಯಣರಾವ್ ಅಥವಾ ನಾಗರಾಜ್ ಇವರುಗಳನ್ನು ಕರೆಯಿಸಿ ಮಾತನಾಡುವ ಸೌಜನ್ಯವನ್ನೂ ಯಾರೂ ತೋರಲಿಲ್ಲ. ಯಾರು ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದರೋ ಗೊತ್ತಿಲ್ಲ. ಅತೀ ಕಡಿಮೆ ವೆಚ್ಚದ ಯೋಜನೆಯನ್ನು ಕೈಬಿಡಲಾಯಿತು.
ಒಂದು ತಿಂಗಳ ಹಿಂದೆ ಪ್ರವಾಸೋದ್ಯಮ ಇಲಾಖೆಯ ಇಬ್ಬರು ಇಂಜಿನಿಯರ್ಗಳು ಸ್ಥಳಕ್ಕೆ ಬಂದಿದ್ದು ಗೊತ್ತಾಗಿ ಅಲ್ಲಿ ಹೋಗಿ ಹಿಂದಿನ ವಿಚಾರಗಳನ್ನು ವಿವರಿಸಿದೆ. ದುರಹಂಕಾರದ ಆ ಅಧಿಕಾರಿಗಳು ಉತ್ತರಿಸಲೂ ಹಣ ನೀಡಬೇಕೆಂಬಂತೆ ವರ್ತಿಸಿದರು.
ಅಲ್ಲಿ ದಿಢೀರ್ ಕಾಮಗಾರಿ ಆರಂಭಗೊಂಡಿತು. ಈಜುಕೊಳದಂತೆ ಮಣ್ಣು ತೆಗೆದು ಕಾಂಕ್ರೀಟ್ ತುಂಬಿಸಲಾಗುತ್ತಿತ್ತು. ಈ ಬಗ್ಗೆ ವಿವರಣೆ ಬಯಸಿದಾಗ ಪ್ರವಾಸೋದ್ಯಮ ಇಲಾಖೆಯ ತಂತ್ರಜ್ಞಾನದಲ್ಲಿ ಕೆಲಸ ಆರಂಭಿಸುತ್ತಿರುವದಾಗಿಯೂ, ಹಿಂದಿನ ಮಳೆಹಾನಿ ಹಣ 1.04 ಕೋಟಿ ರೂಪಾಯಿಯಲ್ಲಿ ಗುಂಡಿಗೆ ಕಾಂಕ್ರೀಟ್ ತುಂಬುವ ಕೆಲಸ ಮಾತ್ರ ಸಾಧ್ಯವಿದ್ದು, ಮುಂದೆ ಹಣಕೊಟ್ಟರೆ ತಡೆಗೋಡೆ ನಿರ್ಮಿಸುವದಾಗಿಯೂ ಮಾಹಿತಿ ಲಭ್ಯವಾಯಿತು.
ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಉಪಸ್ಥಿತಿಯಲ್ಲಿ ನಗರಸಭಾ ಆಯುಕ್ತ ಮತ್ತು ಇಂಜಿನಿಯರ್ ವನಿತ ಇವರುಗಳ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದೆ. ಸುನೀಲ್ ಅವರಿಗೂ ಪೂರ್ಣ ಮಾಹಿತಿ ಇರಲಿಲ್ಲ. ಇದೀಗ ಮಾಡುತ್ತಿರುವದು ತಡೆಗೋಡೆ ನಿರ್ಮಾಣವಲ್ಲ. ತಳಪಾಯ ಎಂದೆ. ಅದಕ್ಕೆ ವಿವರಣೆ ಇತ್ತ ಇಂಜಿನಿಯರ್ ಹೌದು; ಈಗಿನ ವೆಚ್ಚದಲ್ಲಿ ತಡೆಗೋಡೆ ಸಾಧ್ಯವಾಗುವದಿಲ್ಲ; ತಳಪಾಯ ಕೆಲಸ ಮುಗಿದ ಕೂಡಲೇ ಅದರ ಬಗ್ಗೆ ಸಚಿವ ಸಾ.ರಾ. ಮಹೇಶ್ ಅವರಿಗೆ ಮಾಹಿತಿ ನೀಡಲಾಗುವದು. ಅವರು 2 ಕೋಟಿ ರೂಪಾಯಿ ನೀಡುವದಾಗಿ ಹೇಳಿದ್ದು, ಅದನ್ನು ಬಳಸಿ ತಡೆಗೋಡೆ ನಿರ್ಮಿಸಲಾಗುವದು ಎಂದರು.
