ಮಡಿಕೇರಿ, ಜು. 21: ಕೊಡಗಿನಲ್ಲಿ ದಟ್ಟ ಮೋಡದ ನಡುವೆ ನಿನ್ನೆಯಿಂದ ಆರಂಭಗೊಂಡಿರುವ ಪುಷ್ಯ ಮಳೆಯು ಕಳೆದ 24 ಗಂಟೆಗಳಲ್ಲಿ ಆಶಾದಾಯಕವೆಂಬಂತೆ ಸುರಿಯತೊಡಗಿದೆ. ಜಿಲ್ಲೆಯ ಕೇಂದ್ರ ಸ್ಥಳ ಮಡಿಕೇರಿ ಸಹಿತ ಕೆಲವೆಡೆ ಸಣ್ಣ ಪುಟ್ಟ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು; ಆ ಕೂಡಲೇ ತೆರವುಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.ಅಲ್ಲಲ್ಲಿ ಪುಷ್ಯ ಮಳೆ ತೀವ್ರತೆಯ ಪರಿಣಾಮ ನದಿ ತೊರೆಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಗೋಚರಿಸತೊಡಗಿದ್ದು; ಹಾರಂಗಿ ಜಲಾಶಯದಲ್ಲಿ ನೀರಿನ ಒಳಹರಿವು ಏರಿಕೆಗೊಂಡು 2280 ಕ್ಯೂಸೆಕ್ಸ್ ಗೋಚರಿಸಿದೆ. ಅಲ್ಲದೆ ಕಳೆದ 24 ಗಂಟೆಗಳಲ್ಲಿ ಜಲಾಶಯದ ನೀರಿನ ಮಟ್ಟದಲ್ಲಿ ನಿನ್ನೆಗಿಂತ 2.18 ಅಡಿಗಳಷ್ಟು ಹೆಚ್ಚಳ ಕಂಡು ಬಂದಿದೆ.ತಲಕಾವೇರಿ - ಭಾಗಮಂಡಲ ವ್ಯಾಪ್ತಿಯಲ್ಲಿ ಚುರುಕುಗೊಂಡಿರುವ ಮಳೆಯಿಂದಾಗಿ ಕಾವೇರಿ ಒಡಲುವಿನ ಹರಿಯುವಿಕೆ ಏರಿಕೆಗೊಳ್ಳುವಂತಾಗಿದೆ. ಭಾಗಮಂಡಲ ಸಂಗಮ ಕ್ಷೇತ್ರದಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ರಸ್ತೆ ಸಂಪರ್ಕ ಸೇತುವೆಯ ಮಟ್ಟಕ್ಕೆ ಏರಿಕೆ ಗೋಚರಿಸಿದೆ. ಕಳೆದ ವರ್ಷ ನಾಲ್ಕು ಜೀವಗಳನ್ನು ಬಲಿ ಪಡೆದಿದ್ದ ಜೋಡುಪಾಲದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯೊಂದರ ಬಳಿ ಮಣ್ಣು ಕುಸಿದಿದ್ದು; ಖಾಸಗಿ ಟ್ಯಾಂಕರ್‍ವೊಂದರ ಚಾಲಕ ಎನ್. ವೀರೇಂದ್ರ ಎಂಬವರ ಈ ಅಪೂರ್ಣ ಮನೆಗೆ ತೆರಳುವ ದಾರಿ ಮಣ್ಣು ಮುಚ್ಚಿಕೊಂಡಿದೆ.
ಮನೆ ಮಾಲೀಕ ಹೇಳಿಕೆ : ಈ ಬಗ್ಗೆ ವೀರೇಂದ್ರ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ; ಹಾಕಲಾಗಿದ್ದ ಮಣ್ಣು ಕುಸಿದಿದ್ದು, ಹೆಚ್ಚಿನ ಅಪಾಯ ಸಂಭವಿಸಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಸರಕಾರದಿಂದ ತನಗೆ ಮಂಜೂರಾಗಿರುವ 33/4 ಸೆಂಟ್ ನಿವೇಶನ ಜಾಗ ಇದಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇವರ ಹೊಸ ಮನೆಯಿಂದ ಅನತಿ ದೂರದಲ್ಲಿ ಹಳೆಯ ಮನೆಯೊಂದು ಕಳೆದ ಮಳೆಗಾಲದಲ್ಲಿ ಹಾನಿಗೊಂಡಿದೆ. ಇನ್ನೊಂದು ಮೂಲದ ಪ್ರಕಾರ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಈ ಜಾಗ ಪೈಸಾರಿಯಾಗಿದ್ದು; ಅಲ್ಲಿ ಹೆದ್ದಾರಿ ಹಾದು ಹೋಗಿರುವ ಇಳಿಜಾರಿನಲ್ಲಿ ನಿಯಮ ಬಾಹಿರವಾಗಿ, ಮನೆಕಟ್ಟಲಾಗುತ್ತಿದೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಿಲ್ಲಾಡಳಿತಕ್ಕೆ ದೂರು ನೀಡಿರುವರೆಂದು ಗೊತ್ತಾಗಿದೆ.
