ವೀರಾಜಪೇಟೆ, ಜು. 21: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಇತ್ತೀಚೆಗೆ ಕೇಂದ್ರ ಸರಕಾರದ ಆರೋಗ್ಯ ನೀತಿ ತಂಡ ಭೇಟಿ ನೀಡಿ ಆಸ್ಪತ್ರೆಯ ಆಧುನಿಕತೆ ಹಾಗೂ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿತು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಸಮ್ಮುಖದಲ್ಲಿ ನಡೆದ ಆರೋಗ್ಯ ನೀತಿ ತಂಡದ ಸಭೆಯಲ್ಲಿ ಆಸ್ಪತ್ರೆಗೆ ಎಲ್ಲ ಆಧುನಿಕ ಸೌಲಭ್ಯಗ ಳಿದ್ದರೂ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಇದೆ.
ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆ ಯಾಗುತ್ತಿರುವದನ್ನು ಸಭೆ ಗಮನಿಸಿತು. ಈ ಆಸ್ಪತ್ರೆಗೆ ತಕ್ಷಣ ವೈದ್ಯರನ್ನು ನೇಮಕ ಮಾಡುವಂತೆ ಸರಕಾರಕ್ಕೆ ವರದಿ ಸಲ್ಲಿಸಲು ಸಭೆ ತೀರ್ಮಾನಿಸಿತು.
ಆಸ್ಪತ್ರೆಗೆ ಆಧುನಿಕ ಶಸ್ತ್ರ ಚಿಕಿತ್ಸಾ ಘಟಕವಿದ್ದರೂ ಅರಿವಳಿಕೆ ತಜ್ಞರಿಲ್ಲದೆ ರೋಗಿಗಳ ಶಸ್ತ್ರ ಚಿಕಿತ್ಸೆಗೂ ಅವಕಾಶ ವಿಲ್ಲದಂತಾಗುತ್ತಿದೆ.
ಸುಮಾರು 240 ಹಾಸಿಗೆಗಳ ಸಾಮಥ್ರ್ಯ ಹೊಂದಿರುವ ಆಸ್ಪತ್ರೆಗೆ ಕನಿಷ್ಟ 14 ವೈದ್ಯರುಗಳು ಕಾರ್ಯ ನಿರ್ವಹಿಸಬೇಕಿದ್ದು, ಕೇವಲ 6 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವಿಶ್ವನಾಥ್ ಸಿಂಪಿ ಸಭೆಗೆ ತಿಳಿಸಿದರು.
ಸಭೆಯ ಮೊದಲು ಕೇಂದ್ರದ ಆರೋಗ್ಯ ನೀತಿ ತಂಡ ಸಾರ್ವಜನಿಕ ಆಸ್ಪತ್ರೆಯ ಆಧುನಿಕ ಶಸ್ತ್ರ ಚಿಕಿತ್ಸಾ ಘಟಕ, ಶಸ್ತ್ರ ಚಿಕಿತ್ಸಾ ಉಪಕರಣಗಳು, ಡಯಾಲಿಸೆಸ್ ಘಟಕ, ತುರ್ತು ನಿಗಾ ಘಟಕ ಇತರ ಎಲ್ಲ ವಾರ್ಡ್ಗಳನ್ನು ಖುದ್ದು ಪರಿಶೀಲಿಸಿತು.
ಕೇಂದ್ರದ ಆರೋಗ್ಯ ನೀತಿ ತಂಡದ ಮಧು ಶ್ರೀನಿವಾಸ್ ನೇತೃತ್ವದಲ್ಲಿ ಡಾ: ನಿಸರ್ಗ, ಡಾ:ಆದರ್ಶ್ ಹಾಗೂ ಡಾ: ಹರ್ಷಿತ್ ಪಾಲ್ಗೊಂಡಿದ್ದರು. ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜು ಸಭೆಯಲ್ಲಿ ಹಾಜರಿದ್ದರು ಕೇಂದ್ರದ ಆರೋಗ್ಯ ನೀತಿ ತಂಡ ಕರ್ನಾಟಕ ರಾಜ್ಯದಲ್ಲಿ ನೇರವಾಗಿ ಭೇಟಿ ಮಾಡಿ ವಿವಿಧ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮಣಿಪಾಲ ಆಸ್ಪತ್ರೆ, ಮೈಸೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯನ್ನು ಆಯ್ಕೆ ಮಾಡಿತ್ತು ಎಂದು ಮಾಹಿತಿ ಲಭಿಸಿದೆ.