ಅಂದರೆ ಒಟ್ಟು ಖರ್ಚು ಸುಮಾರು 3.04 ಕೋಟಿ ಎಂದಾಯಿತು.
1.25 ಕೋಟಿಯ ಯೋಜನೆಯನ್ನು ಏಕೆ ಬಿಟ್ಟಿರಿ ಎಂದು ಪ್ರಶ್ನಿಸಿದೆ. ಅದು ಇಲ್ಲಿಗೆ ಸೂಕ್ತವಲ್ಲ ಎಂದು ಇಂಜಿನಿಯರ್ಗಳು ವರದಿ ನೀಡಿದ್ದಾರೆ ಎಂದರು. ಕರೆಯಿಸಿ ಮಾತನಾಡಬಹುದಿತ್ತಲ್ಲ ಎಂಬುದಕ್ಕೆ ಉತ್ತರವಿರಲಿಲ್ಲ. ಪಕ್ಕದಲ್ಲಿದ್ದ ಮಾಜಿ ಸದಸ್ಯರೊಬ್ಬರು; ಹಿಂದಿನವರು ಕೊಟ್ಟಿದ್ದು ತಾತ್ಕಾಲಿಕ ತಡೆಗೋಡೆಗೆ ದರ ಎಂದು ಹೇಳಿದಾಗ 10 ವರ್ಷಕ್ಕೆ ಖಾತರಿ ನೀಡುವದು ತಾತ್ಕಾಲಿಕ ಹೇಗೆ ಎಂದು ಮರು ಪ್ರಶ್ನಿಸಿದೆ.
ನನ್ನ ಪ್ರಶ್ನೆ ಇಷ್ಟೆ
* 1.25 ಕೋಟಿಯಲ್ಲಿ ಮುಗಿಸಬಹುದಾಗಿದ್ದ ಕೆಲಸವನ್ನು ಕೈ ಬಿಟ್ಟು ಅದನ್ನು ರೂ. 3.04 ಕೋಟಿಗೆ ಏರಿಸಿದ್ದರ ಮರ್ಮವೇನು?
* 1.25 ಕೋಟಿ ಯೋಜನೆ ಕೊಟ್ಟವರನ್ನು ಕರೆಯಿಸಿ ಮಾತನಾಡುವ ಅಗತ್ಯ ಇಲ್ಲ ಎಂದು ತೀರ್ಮಾನಿಸಿದವರು ಯಾರು?
* ಸುಮಾರು 2 ಕೋಟಿ ರೂಪಾಯಿ ಹೆಚ್ಚು ಹಣ ಖರ್ಚಾಗುತ್ತಿದೆಯಲ್ಲ; ಇದು ಜನರ ತೆರಿಗೆಯ ಹಣವಲ್ಲವೇ?
* ಹೊಸದಾಗಿ ಆರಂಭಿಸಿರುವ ಕೆಲಸವನ್ನು ಮೊದಲೇ ಆರಂಭಿಸಲು ಇದ್ದ ಅಡಚಣೆಗಳು ಏನು?
* ಇನ್ನೂ ಹೆಚ್ಚುವರಿ ಬೇಕಾದ 2 ಕೋಟಿ ರೂಪಾಯಿಯನ್ನು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರು ಕೊಡುತ್ತಾರೆ ಎಂಬ ಖಾತರಿ ಏನು?
* ಬೆಂಗಳೂರಿನಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳಲ್ಲಿ ಈ ಹಣ ಸಿಗುತ್ತದೆ ಎಂಬ ನಂಬಿಕೆ ಯಾರಿಗಿದೆ?
* ಸರಕಾರದಿಂದ ಹಣ ಬಾರದಿದ್ದಲ್ಲಿ ಬೇರೆ ಏನು ವ್ಯವಸ್ಥೆ ಇದೆ?
* ಈ ಒಂದು ಪ್ರಮುಖ ಕೆಲಸದ ಬಗ್ಗೆ ಜನ ಪ್ರತಿನಿಧಿಗಳು ಯಾಕೆ ಮೌನವಾಗಿದ್ದಾರೆ?
* ಇದೆಲ್ಲದರ ನಡುವೆ ಮುಂದಿನ ಮಳೆಯಿಂದಾಗಿ ಹೆಚ್ಚಿನ ಮಣ್ಣು ಕುಸಿದು ಅನಾಹುತ ಸಂಭವಿಸಿದರೆ ಯಾರು ಹೊಣೆ?
ಉತ್ತರ ಕೊಡುವವರು ಯಾರು?
?ಜಿ. ಚಿದ್ವಿಲಾಸ್