ಮಣ್ಣು ಕುಸಿತ : ನಗರದ ಖಾಸಗಿ ಹಳೆಯ ಬಸ್ ನಿಲ್ದಾಣದ ಬರೆಯು ಕಳೆದ ಮುಂಗಾರು ವೇಳೆ ಕುಸಿತಗೊಂಡಿರುವ ಸ್ಥಳದಲ್ಲಿ ಇಂದು ಮತ್ತೆ ಕುಸಿದು ಜನರಲ್ಲಿ ಆತಂಕ ಮೂಡಿಸಿತು.
ಮಾಂದಲಪಟ್ಟಿ ರಸ್ತೆ : ಇನ್ನು ಮಡಿಕೇರಿಯಿಂದ ದೇವಸ್ತೂರು ಮಾರ್ಗವಾಗಿ ಮಾಂದಲಪಟ್ಟಿಗೆ ತೆರಳುವ ರಸ್ತೆಯಲ್ಲಿ ಕುಂಬುಕಾಡು ಎಂಬಲ್ಲಿ ಮಣ್ಣು ಕುಸಿತ ಉಂಟಾಗಿ; ವಾಹನಗಳ ಸಂಚಾರಕ್ಕೆ ಅಡಚಣೆ ಎದುರಾಗಿತ್ತು. ಅಂತೆಯೇ ಕಾಲೂರು - ಬಾರಿಬೆಳ್ಳಚ್ಚು ಮಾರ್ಗದಲ್ಲಿಯೂ ರಸ್ತೆಗೆ ಮಣ್ಣು ಕುಸಿದ ಪರಿಣಾಮ ಸಂಚಾರಕ್ಕೆ
(ಮೊದಲ ಪುಟದಿಂದ) ತೊಡಕು ಎದುರಾಗಿತ್ತು. ಕೊಡಗು ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಅಭಿಯಂತರ ಗವಿ ಸಿದ್ಧಯ್ಯ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಸಕಾಲದಲ್ಲಿ ಸ್ಥಳಕ್ಕೆ ಭೇಟಿ ನೀಡುವದರೊಂದಿಗೆ ಮಣ್ಣು ತೆರವುಗೊಳಿಸಲು ಕ್ರಮಕೈಗೊಂಡಿದ್ದರು.
ಅಲ್ಲದೆ 2ನೇ ಮೊಣ್ಣಂಗೇರಿಯ ಸಂಪರ್ಕ ರಸ್ತೆಯಲ್ಲಿ ಕೂಡ ಕುಸಿದಿದ್ದ ಮಣ್ಣು ತೆರವುಗೊಳಿಸಿ ಜನತೆಯ ಓಡಾಟಕ್ಕೆ ಅನುವು ಮಾಡಿಕೊಟ್ಟರು. ಮುನ್ನೆಚ್ಚರಿಕೆ ಸಲುವಾಗಿ ಏಳು ಜೆಸಿಬಿ ಯಂತ್ರಗಳ ಸಹಿತ ಹೆಚ್ಚಿನ ಸಿಬ್ಬಂದಿಯನ್ನು ತುರ್ತು ಕೆಲಸಕ್ಕೆ ನಿಯೋಜಿಸಿಕೊಳ್ಳಲಾಗಿದೆ ಎಂದು ಇಂಜಿನಿಯರ್ ಗವಿಸಿದ್ಧಯ್ಯ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು. ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ತುರ್ತು ಸಂದರ್ಭ, ಜನರಿಗೆ ತೊಂದರೆ ಆಗದಂತೆ ನಿಗಾ ವಹಿಸಲು ಸೂಚಿಸಲಾಗಿದೆ ಎಂದು ಅಧ್ಯಕ್ಷ ಬಿ.ಎ. ಹರೀಶ್ ಅವರು ಮಾಹಿತಿ ನೀಡಿದರು.